ಮೋಸ ಮಾಡಿ ಮದುವೆ ಆದವಳ ಕೊಂದವನ ಜೀವಾವಧಿ ಶಿಕ್ಷೆ ರದ್ದು
* ಜೀವಾವಧಿ ಶಿಕ್ಷೆ 10 ವರ್ಷಕ್ಕೆ ಇಳಿಸಿ ಬಿಡುಗಡೆಗೆ ಕೋರ್ಟ್ ಆದೇಶ
* ಪಡೆದ ಸಾಲಕ್ಕೆ ಮದುವೆಗೆ ಒತ್ತಾಯಿಸಿದ್ದ ಮಹಿಳೆಯ ಕೊಲೆ ಕೇಸ್
* ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಆರೋಪಿ
ಬೆಂಗಳೂರು(ಜೂ.22): ಸಾಲ ನೀಡಿರುವುದಕ್ಕೆ ಪ್ರತಿಯಾಗಿ ವಂಚನೆಯಿಂದ ಮದುವೆ ಒಪ್ಪಂದಕ್ಕೆ (ನಿಖಾನಾಮ) ಸಹಿ ಹಾಕಿಸಿಕೊಂಡಿದ್ದ ಮಹಿಳೆಯನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷ ಜೈಲು ಶಿಕ್ಷೆಗೆ ಇಳಿಸಿರುವ ಹೈಕೋರ್ಟ್, ಈಗಾಗಲೇ 7 ವರ್ಷ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವುದನ್ನು ಪರಿಗಣಿಸಿ ಆತನ ಬಿಡುಗಡೆಗೆ ಆದೇಶಿಸಿದೆ.
ಪ್ರಕರಣದಲ್ಲಿ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಕೋರಿ ಬಿಳವಾರದಹಳ್ಳಿ ನಿವಾಸಿಯಾದ ಆಟೋ ಚಾಲಕ ವಾಸಿಮ್ (57) ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅಕ್ರಮ ಲೌಡ್‌ಸ್ಪೀಕರ್ ವಿರುದ್ಧ ಅಭಿಯಾನ ನಡೆಸಿ: ಹೈಕೋರ್ಟ್
ಪ್ರಕರಣದ ವಿವರ
ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದರಿಂದ ಫರೀದಾ ಬೀಬಿ ಎಂಬಾಕೆಯಿಂದ 20 ಸಾವಿರ ಸಾಲ ಪಡೆದಿದ್ದ ವಾಸಿಮ್ ಖಾಲಿ ಕಾಗದಕ್ಕೆ ಸಹಿ ಹಾಕಿದ್ದರು. ನಂತರ ಆ ಖಾಲಿ ಕಾಗದವನ್ನು ನಿಖಾನಾಮಾ ಆಗಿದೆ (ಮದುವೆ ಪತ್ರ) ಎಂದು ಹೇಳಿ ಫರೀದಾ ತನ್ನನ್ನು ಮದುವೆಯಾಗುವಂತೆ ವಾಸಿಮ್‌ಗೆ ಒತ್ತಾಯಿಸಿದ್ದರು. ಅದಾಗಲೇ ಮದುವೆಯಾಗಿದ್ದ ವಾಸಿಮ್ ಫರೀದಾಳನ್ನು ವಿವಾಹವಾಗಲು ನಿರಾಕರಿಸಿದ್ದ.
2014ರ ಏ.17ರಂದು ರಾತ್ರಿ ಮನೆಯಲ್ಲಿ ಕೂತು ವಾಸಿಮ್ ಜೊತೆಗೆ ಮದ್ಯ ಸೇವನೆ ಮಾಡುತ್ತಿದ್ದ ಫರೀದಾ, ಮತ್ತೊಬ್ಬ ವ್ಯಕ್ತಿಗೆ ಪೋನ್ ಕರೆ ಮಾಡಿ ವಾಸಿಮ್ ಪತ್ನಿಯ ಮೇಲೆ ಅತ್ಯಾಚಾರ ಮಾಡುವಂತೆ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ವಾಸಿಮ್, ಫರೀದಾ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದರು. ಅದೇ ದಿನ (ಏ.18) ಬೆಳಗಿನ ಜಾವ ತಲಘಟ್ಟಪುರ ಠಾಣೆಗೆ ತೆರಳಿದ್ದ ಆರೋಪಿ ಘಟನೆಯನ್ನು ವಿವರಿಸಿ ತಪ್ಪೊಪ್ಪಿಕೊಂಡಿದ್ದರು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯವು ವಾಸಿಮ್‌ಗೆ ಕೊಲೆ ಪ್ರಕರಣದಡಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2016ರ ಮೇ 26ರಂದು ಆದೇಶಿಸಿತ್ತು. ಇದರಿಂದ ಜೀವಾವಧಿ ಶಿಕ್ಷೆ ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.