ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕ ಕಡಿತ: ರಸ್ತೆ ಮೇಲೆ ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ

By Sathish Kumar KHFirst Published Jul 24, 2023, 2:47 PM IST
Highlights

ರಾಜ್ಯದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ರಸ್ತೆಯಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕ್ಷೇತ್ರಕ್ಕೆ ಹೋಗಲು ಇರುವ ರಸ್ತೆ ಸಂಪರ್ಕ ಕಡಿತಗೊಂಡಿದೆ. 

ಮಂಗಳೂರು (ಜು.24): ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪ್ರವಾಸಿಗರು ಮತ್ತು ಸುಬ್ರಹ್ಮಣ್ಯಸ್ವಾಮಿ ಭಕ್ತರು ದೇಗುಲಕ್ಕೆ ತೆರಳಲು ಪರದಾಡುವಂತಾಗಿದೆ.

ಕುಕ್ಕೆಯಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ರಸ್ತೆ ಸಂಪರ್ಕ ಬಂದ್ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸಲು ಸ್ಥಳೀಯ ಗ್ರಾಮಸ್ಥರ ಪರದಾಡುವಂತಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಪರ್ವತಮುಖಿ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ರಸ್ತೆಯಲ್ಲಿ ಎದೆ ಮಟ್ಟಕ್ಕೆ ಕುಮಾರಧಾರ ಮತ್ತು ದರ್ಪಣ ತೀರ್ಥ ನದಿಯ ನೀರು ಹರಿಯುತ್ತಿದೆ. ಸುಬ್ರಹ್ಮಣ್ಯ ಸಂಪರ್ಕ ಸಾಧ್ಯವಾಗದೇ ದ್ವೀಪದಂಥ ಸ್ಥಿತಿ‌ ನಿರ್ಮಾಣವಾಗಿದೆ. ಈ ರಾಜ್ಯ ಹೆದ್ದಾರಿಯ ನಾಲ್ಕೈದು ಕಡೆ ಮುಳುಗಡೆ ಆಗ್ತಿದೆ. ಕ್ಷಣ ಕ್ಷಣಕ್ಕೂ ನೀರು ಹೆಚ್ಚಾಗ್ತಾ ಇದ್ದು, ವಾರಗಳ ಕಾಲ ಸಮಸ್ಯೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ವಿಸ್ತರಣೆ ಮಾಡಿ: ಸರ್ಕಾರಕ್ಕೆ ಬಸ್‌ ಮಾಲೀಕರ ಮನವಿ

ಕುಕ್ಕೆ ಸಂಪರ್ಕದ ಎಲ್ಲ ರಸ್ತೆಗಳಲ್ಲಿಯೂ ನೀರು ಸಂಗ್ರಹ: ಇನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆಯಲ್ಲಿ ಬಸ್, ಕಾರು ಸೇರಿ ಯಾವುದೇ ವಾಹನಗಳು ಹೋಗಲು ಆಗಲ್ಲ. ಪಕ್ಕದ ಗುಡ್ಡ ಹತ್ತಿ ಹೋದರೂ ದರ್ಪಣ ತೀರ್ಥ ಬಳಿ ಮತ್ತೆ ನೀರು ನಿಲ್ಲುತ್ತಿದೆ. ನಿತ್ಯದ ವಸ್ತುಗಳನ್ನು ತರಲು ಕೂಡ ಹೋಗಲು ಆಗ್ತಿಲ್ಲ. ಸುತ್ತಿಬಳಸಿ 18 ಕಿ.ಮೀ ಸುತ್ತಿ ಸುಬ್ರಹ್ಮಣ್ಯ ಹೋಗಬೇಕು. ಆದರೆ, ಮತ್ತೊಂದು ಭಾಗದಲ್ಲಿ ನೀರು ಹೆಚ್ಚಾದರೆ ಆ ರಸ್ತೆ ಕೂಡ ಬಂದ್ ಆಗುತ್ತದೆ. ನೀರು ಹೆಚ್ಚಾಗುತ್ತಿರುವುದರಿಂದ ರಸ್ತೆ ಭಾಗ ಕುಸಿಯೋ ಭೀತಿ ಕೂಡ ಎದುರಾಗಿದೆ. 

ಕೇರಳ ಭಾಗದಿಂದ ಬರುವವರಿಗೂ ಸಂಕಷ್ಟ ತಪ್ಪಿದ್ದಲ್ಲ:  ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಸುರೀತಿರೋ ಹಿನ್ನೆಲೆಯಲ್ಲಿ ಕುಮಾರಧಾರ ನದಿ ಬೋರ್ಗರೆದು ಹರಿಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ- ಪುತ್ತೂರು- ಮಂಜೇಶ್ವರ ರಸ್ತೆ ಸಂಪೂರ್ಣ ಬಂದ್ ಆಗಿದೆ. ರಸ್ತೆ ಮೇಲೆ 7-8 ಅಡಿಯಷ್ಟು ನೀರು ಹರಿಯುತ್ತಿದೆ. ಇನ್ನು ಪೊಲೀಸರು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿದ್ದಾರೆ. ಸ್ಥಳೀಯ ಸಿಬ್ಬಂದಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಡಿದುಕೊಂಡಿದ್ದಾರೆ. ಕುಕ್ಕೆಗೆ ಸಂಪರ್ಕ ರಸ್ತೆ ಬಂದ್ ಆಗಿ ಸ್ಥಳೀಯರು ಹಾಗೂ ಭಕ್ತರಿಗೆ ಸಂಕಷ್ಟ ಎದುರಾಗಿದೆ. ಕೇರಳ ಹಾಗೂ ಪುತ್ತೂರು ಭಾಗದಿಂದ ಬರೋರಿಗೆ ಸಂಕಷ್ಟ ಎದುರಾಗಿದೆ. 

ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ನೀರುಪಾಲು: ದೃಶ್ಯ ಮೊಬೈಲ್‌ನಲ್ಲಿ ಸೆರೆ

ಪದವಿ ವಿದ್ಯಾರ್ಥಿಗಳಿಗೆ ಫೇಲಾಗುವ ಆತಂಕ: ಸುಬ್ರಹ್ಮಣ್ಯದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಪದವಿ ವಿದ್ಯಾರ್ಥಿಗಳ ಸಂಚಾರ ಮಾಡುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಕಾಲೇಜುಗಳಿಗೆ ರಜೆಯನ್ನು ನೀಡಿಲ್ಲ. ಇದೇ ಸಂದರ್ಭದಲ್ಲಿ ಪದವಿ ತರಗತಿಗಳ ಸೆಪಮಿಸ್ಟರ್‌ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಅಪಾಯಕಾರಿಯಾಗಿ ಹರಿಯುವ ನದಿಯನ್ನು ದಾಟಿಕೊಂಡು ಕಾಲೇಜುಗಳಿಗೆ ಹೋಗಿ ಪರೀಕ್ಷೆ ಬರೆಯುವಂತಾಗಿದೆ. ಪ್ರಸ್ತುತ ಮಂಗಳೂರು ಯುನಿವರ್ಸಿಟಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಭವಿಷ್ಯದ ಆತಂಕ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರಗಳತ್ತ ಬರುತ್ತಿದ್ದಾರೆ. ಇನ್ನು ಕೊಡಗು ಜಿಲ್ಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ಮುಂದೂಡಲಾಗಿದೆ. 

click me!