ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮಾತ್ರ ಬಹುಬೇಡಿಕೆಯ ವಿವಿ ಎನಿಸಿದೆ. ವಿದ್ಯಾರ್ಥಿಗಳಿಗೇನೂ ಕೊರತೆಯಿಲ್ಲ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.14): ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮಾತ್ರ ಬಹುಬೇಡಿಕೆಯ ವಿವಿ ಎನಿಸಿದೆ. ವಿದ್ಯಾರ್ಥಿಗಳಿಗೇನೂ ಕೊರತೆಯಿಲ್ಲ. ಆದರೆ, ಕಾಯಂ ಅಧ್ಯಾಪಕರು, ಸಿಬ್ಬಂದಿಯದ್ದೇ ದೊಡ್ಡ ಕೊರತೆ. ವಿದ್ಯಾರ್ಥಿಗಳ ಶುಲ್ಕದಿಂದಲೇ ವಿವಿಯನ್ನು ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿದೆ. ಕಾನೂನು ವಿಷಯಕ್ಕಾಗಿ ವಿಶ್ವವಿದ್ಯಾಲಯ ಮಾಡಬೇಕು ಎಂಬ ಉದ್ದೇಶದಿಂದ 2009ರಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯೆ ಆರಂಭವಾದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ನಿರೀಕ್ಷೆಗೆ ತಕ್ಕಂತೆ ಬೆಳೆಯುತ್ತಿದೆ. ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹೀಗಾಗಿ ರಾಜ್ಯದಲ್ಲೇ ಅತ್ಯಂತ ಬೇಡಿಕೆಯ ವಿಶ್ವವಿದ್ಯಾಲಯ ಎನಿಸಿದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪ್ರವೇಶಕ್ಕೆ ಹಾತೊರೆಯುತ್ತಾರೆ. ಆದರೆ, ಪ್ರವೇಶ ಸಿಗುವುದು ನೂರರ ಲೆಕ್ಕದಲ್ಲಿ ಮಾತ್ರ.
ಏನೇನಿದೆ?: ಈ ವಿವಿಯಲ್ಲಿ 5 ವರ್ಷದ ಬಿಎ ಎಲ್‌ಎಲ್‌ಬಿ (ಆನರ್ಸ್), ಬಿ.ಕಾಂ, ಎಲ್‌ಎಲ್‌ಬಿ (ಆನರ್ಸ್), ಬಿಬಿಎ ಎಲ್‌ಎಲ್‌ಬಿ (ಆನರ್ಸ್), 2 ವರ್ಷದ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನೆಗಳು ನಡೆಯುತ್ತಿವೆ. ಎಲ್ಲ ವಿಭಾಗ ಸೇರಿ ಬರೋಬ್ಬರಿ 1,200 ವಿದ್ಯಾರ್ಥಿಗಳಿದ್ದಾರೆ. ಮೊದಲು 900 ವಿದ್ಯಾರ್ಥಿಗಳಿದ್ದರು. ಬೇಡಿಕೆ ಹೆಚ್ಚಿದ ಕಾರಣ ಪ್ರತಿ ವಿಭಾಗದಲ್ಲೂ ಮತ್ತೆರಡು ಸೆಕ್ಷನ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಸಂಖ್ಯೆ 1,200ಕ್ಕೇರಿದೆ.
ಗದಗ ಗ್ರಾಮೀಣ ವಿವಿಗೆ ಸಾರಥಿಯೂ ಇಲ್ಲ, ದುಡ್ಡೂ ಇಲ್ಲ: ಸರ್ಕಾರದಿಂದ ಅಲ್ಪಸ್ವಲ್ಪ ಅನುದಾನ
ಬರೀ 10 ಜನ ಕಾಯಂ: ವಿವಿಯಲ್ಲಿ 50 ಮಂದಿ ಬೋಧಕ ಸಿಬ್ಬಂದಿ ಇದ್ದು, ಅದರಲ್ಲಿ 10 ಮಂದಿ ಮಾತ್ರ ಕಾಯಂ ಅಧ್ಯಾಪಕರು. ಇನ್ನುಳಿದ 10 ಮಂದಿ ತಾತ್ಕಾಲಿಕ ಬೋಧಕರು, 30 ಜನ ಅತಿಥಿ ಉಪನ್ಯಾಸಕರಿದ್ದಾರೆ. ಈ ವರ್ಷದಿಂದ ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವುದರಿಂದ ಮತ್ತೆ 20 ಬೋಧಕ ಸಿಬ್ಬಂದಿ ಬೇಕಾಗುತ್ತದೆ. ಅಧ್ಯಾಪಕರ ನೇಮಕಾತಿ ಮಾಡಲು ಅನುಮತಿ ನೀಡಿ ಎಂದು ಸರ್ಕಾರ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದುಂಟು. ಆದರೆ, ಅಲ್ಲಿಂದ ಅನುಮತಿ ಮಾತ್ರ ಸಿಗುತ್ತಲೇ ಇಲ್ಲ ಎನ್ನುತ್ತಾರೆ ವಿವಿಯ ಅಧಿಕಾರಿಗಳು. ಇನ್ನು 150 ಬೋಧಕೇತರ ಸಿಬ್ಬಂದಿ ಇದ್ದಾರೆ. ಆದರೆ, ಯಾರೊಬ್ಬರೂ ಕಾಯಂ ನೌಕರರಲ್ಲ. ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಅನುದಾನ: ಕಾನೂನು ವಿಶ್ವವಿದ್ಯಾಲಯದ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠವೆಂದರೂ ₹15-16 ಕೋಟಿ ಬೇಕಾಗುತ್ತದೆ. ಸರ್ಕಾರದಿಂದ ವೇತನಾನುದಾನ ಬಿಟ್ಟರೆ ಅಭಿವೃದ್ಧಿಗೆಂದು ಯಾವುದೇ ಅನುದಾನ ಬರುತ್ತಿಲ್ಲ. ಇದರ ವ್ಯಾಪ್ತಿಯಲ್ಲಿ 130 ಸಂಯೋಜಿತ ಕಾಲೇಜುಗಳಿವೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ವಿವಿಯಲ್ಲಿ ಪ್ರತಿ ವಾರಕ್ಕೊಂದರಂತೆ ಚರ್ಚಾಕೂಟ, ಕಾರ್ಯಾಗಾರ, ಉಪನ್ಯಾಸ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವರ್ಷಕ್ಕೆ ಕನಿಷ್ಠವೆಂದರೂ 50- 60 ಕಾರ್ಯಕ್ರಮಗಳು ನಡೆಯುತ್ತವೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಹೆಚ್ಚಾಗಿ ಅತಿಥಿಗಳಾಗಿರುತ್ತಾರೆ. ಈ ಕಾರ್ಯಕ್ರಮ ಸೇರಿ ವಿವಿ ನಿರ್ವಹಣೆ ಮಾಡುವುದು ವಿದ್ಯಾರ್ಥಿಗಳ ಶುಲ್ಕದಿಂದಲೇ ಎಂಬುದು ವಿಶೇಷ.
ಕೆಫೆಟೇರಿಯಾ ಇಲ್ಲ: ಇಷ್ಟು ದೊಡ್ಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ, ಅಧ್ಯಾಪಕರ, ಬೋಧಕೇತರ ಸಿಬ್ಬಂದಿ ಹೊಟ್ಟೆ ತುಂಬಿಸುವಂಥ ಕೆಫೆಟೇರಿಯಾ ಇಲ್ಲದಿರುವುದು ದೊಡ್ಡ ಕೊರತೆ. ಕೆಫೆಟೇರಿಯಾ ನಿರ್ಮಾಣಕ್ಕೆ ಈಗಷ್ಟೇ ಅನುಮೋದನೆ ಸಿಕ್ಕಿದ್ದು, ನಿರ್ಮಿಸಬೇಕಿದೆ. ಸ್ವಂತ ಕಟ್ಟಡವಿದೆ. ಆಡಳಿತ ಭವನದ ನಿರ್ಮಾಣ ಇದೀಗ ನಡೆದಿದೆ. ಗ್ರಂಥಾಲಯ, ಅತಿಥಿಗೃಹ ನಿರ್ಮಾಣಕ್ಕೆ ಈಗ ಅನುಮೋದನೆ ಸಿಕ್ಕಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಅನುದಾನ ಇಲ್ಲ: ರಾಜ್ಯ ಬಜೆಟ್ ಮಂಡನೆಗೂ ಮುನ್ನ ₹120 ಕೋಟಿ ಬೇಡಿಕೆ ಇಟ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತಂತೆ. ಆದರೆ ಸರ್ಕಾರ ಅನುದಾನ ನೀಡಿಲ್ಲ. ಕಳೆದ ಎರಡು ವರ್ಷದಿಂದ ವಿವಿಗೆ ನಯಾಪೈಸೆ ಅನುದಾನ ಸಿಕ್ಕಿಲ್ಲ. ಇನ್ನಾದರೂ ಕಾಯಂ ಅಧ್ಯಾಪಕರು, ನೌಕರರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಜತೆಗೆ ಪ್ರಗತಿಗೆ ಅನುದಾನ ನೀಡಬೇಕೆಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ನಿತ್ಯ ಸಂವಿಧಾನ ಪೀಠಿಕೆ ಪಠಣ: ಪ್ರಾರ್ಥನೆ ಎನ್ನುವುದು ಹೈಸ್ಕೂಲ್‌ಗೆ ಮುಕ್ತಾಯವಾಗುತ್ತದೆ. ಯಾವುದೇ ಕಾಲೇಜು ಆಗಲಿ, ವಿವಿಗಳಲ್ಲಾಗಲಿ ಪ್ರಾರ್ಥನೆ ನೋಡಲು ಸಿಗುವುದಿಲ್ಲ. ಆದರೆ, ಇದಕ್ಕೆ ಅಪವಾದವೆಂಬಂತೆ ಇಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಜತೆಗೆ ಪ್ರಾರ್ಥನೆ ವೇಳೆ ಸಂವಿಧಾನದ ಪೀಠಿಕೆಯ ಪಠಣವೂ ನಡೆಯುತ್ತಿರುವುದು ವಿಶೇಷ. ಕಳೆದ ಏಳೆಂಟು ವರ್ಷಗಳಿಂದ ವಾರದಲ್ಲಿ ಒಂದು ದಿನ ವಿದ್ಯಾರ್ಥಿಗಳು ಖಾದಿ ಬಟ್ಟೆ ಧರಿಸುತ್ತಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಪರಂಪರೆ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಇನ್ನೂ ಬೇಸ್ ವಿವಿಗಿಲ್ಲ ಪೂರ್ಣಾವಧಿ ಕುಲಪತಿ: ಶೋಧನಾ ಸಮಿತಿಯಿಂದ 3 ಹೆಸರು ಶಿಫಾರಸು
ಇಲ್ಲಿ 10 ಜನ ಮಾತ್ರ ಕಾಯಂ ಉಪನ್ಯಾಸಕರು. ಉಳಿದ 40ರಲ್ಲಿ 30 ಜನ ಅತಿಥಿ ಉಪನ್ಯಾಸಕರು, 10 ಜನ ತಾತ್ಕಾಲಿಕ ಉಪನ್ಯಾಸಕರು. ಬೋಧಕೇತರ ಸಿಬ್ಬಂದಿ ಪೈಕಿ ಒಬ್ಬರೇ ಒಬ್ಬರೂ ಕಾಯಂ ಇಲ್ಲ. ವಿವಿಯನ್ನು ವಿದ್ಯಾರ್ಥಿಗಳ ಫೀಸ್‌ನಿಂದಲೇ ನಿರ್ವಹಿಸಲಾಗುತ್ತಿದೆ.
-ಡಾ। ಸಿ.ಬಸವರಾಜು, ಕುಲಪತಿ, ಕಾನೂನು ವಿವಿ.