
ಬೆಂಗಳೂರು (ಜು.9): ವೈಯಕ್ತಿಕ ಹಿತಾಸಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವುದು ಮೇಲ್ನೋಟಕ್ಕೆ ಸಾಬೀತಾದರೆ ಅರ್ಜಿದಾರರಿಗೆ ಕನಿಷ್ಠ 50 ಸಾವಿರ ರು. ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕೆಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಅರ್ಜಿದಾರರ ವೈಯಕ್ತಿಕ ಹಿತಾಸಕ್ತಿಯಿರುವ ಬಗ್ಗೆ ಅನುಮಾನ ಮೂಡಿದ ಮತ್ತು ಅರ್ಜಿ ವಾಪಸ್ ಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ಮೆಮೊ ಸಲ್ಲಿಸಿದ ಬೆಳವಣಿಗೆ ನಡೆದ ಹಿನ್ನೆಲೆಯಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಎಚ್ಚರಿಕೆ ನೀಡಿದೆ.
PSI Recruitment Scam; ಎಫ್‌ಎಸ್‌ಎಲ್ ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ
ಶುಕ್ರವಾರ ಕಲಾಪದ ವೇಳೆ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಬಂಧ ಅರ್ಜಿದಾರರ ಪರ ವಕೀಲರು ಹಾಜರಾಗಿ, ನಮ್ಮ ಮನವಿ ಈಡೇರಿದೆ. ಇದರಿಂದ ಅರ್ಜಿ ಹಿಂಪಡೆಯಲಾಗುವುದು ಎಂದು ತಿಳಿಸಿ ಮೆಮೊ ಸಲ್ಲಿಸಿದರು.
ಈ ನಡೆಯನ್ನು ಆಕ್ಷೇಪಿಸಿದ ನ್ಯಾಯಪೀಠ, ಒಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿ ಕೋರ್ಚ್ ಮುಂದೆ ವಿಚಾರಣೆ ನಡೆಯುತ್ತಿದ್ದ ಹಂತದಲ್ಲಿ ಅರ್ಜಿ ವಾಪಸ್ ಪಡೆಯಲು ಅವಕಾಶವಿಲ್ಲ. ಸಾರ್ವಜನಿಕ ಮಹತ್ವದ ವಿಷಯವನ್ನು ವಕೀಲರು ಅಥವಾ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಾಗ ಅದು ಕೋರ್ಚ್ ವ್ಯಾಪ್ತಿಗೆ ಒಳಪಟ್ಟವಿಷಯವಾಗುತ್ತದೆ.
ಎಸಿಬಿ ವಿರುದ್ಧ ಹೈಕೋರ್ಟ್ ಮತ್ತೆ ಹಿಗ್ಗಾಮುಗ್ಗಾ ತರಾಟೆ
ಒಂದು ವೇಳೆ ಅರ್ಜಿ ಹಿಂಪಡೆಯುವುದಾಗಿ ಮನವಿ ಮಾಡಿದರೆ, ಆ ಕ್ಷಣದಿಂದಲೇ ಅರ್ಜಿದಾರರು ಪ್ರಕರಣದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಳ್ಳುತ್ತಾರೆ. ಅರ್ಜಿದಾರರು ಪ್ರಕರಣದಲ್ಲಿ ಮುಂದುವರಿಯದಿದ್ದರೂ, ಕೋರ್ಚ್ ಆ ಅರ್ಜಿಯನ್ನು ಸ್ವಯಂ ಆಗಿ ವಿಚಾರಣೆ ನಡೆಸಲಿದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಕೀಲರು ತಮ್ಮ ಕಕ್ಷಿದಾರರ ವೈಯಕ್ತಿಕ ಹಿತಾಸಕ್ತಿಗೆ ಪೂರಕವಾಗಿ ವಾದ ಮಂಡಿಸುವುದು ಬೇಸರದ ಸಂಗತಿ. ಮೊದಲಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಅವಸರ ಮಾಡುವುದು, ನಂತರ ವಿವಿಧ ಕಾರಣ ನೀಡಿ ವಿಚಾರಣೆ ಮುಂದೂಡಿಕೆಗೆ ಮನವಿ ಮಾಡುವುದು ಸರಿಯಲ್ಲ. ಇತ್ತೀಚೆಗೆ ಈ ಬೆಳವಣಿಗೆಗಳು ಹೆಚ್ಚಾಗಿವೆ.
DGCA ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಭಾರತದ ಮೊದಲ ಟ್ರಾನ್ಸ್ಜಂಡರ್ ಫೈಲಟ್
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯಾವುದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿ ಅರ್ಜಿ ಆಗಬಾರದು. ಹಾಗಾಗಿ, ಇನ್ನು ಮುಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ (ಪಿಐಎಲ್) ವೈಯಕ್ತಿಕ ಹಿತಾಸಕ್ತಿ ಅಡಗಿರುವುದು ಮತ್ತು ನಿಷ್ಟ್ರಯೋಜಕವಾಗಿರುವುದು ಮೇಲ್ನೋಟಕ್ಕೆ ಸಾಬೀತಾದರೆ ಸೋಮವಾರದಿಂದ ಅರ್ಜಿದಾರರಿಗೆ ಕನಿಷ್ಠ 50 ಸಾವಿರ ರು. ದಂಡ ವಿಧಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.
25 ಸಾವಿರ ರು. ದಂಡ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಡಮಾರನಹಳ್ಳಿ ಕೆರೆ ಜಾಗ ಒತ್ತುವರಿ ಮಾಡಿ ಮಸೀದಿ ಹಾಗೂ ಸ್ಮಶಾನ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯುವುದಾಗಿ ಗುರುವಾರ ಮೆಮೊ ಸಲ್ಲಿಸಲಾಗಿತ್ತು. ಇದರಿಂದ ಅರ್ಜಿದಾರರಿಗೆ 25 ಸಾವಿರ ರು. ದಂಡ ವಿಧಿಸಿದ ಹೈಕೋರ್ಟ್, ದಂಡ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ