ಅಂತಿಮ ಅಧಿಸೂಚನೆ ಪ್ರಕಟವಾಗದ ಯೋಜನೆ ರದ್ದು

Kannadaprabha News   | Asianet News
Published : Jul 05, 2021, 08:46 AM IST
ಅಂತಿಮ ಅಧಿಸೂಚನೆ ಪ್ರಕಟವಾಗದ ಯೋಜನೆ ರದ್ದು

ಸಾರಾಂಶ

ಭೂ ಸ್ವಾಧೀನಕ್ಕೆ ನಿಗದಿತ ಸಮಯದೊಳಗೆ ಅಂತಿಮ ಅಧಿಸೂಚನೆ ಅಗತ್ಯ ಅಂತಿಮ ಅಧಿಸೂಚನೆ ಪ್ರಕಟಿಸದಿದ್ದಲ್ಲಿ ನಿರ್ದಿಷ್ಟ ಯೋಜನೆಯ ರದ್ದು  ಭೂ ಸ್ವಾಧೀನ ವಿಚಾರ ಸಂಬಂಧ ಹೈ ಕೋರ್ಟ್ ಮಹತ್ವದ ಆದೇಶ

ಬೆಂಗಳೂರು (ಜು.05):  ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ನಿಗದಿತ ಸಮಯದೊಳಗೆ ಅಂತಿಮ ಅಧಿಸೂಚನೆ ಹೊರಡಿಸದಿದ್ದರೆ ಆ ನಿರ್ದಿಷ್ಟ ಯೋಜನೆಯನ್ನು ಕೈಬಿಡಲಾಗಿದೆ ಎಂದು ಪರಿಗಣಿಸುವಂತೆ ಎಂದು ಹೈಕೋರ್ಟ್‌ ಆದೇಶಿಸಿದೆ.

ವಸತಿ ಬಡಾವಣೆಯೊಂದರ ನಿರ್ಮಾಣಕ್ಕಾಗಿ 2007ರಲ್ಲಿಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸಲು ವಿಫಲವಾಗಿರುವ ಪ್ರಕರಣದಲ್ಲಿ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

2.6 ಕೋಟಿ ಹೆಕ್ಟೇರ್‌ ಬಂಜರು ಭೂಮಿ ಅಭಿವೃದ್ಧಿ ಗುರಿ: ಪ್ರಧಾನಿ ಮೋದಿ ...

ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿಯವರ (ನಾಗರಿಕರ) ಆಸ್ತಿ ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಉನ್ನತಾಧಿಕಾರ ಹೊಂದಿದೆ. ಆದರೆ, ಅದಕ್ಕೆ ಸೂಕ್ತ ಕಾನೂನಿನ ಬೆಂಬಲವಿರಬೇಕು. ನಾಗರಿಕರ ಆಸ್ತಿ ಹಕ್ಕನ್ನು ಸರ್ಕಾರ ಮತ್ತು ಪ್ರಾಧಿಕಾರಗಳು ಕಸಿದುಕೊಳ್ಳಲು ಸಾಧ್ಯವಿಲ್ಲ. ಒಂದೊಮ್ಮೆ ಇಂತಹ ಸನ್ನಿವೇಶಕ್ಕೆ ಅವಕಾಶ ಮಾಡಿಕೊಟ್ಟರೆ ಸಂವಿಧಾನದ ಉಲ್ಲಂಘನೆಯಾಗುತ್ತದೆ. ರಾಜ್ಯ ಸರ್ಕಾರದ ಉನ್ನತಾಧಿಕಾರಕ್ಕೆ ಸಂವಿಧಾನದ ಪರಿಚ್ಛೇದ 31 ಇಂತಹ ಮಿತಿ ಹೇರಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಅಲ್ಲದೆ, ನ್ಯಾಯಸಮ್ಮತವಾದ ಪರಿಹಾರ ವಿತರಿಸಿದಾಗ ಮಾತ್ರ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮತ್ತು ಪ್ರಾಧಿಕಾರವು ಪ್ರಸ್ತಾಪಿಸಬಹುದು. ಖಾಸಗಿ ಆಸ್ತಿಯನ್ನು ಹೊಂದುವುದು ಮಾನವ ಹಕ್ಕು. ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮೂಲಕ ಆಸ್ತಿ ಮೇಲಿನ ಭೂ ಮಾಲೀಕರ ಹಕ್ಕನ್ನು ಕಸಿದುಕೊಳ್ಳಲು ಆಗುವುದಿಲ್ಲ. ಭೂ ಮಾಲೀಕರು ಯಾವುದೇ ಪರಿಹಾರ ಪಡೆಯದೆ ಹಾಗೆ ಉಳಿಯಲು ಆಗುವುದಿಲ್ಲ. ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಯೋಜನೆಯನ್ನು ಜಾರಿ ಮಾಡಲು ಪ್ರಾಧಿಕಾರಗಳು ಯೋಜಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣವೇನು?: ಬಸವರಾಜ ಭೀಮಪ್ಪ ಎಂಬುವರು ಬೆಳಗಾವಿಯ ಹಿಂಡಲಗಾ ಗ್ರಾಮದ ಸರ್ವೇ ನಂ 173/7ರಲ್ಲಿನ 39 ಗುಂಟೆ ಕೃಷಿ ಜಮೀನನ್ನು 2012ರ ಮಾ.17ರಂದು ಖರೀದಿಸಿದ್ದು, ಮಾರಾಟ ಕ್ರಯವಾಗಿದೆ. ಆದರೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ವಸತಿ ಬಡಾವಣೆ ನಿರ್ಮಾಣ ಯೋಜನೆಗಾಗಿ ಈ ಜಮೀನನ್ನು ವಶಪಡಿಸಿಕೊಳ್ಳಲು 2007ರ ಜೂ.14ರಂದು ಪ್ರಾಥಮಿಕ ಅಧಿಸೂಚನೆ (ಗೆಜೆಟ್‌) ಹೊರಡಿಸಿತ್ತು. ಪ್ರಾಧಿಕಾರದ ಮಾಸ್ಟರ್‌ ಪ್ಲಾನ್‌ನಲ್ಲಿಯೂ ವಸತಿ ಬಡಾವಣೆ ನಿರ್ಮಾಣಕ್ಕೆ ಈ ಜಮೀನು ಮೀಸಲಾಗಿತ್ತು.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಿಗಳ ಕಾಯ್ದೆ-1987ರ ಸೆಕ್ಷನ್‌ 19ರ ಪ್ರಕಾರ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಆಗ ಮಾತ್ರ ಭೂ ಸ್ವಾಧೀನಪಡಿಸಿಕೊಳ್ಳುವ ಹಕ್ಕು ಇರುತ್ತದೆ. ವಿಪರ್ಯಾಸವೆಂದರೆ ಈವರೆಗೂ ಜಮೀನು ಸ್ವಾಧೀನಕ್ಕೆ ಅಂತಿಮ ಅಧಿಸೂಚನೆಯನ್ನೇ ಹೊರಡಿಸಲಿಲ್ಲ. ಇದರಿಂದ ಈ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ನಿರಾಕ್ಷೇಪಣಾ ಪತ್ರ ವಿತರಿಸುವಂತೆ ಕೋರಿ 2016ರ ಸೆ.12ರಂದು ಸಲ್ಲಿಸಿದ ಮನವಿ ಪತ್ರವನ್ನು ಪ್ರಾಧಿಕಾರ ಪರಿಗಣಿಸದ್ದಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರ, 2007ರ ಪ್ರಾಥಮಿಕ ಅಧಿಸೂಚನೆ ರದ್ದುಪಡಿಸುವಂತೆ ಕೋರಿದ್ದರು.

ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಧಿಕಾರ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಪ್ರಕಾರ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ಯಾವುದೇ ಕಾಲಮಿತಿ ಇಲ್ಲ. ಪ್ರಾಥಮಿಕ ಅಧಿಸೂಚನೆ ಪ್ರಕಟಗೊಂಡಾಗ ಅರ್ಜಿದಾರ, ಈ 39 ಗುಂಟೆಯ ಜಾಗದ ಮಾಲೀಕನಾಗಿರಲಿಲ್ಲ. 2012ರಲ್ಲಿ ಜಮೀನು ಖರೀದಿ ಮಾಡಿರುವುದರಿಂದ ಪ್ರಾಥಮಿಕ ಅಧಿಸೂಚನೆ ರದ್ದುಪಡಿಸಲು ಕೋರಿ ಅರ್ಜಿ ಸಲ್ಲಿಸಲು ಅರ್ಜಿದಾರನಿಗೆ ಯಾವುದೇ ಅರ್ಹತೆ ಇಲ್ಲವಾಗಿದೆ. ಆದ್ದರಿಂದ ಅರ್ಜಿ ವಜಾಗೊಳಿಸುವಂತೆ ಕೋರಿತ್ತು.

ಪ್ರಾಧಿಕಾರದ ವಾದ ತಿರಸ್ಕರಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟಗೊಂಡಿರುವುದು 2007ರಲ್ಲಿ. ನಾವೀಗ 2021 ವರ್ಷದಲ್ಲಿದ್ದೇವೆ. ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸದೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಅರ್ಜಿದಾರನಿಗೆ ಪರಿಹಾರ ಕಲ್ಪಿಸದೇ ಹೊದರೆ ಅನ್ಯಾಯ ಮೆರೆದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಜತೆಗೆ, ವಸತಿ ಬಡಾವಣೆ ನಿರ್ಮಾಣ ವಿಚಾರದಲ್ಲಿ ಪ್ರಾಧಿಕಾರವು ನ್ಯಾಯಸಮ್ಮತವಾಗಿ ನಡೆದುಕೊಂಡಿಲ್ಲ. ಅಂತಿಮ ಅಧಿಸೂಚನೆ ಪ್ರಕಟಗೊಳ್ಳದ ಕಾರಣ ಅರ್ಜಿದಾರ ಪರಿಹಾರವನ್ನು ಕ್ಲೇಮು ಮಾಡಲಾಗದು. ಆದರೆ, ಅಂತಿಮ ಅಧಿಸೂಚನೆ ಹೊರಡಿಸಲು 14 ವರ್ಷ ವಿಳಂಬ ಮಾಡಿರುವ ಕಾರಣ ಪ್ರಾಧಿಕಾರವು ವಸತಿ ಬಡಾವಣೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿದೆ ಎಂದರ್ಥ ಎಂದು ಆದೇಶಿಸಿದ ಹೈಕೋರ್ಟ್‌, 2007ರ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಪಡಿಸಿತು. ಜಾಗವನ್ನು ಬಳಸಲು ಅರ್ಜಿದಾರನಿಗೆ ನಿರಾಕ್ಷೇಪಣಾ ಪತ್ರ ವಿತರಿಸುವಂತೆ ಪ್ರಾಧಿಕಾರಕ್ಕೆ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ