
ವೆಂಕಟೇಶ್ ಕಲಿಪಿ
ಬೆಂಗಳೂರು (ಅ.31): ಅಪಘಾತದಿಂದ ಶೇ.65ರಷ್ಟು ಅಂಗವೈಕಲ್ಯಕ್ಕೆ ಗುರಿಯಾದ ಎಂಜಿನಿಯರ್ ಪದವೀಧರನಿಗೆ 11 ಲಕ್ಷ ರು. ಪರಿಹಾರ ಪಾವತಿಸಲು ಮೋಟಾರು ವಾಹನ ನ್ಯಾಯಾಧಿಕರಣ ಹೊರಡಿಸಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ವಿಮಾ ಕಂಪನಿಗೆ 44 ಲಕ್ಷ ರು. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸುವ ಮೂಲಕ ಸಂತ್ರಸ್ತ ವ್ಯಕ್ತಿಯ ಬದುಕು ನೆಮ್ಮದಿಯಿಂದ ಇರುವಂತೆ ಮಾಡಿದೆ. ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಿಗೆ ಮೋಟಾರು ವಾಹನ ನ್ಯಾಯಾಧಿಕರಣ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಪ್ರಶ್ನಿಸಿ ವಿಮಾ ಕಂಪನಿ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮೇಲ್ಮನವಿ ಪುರಸ್ಕರಿಸುವ ಅಥವಾ ತಿರಸ್ಕರಿಸುವುದು ಸಾಮಾನ್ಯ. ಕೆಲವು ಬಾರಿ ಮೊತ್ತವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವುದುಂಟು. ಆದರೆ, ಪರಿಹಾರ ಮೊತ್ತವನ್ನು ನಾಲ್ಕು ಪಟ್ಟು ಜಾಸ್ತಿ ಮಾಡುವುದು ವಿರಳ ಸಂಗತಿ.
ಪ್ರಕರಣದ ವಿವರ: ಮಂಗಳೂರಿನ ಮೂಡುಬಿದರೆ ಹೋಬಳಿಯ ಮಾಸ್ತಿಕಟ್ಟೆನಿವಾಸಿ ಅಲ್ವಿನ್ ಲೋಬೋ, ತಮ್ಮ ಸೋದರನೊಂದಿಗೆ 2009ರ ಮೇ 23ರಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಆಟೋ ರಿಕ್ಷಾ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಲೋಬೋ ತಲೆ ಮತ್ತು ಎಡಗಾಲಿಗೆ ಗಂಭೀರ ಪೆಟ್ಟು ಬಿದ್ದಿತ್ತು. ನಂತರ ಎ.ಜೆ ಆಸ್ಪತ್ರೆಯಲ್ಲಿ ಲೋಬೋ ಅವರು 2009ರ ಮೇ 23ರಿಂದ ಜು.17ರವರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ನಂತರದ ವರ್ಷಗಳಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಅಪಘಾತದಲ್ಲಿ ಸಾಕು ಪ್ರಾಣಿ ಸಾವು ಐಪಿಸಿ ಅಪರಾಧವಲ್ಲ: ಹೈಕೋರ್ಟ್
ಚಿಕಿತ್ಸೆಗಾಗಿ ಒಟ್ಟು 5,24,139.37 ರು. ಖರ್ಚು ಮಾಡಿದ್ದರು. ಪರಿಹಾರ ಕ್ಲೇಮಿನ ವಿಚಾರಣೆ ನಡೆಸಿದ್ದ ಮೋಟಾರು ವಾಹನ ನ್ಯಾಯಾಧೀಕರಣ, ಲೋಬೋ ಅವರಿಗೆ ವಾರ್ಷಿಕ ಶೇ.8ರಷ್ಟು ಬಡ್ಡಿದರದಲ್ಲಿ ಒಟ್ಟು 11,39,340 ರು. ಪರಿಹಾರ ಪಾವತಿಸುವಂತೆ ವಿಮಾ ಕಂಪನಿಗೆ 2015ರ ಜೂ.20ರಂದು ಆದೇಶಿಸಿತ್ತು. ಅದರ ರದ್ದತಿಗೆ ಕೋರಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಮಾ ಕಂಪನಿ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಬೈಕು ಹಾಗೂ ಆಟೋ ನಡುವೆ ಡಿಕ್ಕಿಯೇ ಸಂಭವಿಸಿಲ್ಲ. ಆಯ ತಪ್ಪಿ ಸವಾರರು ಬೈಕಿನಿಂದ ಬಿದ್ದಿದ್ದಾರೆ.
ಆದರೆ ಆಟೋ ರಿಕ್ಷಾ-ಬೈಕು ನಡುವೆ ಅಪಘಾತ ನಡೆದಿರುವುದಾಗಿ ತಿರುಚಲಾಗಿದೆ. ಆಟೋ ರಿಕ್ಷಾ ಚಾಲಕ, ಕ್ಲೇಮುದಾರ ಲೋಬೋ ನೆರೆಮನೆಯ ನಿವಾಸಿಯಾಗಿದ್ದು, ಪೊಲೀಸರೊಂದಿಗೆ ಸೇರಿ ದಾಖಲೆ ತಿರುಚಿದ್ದಾರೆ. ಆದ್ದರಿಂದ ನ್ಯಾಯಾಧಿಕರಣದ ಆದೇಶ ರದ್ದುಪಡಿಸುವಂತೆ ಕೋರಿದ್ದರು. ಈ ವಾದ ತಿರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ, ಆಟೋ ಚಾಲಕ ಕ್ಲೇಮುದಾರನ ನೆರೆಹೊರೆ ನಿವಾಸಿ ಎಂಬುದು ನಿಜ. ಆದರೆ, ಆತ ನ್ಯಾಯಾಧಿಕರಣದ ಮುಂದೆ ಹಾಜರಾಗಿ, ತಾನು ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಲೋಬೋ ಸಂಚರಿಸುತ್ತಿದ್ದ ಬೈಕಿಗೆ ಹೊಡೆಯಿತು ಎಂಬುದಾಗಿ ಒಪ್ಪಿಕೊಂಡಿದ್ದಾನೆ. ಆಟೋರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ನಡೆದಿಲ್ಲ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಯನ್ನೂ ವಿಮಾ ಕಂಪನಿ ಒದಗಿಸಿಲ್ಲ.
ಸರ್ಕಾರಿ ಜಾಗದಲ್ಲಿ ಖಾಸಗಿ ಕಟ್ಟಡ: ನಕ್ಷೆ ಮಂಜೂರು ತನಿಖೆಗೆ ಹೈಕೋರ್ಟ್ ಆದೇಶ
ಹಾಗಾಗಿ, ಅಪಘಾತದಲ್ಲಿ ಆಟೋ ರಿಕ್ಷಾವನ್ನು ವಂಚನೆಯಿಂದ ಸೇರ್ಪಡೆ ಮಾಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ಅಭಿಪ್ರಾಯಪಟ್ಟಿತು. ಘಟನೆಯಿಂದ ಲೋಬೊ ಶೇ.65ರಷ್ಟುಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾನೆ. ಚಿಕಿತ್ಸೆಗೆ ಐದು ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ. ಅಪಘಾತಕ್ಕೂ ಮುನ್ನ ಎಂಜಿನಿಯರ್ ಪದವೀಧರನಾದ ಲೋಬೋ ಅಬುಧಾಬಿಯಲ್ಲಿ ಉದ್ಯೋಗ ಮಾಡುತ್ತಾ ಮಾಸಿಕ 50 ಸಾವಿರ ರು.ಗಿಂತ ಅಧಿಕ ವೇತನ ಪಡೆಯುತ್ತಿದ್ದ. ಅಪಘಾತ ನಡೆದಾಗ 29 ವರ್ಷವಾಗಿತ್ತು. ಹಾಗಾಗಿ, ಪರಿಹಾರ ಮೊತ್ತ ಹೆಚ್ಚಿಸುವುದು ಸೂಕ್ತ ಎಂದು ಹೈಕೋರ್ಟ್ ತೀರ್ಮಾನಿಸಿತು. ಪರಿಹಾರ ಮೊತ್ತವನ್ನು 44, 92,140 ರು.ಗೆ ಹೆಚ್ಚಿಸಿದ ಹೈಕೋರ್ಟ್, ಆ ಮೊತ್ತಕ್ಕೆ ಅಪಘಾತ ನಡೆದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ