
ಬೆಂಗಳೂರು(ಮಾ.23): ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನೆರೆಯ ತಮಿಳುನಾಡು ವಿಧಾನಸಭೆಯು ಕೈಗೊಂಡಿರುವ ನಿರ್ಣಯಕ್ಕೆ ಕರ್ನಾಟಕದ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದ್ದು, ತಮಿಳುನಾಡು ನಿರ್ಣಯ ವಿರೋಧಿಸಿ ಬುಧವಾರ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸುವ ನಿರೀಕ್ಷೆ ಇದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಗದಾಪ್ರಹಾರವನ್ನು ಸಹಿಸುವುದಿಲ್ಲ. ತಮಿಳುನಾಡು ನಡೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಕಾನೂನು ತಜ್ಞರ ಸಲಹೆ ಪಡೆದು ಬುಧವಾರ ಖಂಡನಾ ನಿರ್ಣಯ ಮಂಡಿಸಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತಮಿಳುನಾಡು ವಿರುದ್ಧ ನಾಯಕರ ಕೆಂಡ, ಮೇಕೆದಾಟು ಯೋಜನೆ ನಮ್ಮದು!
ಮಂಗಳವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್ ಪ್ರಸ್ತಾಪದ ವೇಳೆ ತಮಿಳುನಾಡು ವಿರುದ್ಧ ಪಕ್ಷಾತೀತವಾಗಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರರು ತಮಿಳುನಾಡು ನಡೆಯನ್ನು ಕಟುವಾಗಿ ಖಂಡಿಸಿದರು.
ಯೋಜನೆ ಮಾಡಿಯೇ ತೀರುತ್ತೇವೆ:
ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಗದಾಪ್ರಹಾರ ಸಹಿಸುವುದಿಲ್ಲ. ತಮಿಳುನಾಡು ನಡೆಯು ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿದೆ. ಯೋಜನೆಯನ್ನು ಮಾಡಿಯೇ ತಿರುತ್ತೇವೆ ಎಂದು ಗಟ್ಟಿದನಿಯಲ್ಲಿ ಪ್ರಕಟಿಸಿದರು.
Mekedatu project ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ ಎಂದ HDK
ಕೇಂದ್ರ ಪರಿಸರ ಇಲಾಖೆಯಿಂದ ಮಾತ್ರ ಅನುಮತಿ ಪಡೆಯಬೇಕಾಗಿದ್ದು, ತ್ವರಿತವಾಗಿ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜಕೀಯವಾಗಿ ಕ್ಯಾತೆ ತೆಗೆಯುತ್ತಿರುವ ತಮಿಳುನಾಡಿನ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಕಾನೂನು ತಜ್ಞರ ಸಲಹೆ ಪಡೆದು ಬುಧವಾರ ಖಂಡನಾ ನಿರ್ಣಯ ಮಂಡಿಸಲಾಗುವುದು ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಸಾಮಾನ್ಯ ವರ್ಷದಲ್ಲಿ 177 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತದೆ. ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ಇದರಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲಿಯೂ ಅನ್ಯಾಯವಾಗುವುದಿಲ್ಲ. ರಾಜಕೀಯ ಕಾರಣಕ್ಕಾಗಿ ಕ್ಯಾತೆ ತೆಗೆಯುತ್ತಿದೆ. ತಮಿಳುನಾಡು ಕಾವೇರಿ ವಿಚಾರದಲ್ಲಿ ಮೊದಲಿನಿಂದಲೂ ಅನಗತ್ಯವಾಗಿ ಅಡ್ಡಗಾಲು ಹಾಕುತ್ತಿದೆ. ನಮ್ಮ ನೀರಿನ ಹಕ್ಕನ್ನು ನಾವು ಪಡೆದುಕೊಳ್ಳುತ್ತಿರುವುದಕ್ಕೆ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ತಮಿಳುನಾಡು ನಡೆಯ ವಿರುದ್ಧ ಹರಿಹಾಯ್ದರು.
ಮೇಕೆದಾಟು ಯೋಜನೆಯ ಕುರಿತು ಪ್ರಬಲವಾಗಿ ಕೇಂದ್ರದ ಮುಂದೆ ಮಂಡಿಸಿ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುತ್ತೇವೆ. ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿಗೆ ನಾಲ್ಕು ಟಿಎಂಸಿ ಕುಡಿಯುವ ನೀರು ನೀಡಲು ಮಾತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತಮಿಳುನಾಡು ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಈ ಮೊದಲು ತಮಿಳುನಾಡಿಗೆ ರೈಲಿನಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ ವೇಳೆ ತೆಲುಗು ಗಂಗಾ ಯೋಜನೆಯಡಿಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಮಾನವೀಯತೆಯ ಅಧಾರದ ಮೇಲೆ ನೀರು ಒದಗಿಸಿವೆ. ಇದನ್ನೆಲ್ಲಾ ತಮಿಳುನಾಡು ಮರೆತಿರಬಹುದು ಎಂದು ಕಿಡಿಕಾರಿದರು.
ನಾವು ಅಶಕ್ತರಲ್ಲ- ಮಾಧುಸ್ವಾಮಿ:
ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಯೋಜನೆಯಡಿಯಲ್ಲಿ ಕೃಷಿಗೆ ನೀರನ್ನು ಬಳಕೆ ಮಾಡುವುದಿಲ್ಲ. ತಮಿಳುನಾಡು ಮತ್ತು ರಾಜ್ಯದ ನಡುವೆ ನೀರಿನ ವಿಚಾರದಲ್ಲಿ ವಿವಾದ ಮುಗಿದಿದೆ ಎಂದು ಭಾವಿಸಿದರೂ ಸಮಸ್ಯೆಯನ್ನು ಜೀವಂತವಾಗಿಡುವ ಕೆಲಸವನ್ನು ತಮಿಳುನಾಡು ಮಾಡುತ್ತಿರುವುದು ಖಂಡನೀಯ. ನಾವು ಸುಮ್ಮನಿದ್ದೇವೆ ಎಂದ ಮಾತ್ರಕ್ಕೆ ಅಶಕ್ತರಲ್ಲ. ತಮಿಳುನಾಡು ಮಾಡುತ್ತಿರುವ ಪ್ರಚೋದನೆಯನ್ನು ಸಹಿಸುವುದಿಲ್ಲ ಎಂದು ಹೇಳಿದರು.
ತ.ನಾಡು ಒಪ್ಪಿಗೆ ಬೇಕಿಲ್ಲ- ಎಚ್‌ಡಿಕೆ:
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿರುವ ನಿರ್ಣಯಕ್ಕೆ ಯಾವುದೇ ಕಿಮ್ಮತ್ತು ಇಲ್ಲ. ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ರಾಜ್ಯವು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವ ನ್ಯಾಯಬದ್ಧ ಹಕ್ಕು ಹೊಂದಿದೆ. ಈ ಹಿಂದೆ ಗಡಿ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಲು ನಮ್ಮ ತಕರಾರು ಇಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದ್ದಾರೆ. ರಾಜ್ಯಕ್ಕೆ ಬೇಕಿರುವುದು ಕೇಂದ್ರ ಪರಿಸರ ಇಲಾಖೆ ಅನುಮೋದನೆಯೇ ಹೊರತು ತಮಿಳುನಾಡಿನ ಒಪ್ಪಿಗೆಯಲ್ಲ ಎಂದು ಹೇಳಿದರು.
ತಮಿಳುನಾಡು ನಿರ್ಣಯ ಕಾನೂನುಬಾಹಿರ: ಸಿದ್ದು
ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ರಾಜಕೀಯವಾಗಿ ಕ್ಯಾತೆ ತೆಗೆದು ಕೈಗೊಂಡಿರುವ ನಿರ್ಣಯ ಕಾನೂನು ಬದ್ಧವಾಗಿಲ್ಲ. ಆ ನಿರ್ಣಯಕ್ಕೆ ಕಾನೂನಾತ್ಮಕವಾಗಿ ಹಕ್ಕಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವುದು ಕಾನೂನು ಬಾಹಿರ. ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಬದ್ಧವಾಗಿದೆ. ಆದರೂ ಕಾನೂನುಬಾಹಿರವಾಗಿ ಟೀಕಿಸುತ್ತಿದೆ. ಸಂವಿಧಾನಬದ್ಧವಾಗಿ ನಮಗೆ ಬೇಕಾದ ನೀರನ್ನು ಬಳಸಿಕೊಳ್ಳಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ನಾಡು, ನುಡಿ, ನೆಲ, ಜಲ ವಿಚಾರಕ್ಕೆ ಬಂದರೆ ಯಾವುದೇ ರಾಜಕೀಯ ಮಾಡುವುದಿಲ್ಲ. ನಾವೆಲ್ಲರೂ ಒಂದಾಗಿ ತಮಿಳುನಾಡು ನಡೆಯನ್ನು ಖಂಡಿಸುತ್ತೇವೆ. ರಾಜ್ಯದ ಹಿತವೇ ನಮಗೆ ಮುಖ್ಯ. ಸರ್ವಪಕ್ಷದ ನಿಯೋಗವು ದೆಹಲಿಗೆ ತೆರಳಿ ಪ್ರಧಾನಿ ಮತ್ತು ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.
ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ
ತಮಿಳುನಾಡಿನ ನಿರ್ಣಯವನ್ನು ಕೇಂದ್ರವಾಗಲಿ, ನಾವಾಗಲಿ ಒಪ್ಪುವ ಅಗತ್ಯ ಇಲ್ಲ. ಅದರ ನಿರ್ಣಯಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ತಕ್ಷಣ ದೆಹಲಿಗೆ ಹೋಗಿ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಪರಿಸರ ಇಲಾಖೆಯ ಅನುಮತಿ ಪಡೆಯಬೇಕು. ನೆಲ-ಜಲ, ಭಾಷೆ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ಮೇಕೆದಾಟು ವಿಚಾರದಲ್ಲಿ ನಾವು ತಮಿಳುನಾಡಿನ ಮುಲಾಜಿನಲ್ಲಿಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ