ಮಹಿಳೆಯರ ಜೀವನಾಂಶ ಅರ್ಜಿ 6 ತಿಂಗಳಲ್ಲಿ ಇತ್ಯರ್ಥಕ್ಕೆ ಆದೇಶ: ಹೈಕೋರ್ಟ್‌

By Kannadaprabha News  |  First Published Jun 22, 2022, 9:04 AM IST

*  ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗಳಿಗೆ ಹೈಕೋರ್ಟ್‌ ಸೂಚನೆ
*  ಬೆಂಗಳೂರಿನ ಎಚ್‌.ರಾಜಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿ 
*  ಹೈಕೋರ್ಟ್‌ನ ಈ ಆದೇಶದ ಪ್ರತಿ ಲಭ್ಯವಾದ ದಿನದಿಂದ ಎರಡು ವಾರದಲ್ಲಿ ಇತ್ಯರ್ಥಪಡಿಸಬೇಕು


ಬೆಂಗಳೂರು(ಜೂ.22):  ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆಯ ಸೆಕ್ಷನ್‌ 12ರಡಿ ಜೀವನಾಂಶ ಕೋರಿ ಮಹಿಳೆಯರು ಸಲ್ಲಿಸುವ ಅರ್ಜಿಗಳನ್ನು ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಗರಿಷ್ಠ ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಜೀವನಾಂಶ ಕೋರಿ ತಾವು ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡಲು ನಗರದ 3ನೇ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಟ್ರಾಫಿಕ್‌ ಕೋರ್ಚ್‌ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ಎಚ್‌.ರಾಜಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

Tap to resize

Latest Videos

ಮೋಸ ಮಾಡಿ ಮದುವೆ ಆದವಳ ಕೊಂದವನ ಜೀವಾವಧಿ ಶಿಕ್ಷೆ ರದ್ದು

ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ-2005ರ ಸೆಕ್ಷನ್‌ 12ರಡಿ ಮಹಿಳೆಯರು ಜೀವನಾಂಶ ಕೋರಿ ಅರ್ಜಿ ಸಲ್ಲಿಸಬಹುದು. ಸೆಕ್ಷನ್‌ 12(5)ರ ಪ್ರಕಾರ ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಆದರೆ, ಪ್ರಕರಣದಲ್ಲಿ ಅರ್ಜಿದಾರ ಮಹಿಳೆ ಜೀವನಾಂಶ ಕೋರಿ 2021ರ ನ.12ರಂದು ಅರ್ಜಿ ಸಲ್ಲಿಸಿದ್ದಾರೆ. ಆ ಸಂಬಂಧ ಮಹಿಳೆಯ ಪತಿಗೆ 2021ರ ಡಿ.20ರಂದು ಮ್ಯಾಜಿಸ್ಪ್ರೇಟ್‌ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಅಲ್ಲಿಂದ ಇಲ್ಲಿಯವರೆಗೂ ಆ ಅರ್ಜಿಯನ್ನು ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಇತ್ಯರ್ಥಪಡಿಸಿಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಅರ್ಜಿದಾರರಾದ ರಾಜಮ್ಮ ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ನ ಈ ಆದೇಶದ ಪ್ರತಿ ಲಭ್ಯವಾದ ದಿನದಿಂದ ಎರಡು ವಾರದಲ್ಲಿ ಇತ್ಯರ್ಥಪಡಿಸಬೇಕು ಎಂದು ನಗರದ 3ನೇ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಟ್ರಾಫಿಕ್‌ ಕೋರ್ಟ್‌ಗೆ ನಿರ್ದೇಶಿಸಿದೆ. ಅರ್ಜಿದಾರರ ಪರ ವಕೀಲ ಡಿ.ಮೋಹನ್‌ಕುಮಾರ್‌ ವಾದ ಮಂಡಿಸಿದ್ದರು.
 

click me!