
ಬೆಂಗಳೂರು(ಜೂ.22): ಅಗ್ನಿಪಥ ಯೋಜನೆ ವಿರುದ್ಧ ಎಐಸಿಸಿ ವತಿಯಿಂದ ದೆಹಲಿಯಲ್ಲಿ ಬುಧವಾರ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ನೂರಾರು ಕಾಂಗ್ರೆಸ್ಸಿಗರು ದೆಹಲಿ ತಲುಪಿದ್ದಾರೆ. ಹೈಕಮಾಂಡ್‌ನಿಂದ ತುರ್ತು ಬುಲಾವ್ ಬಂದ ಹಿನ್ನೆಲೆಯಲ್ಲಿ ಈ ಎಲ್ಲ ನಾಯಕರೂ ರಾಜಧಾನಿಗೆ ದೌಡಾಯಿಸಿದ್ದಾರೆ.
ಅಗ್ನಿಪಥ ಯೋಜನೆ ಹಿಂಪಡೆವ ಪ್ರಶ್ನೆಯೇ ಇಲ್ಲ: ದೋವಲ್
ಸೇನೆಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲಾಗುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ‘ಅಗ್ನಿವೀರರಾಗಿ ನೇಮಕವಾಗುವ ಆಸೆಯುಳ್ಳ ಯುವಕರೇ, ದೇಶದ ಮೇಲೆ ನಂಬಿಕೆ ಇಡಿ. ನಾಯಕತ್ವದಲ್ಲಿ ಹಾಗೂ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಲಿ’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಮತ್ತು ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಜಾರಿ ನಿರ್ದೇಶನಾಲಯದಿಂದ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿಚಾರಣೆಯನ್ನು ಬಲವಾಗಿ ವಿರೋಧಿಸುತ್ತಿರುವ ಪ್ರಮುಖ ವಿಪಕ್ಷ ಕಾಂಗ್ರೆಸ್, ದೆಹಲಿಯಲ್ಲಿ ಮತ್ತೊಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಿದೆ.
ಅಗ್ನಿಪಥ ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು: ಜಗದೀಶ್ ಶೆಟ್ಟರ್
ಅಗ್ನಿಪಥ ಮತ್ತು ಇ.ಡಿ. ವಿಚಾರಣೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬುಧವಾರ ದೆಹಲಿಯ ಜಂತರ್‌ಮಂತರ್ ಬಳಿ ಬೃಹತ್ ಪ್ರತಿಭಟನೆಯನ್ನು ಕಾಂಗ್ರೆಸ್ ಆಯೋಜಿಸಿದ್ದು, ಇದರಲ್ಲಿ ಭಾಗಿಯಾಗುವಂತೆ ದೇಶದ ಎಲ್ಲಾ ರಾಜ್ಯಗಳ ತನ್ನ ಸಂಸದರು, ಶಾಸಕರು, ಜನಪ್ರತಿನಿಧಿಗಳು, ನಾಯಕರಿಗೆ ಪಕ್ಷ ಸೂಚಿಸಿದೆ.
ಹೀಗಾಗಿ ದೇಶದ ಮೂಲೆಮೂಲೆಗಳಿಂದ ಪಕ್ಷದ ಗಣ್ಯರು ದೆಹಲಿಗೆ ಆಗಮಿಸಿದ್ದು, ಬುಧವಾರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದರೆ ಸದ್ಯ ದೆಹಲಿಯಲ್ಲಿ ಜಂತರ್ ಮಂತರ್, ಎಐಸಿಸಿ ಕಚೇರಿ ಮುಂಭಾಗ, ಇ.ಡಿ. ಕಚೇರಿ ಸೇರಿದಂತೆ ಯಾವುದೇ ಪ್ರದೇಶದಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡುತ್ತಿಲ್ಲ. ಹೀಗಾಗಿ ಬುಧವಾರ ಮತ್ತೆ ಕಾಂಗ್ರೆಸ್ ನಾಯಕರು ಮತ್ತು ದಿಲ್ಲಿ ಪೊಲೀಸರ ನಡುವೆ ಸಂಘರ್ಷದ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಜೊತೆಗೆ ಪ್ರತಿಭಟನೆಗೆ ಆಗಮಿಸಿರುವ ನಾಯಕರನ್ನು ಸ್ಥಳಕ್ಕೆ ಆಗಮಿಸುವ ಮೊದಲೇ ವಶಕ್ಕೆ ಪಡೆಯುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನಲಾಗಿದೆ.
ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಭಾಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹಿರಿಯ ನಾಯಕರಾದ ಚಿದಂಬರಂ, ಜೈರಾಮ್ ರಮೇಶ್ ಸೇರಿದಂತೆ ಹಲವು ನಾಯಕರು ಜಂತರ್‌ಮಂತರ್‌ನಲ್ಲಿ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ