ಎಚ್​.ಡಿ.ಕುಮಾರಸ್ವಾಮಿ ವಿರುದ್ಧದ ಮಹಿಳಾ ಆಯೋಗ ನೋಟಿಸ್​ಗೆ ಹೈಕೋರ್ಟ್‌ ತಡೆ

By Kannadaprabha NewsFirst Published Apr 20, 2024, 11:35 AM IST
Highlights

ಕಾಂಗ್ರೆಸ್‌ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪುತ್ತಿದ್ದಾರೆಂದು ಹೇಳಿಕೆ ನೀಡಿರುವ ಸಂಬಂಧ ವಿವರಣೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ಜಾರಿ ಮಾಡಿದ್ದ ಶೋಕಾಸ್‌ ನೋಟಿಸ್​ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಬೆಂಗಳೂರು (ಏ.20): ಕಾಂಗ್ರೆಸ್‌ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪುತ್ತಿದ್ದಾರೆಂದು ಹೇಳಿಕೆ ನೀಡಿರುವ ಸಂಬಂಧ ವಿವರಣೆ ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಮಹಿಳಾ ಆಯೋಗ ಜಾರಿ ಮಾಡಿದ್ದ ಶೋಕಾಸ್‌ ನೋಟಿಸ್​ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಆಯೋಗ ಜಾರಿಗೊಳಿಸಿರುವ ನೋಟಿಸ್​ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಈ ಆದೇಶ ಮಾಡಿದೆ. ಜೊತೆಗೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರಿಗೆ ತುರ್ತು ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. 

ವಿಚಾರಣೆ ವೇಳೆ ಕುಮಾರಸ್ವಾಮಿ ಪರ ವಕೀಲ ಎ.ವಿ.ನಿಶಾಂತ್​, ಮಹಿಳಾ ಆಯೋಗಕ್ಕೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅಲ್ಲದೆ, ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನೋಟಿಸ್​ ಜಾರಿ ಮಾಡಬೇಕಾದಲ್ಲಿ ಆಯೋಗದ ಕಾರ್ಯದರ್ಶಿಗಳ ಮೂಲಕ ಜಾರಿ ಮಾಡಬೇಕು. ಆದರೆ, ಪ್ರಸ್ತುತ ಪ್ರಕರಣದಲ್ಲಿ ಆಯೋಗದ ಅಧ್ಯಕ್ಷರು ನೋಟಿಸ್​ ಜಾರಿಗೊಳಿಸಿದ್ದಾರೆ. ನೋಟಿಸ್​ ತಲುಪಿದ ಏಳು ದಿನಗಳಲ್ಲಿ ತಮ್ಮ ಮುಂದೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನೋಟಿಸ್‌ನಲ್ಲಿ ಅರ್ಜಿದಾರರಿಗೆ ಸೂಚಿಸಿದ್ದಾರೆ. ಅಧ್ಯಕ್ಷರು ಈ ರೀತಿ ನಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ನೋಟಿಸ್​ ರದ್ದುಪಡಿಸಬೇಕು ಎಂದು ಕೋರಿದರು.

ಪ್ರಕರಣದ ವಿವರ: ಏ.13ರಂದು ತುರುವೇಕೆರೆಯಲ್ಲಿ ಎನ್​ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಎಚ್‌.ಡಿ. ಕುಮಾರಸ್ವಾಮಿ, ‘ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ನಮ್ಮ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದು, ಹಳ್ಳಿಯ ಹೆಣ್ಣು ಮಕ್ಕಳ ಬದುಕು ಏನಾಗಬೇಕು ಎಂಬುದರ ಕುರಿತಾಗಿ ಯೋಚನೆ ಮಾಡಬೇಕಾಗಿದೆ. ಅವರಿಗೆ ಗ್ಯಾರಂಟಿ ಬಿಟ್ಟರೆ ಬೇರೇನಿಲ್ಲಾ’ ಎಂದು ಹೇಳಿಕೆ ನೀಡಿದ್ದರು.

ಕಾಂಗ್ರೆಸ್‌ದು ಕುಟುಂಬ ರಾಜಕಾರಣ ಆದರೆ ಬಿಎಸ್‌ವೈ, ಗೌಡ್ರದ್ದು?: ಸಚಿವ ಕೆ.ಜೆ.ಜಾರ್ಜ್

ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ಆಯೋಗದ ಅಧ್ಯಕ್ಷರು ಏ. 15ರಂದು ಕುಮಾರಸ್ವಾಮಿ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದರು. ನೋಟಿಸ್‌ ತಲುಪಿದ ಏಳು ದಿನಗಳಲ್ಲಿ ತಮ್ಮ ಮುಂದೆ ಹಾಜರಾಗಿ ಹೇಳಿಕೆಗೆ ವಿವರಣೆ ನೀಡಬೇಕೆಂದು ಸೂಚಿಸಿದ್ದರು. ನೋಟಿಸ್‌ ರದ್ದುಪಡಿಸುವಂತೆ ಕೋರಿ ಕುಮಾರಸ್ವಾಮಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

click me!