ಇಂದಿನಿಂದ ಅನ್‌ಲಾಕ್‌ ದುನಿಯಾ: ರಾಜ್ಯದಲ್ಲಿ ಬಹುತೇಕ ಎಲ್ಲ ನಿರ್ಬಂಧಗಳು ತೆರವು!

By Suvarna NewsFirst Published Jul 5, 2021, 7:11 AM IST
Highlights

* ರಾಜ್ಯ ಸರ್ಕಾರ ಘೋಷಿಸಿರುವ ‘ಅನ್‌ಲಾಕ್‌ 3.0’ ಸೋಮವಾರದಿಂದ ಜಾರಿ

* ದೇವಾಲಯಗಳು, ಮಾಲ್‌ಗಳು, ಪ್ರವಾಸಿ ತಾಣಗಳು ಓಪನ್

* ಮಾಲ್‌ಗಳು, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭ

ಬೆಂಗಳೂರು(ಜು.05): ರಾಜ್ಯ ಸರ್ಕಾರ ಘೋಷಿಸಿರುವ ‘ಅನ್‌ಲಾಕ್‌ 3.0’ ಸೋಮವಾರದಿಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳು, ಮಾಲ್‌ಗಳು, ಪ್ರವಾಸಿ ತಾಣಗಳು ತೆರೆಯಲಿವೆ. ಮಾಲ್‌ಗಳು, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುವುದರೊಂದಿಗೆ ವಾಣಿಜ್ಯ ಚಟುವಟಿಕೆಗಳು ಮತ್ತಷ್ಟುಚುರುಕಾಗಲಿವೆ. ವ್ಯಾಪಾರ-ವಹಿವಾಟು ಇಲ್ಲದೆ ಕಂಗಾಲಾಗಿದ್ದ ವಾಣಿಜ್ಯ ಪ್ರದೇಶ, ಭಕ್ತರಿಲ್ಲದೆ ಭಣಗುಡುತ್ತಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಮೊದಲಿನ ಕಳೆ ಬರಲಿದೆ.

ಗ್ರಾಹಕರ ಸ್ವಾಗತಕ್ಕೆ ಸಕಲ ಸಿದ್ಧತೆಯನ್ನು ಬಹುತೇಕ ಕಡೆ ಮಾಡಲಾಗುತ್ತಿದೆ. ಮಾಲ್‌, ಚಿನ್ನಾಭರಣ, ಬೃಹತ್‌ ಬಟ್ಟೆಅಂಗಡಿಗಳ ಮುಂದೆ ಗ್ರಾಹಕರನ್ನು ಸ್ವಾಗತಿಸುವ ಫಲಕ ಅಳವಡಿಸುತ್ತಿರುವುದು ಕಂಡುಬಂದಿದೆ.

ಪ್ರಮುಖವಾಗಿ ಎರಡು ತಿಂಗಳಿಂದ ಭಕ್ತರ ಪಾಲಿಗೆ ಬಂದ್‌ ಆಗಿದ್ದ ದೇವಾಲಯ, ಚಚ್‌ರ್‍, ಮಸೀದಿ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳು, ಪ್ರವಾಸಿ ತಾಣಗಳು ತೆರೆಯಲಿದ್ದು, ಭಕ್ತರು ಕೋವಿಡ್‌ ಮಾರ್ಗಸೂಚಿ ಪಾಲಿಸಿ ಭೇಟಿ ನೀಡಬಹುದು. ಇದುವರೆಗೆ ಶೇ.50ರಷ್ಟುಸಿಬ್ಬಂದಿ, ಕಾರ್ಮಿಕರ ಹಾಜರಾತಿಗೆ ಮಾತ್ರ ಅವಕಾಶವಿದ್ದ ಸರ್ಕಾರಿ, ಖಾಸಗಿ ಕಚೇರಿಗಳು, ಎಲ್ಲ ಮಾದರಿಯ ಕಾರ್ಖಾನೆ, ಕೈಗಾರಿಕೆಗಳಿಗೆ ಸೋಮವಾರದಿಂದ ಶೇ.100ರಷ್ಟುಹಾಜರಾತಿಗೆ ಅವಕಾಶ ನೀಡಿದ್ದು, ಇದರಿಂದ ವಾಣಿಜ್ಯ ಚಟುವಟಿಕೆಗಳು ಮತ್ತಷ್ಟುಚುರುಕಾಗಲಿವೆ. ಈಜುಕೊಳಗಳೂ ತೆರೆಯಲಿದ್ದು, ಕ್ರೀಡಾಳುಗಳು ತರಬೇತಿಯಲ್ಲಿ ತೊಡಗಬಹುದು. ವೀಕ್ಷಕರಿಲ್ಲದೆ ಒಳಾಂಗಣ, ಹೊರಾಂಗಣ ಕ್ರೀಡೆಗಳನ್ನೂ ನಡೆಸಬಹುದಾಗಿದೆ. ಇದುವರೆಗೆ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದ ಬಾರ್‌ಗಳಲ್ಲಿ ಮದ್ಯಪ್ರಿಯರು ಇನ್ನು ಮುಂದೆ ಅಲ್ಲೇ ಕುಳಿತು ಮದ್ಯ ಸೇವಿಸಬಹುದು.

ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಶೃಂಗೇರಿ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಸವದತ್ತಿ ಯಲ್ಲಮ್ಮ, ಸಿದ್ಧಗಂಗಾ ಮಠ, ಶಿವಗಂಗಾ ಕ್ಷೇತ್ರ, ಬೆಂಗಳೂರಿನ ಇಸ್ಕಾನ್‌, ರಾಜರಾಜೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ ಪ್ರಖ್ಯಾತ ದೇವಾಲಯ, ಚಚ್‌ರ್‍, ಮಸೀದಿಗಳಲ್ಲಿ ಭಕ್ತರ ಪ್ರವೇಶಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ. ಸದ್ಯಕ್ಕೆ ಧಾರ್ಮಿಕ ಸ್ಥಳಗಳಲ್ಲಿ ಮಂಗಳಾರತಿಗೆ ಮಾತ್ರ ಅವಕಾಶವಿದ್ದು, ವಿಶೇಷ ಪೂಜೆ, ಪ್ರಸಾದ ವಿನಿಯೋಗ ಇರುವುದಿಲ್ಲ. ಕೋವಿಡ್‌ ನಿಯಂತ್ರಣ ದೃಷ್ಟಿಯಿಂದ ಪ್ರತಿ ಭಕ್ತರೂ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯಬಹುದು. ಪ್ರವೇಶ ದ್ವಾರದಲ್ಲಿ ಭಕ್ತರಿಗೆ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಶೇ.100ರಷ್ಟು ಪ್ರಯಾಣಿಕರ ಸಂಚಾರ:

ಸೋಮವಾರದಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಮಾತ್ರವಲ್ಲದೆ, ಆಟೋ, ಟ್ಯಾಕ್ಸಿ, ಖಾಸಗಿ ಸಾರಿಗೆ ವಾಹನಗಳು ಬೆಳಗ್ಗೆ 5ರಿಂದ ರಾತ್ರಿ 9 ಗಂಟೆವರೆಗೆ ಶೇ.100ರಷ್ಟುಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ.

ಕರ್ಫ್ಯೂ ಸಡಿಲ:

ವಾರಾಂತ್ಯ ಕಫ್ರ್ಯೂ ತೆರವುಗೊಳಿಸಿ, ರಾತ್ರಿ ಕಫ್ರ್ಯೂ ಅನ್ನು ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನಿಗದಿಪಡಿಸಿರುವುದರಿಂದ ಶನಿವಾರ, ಭಾನುವಾರವೂ ಸೇರಿ ವಾರದ ಏಳೂ ದಿನ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ರಾತ್ರಿ 9 ಗಂಟೆವರೆಗೂ ನಡೆಸಬಹುದಾಗಿದೆ. ಹೋಂ ಡೆಲಿವರಿಗೆ 24 ಗಂಟೆಯೂ ಅವಕಾಶವಿದೆ. ಮದುವೆ ಸೇರಿದಂತೆ ಶುಭ-ಸಮಾರಂಭಗಳಿಗೆ 100 ಮಂದಿ, ಅಂತ್ಯಸಂಸ್ಕಾರಕ್ಕೆ 20 ಮಂದಿ ಭಾಗಿಯಾಗಬಹುದು.

ಸದ್ಯ ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆ, ಸಮಾರಂಭಗಳು, ಪ್ರತಿಭಟನೆ ನಡೆಸಲು, ಪಬ್‌ಗಳ ಕಾರ್ಯಾಚರಣೆಗೆ ಇರುವ ನಿರ್ಬಂಧವನ್ನು ಮುಂದುವರೆಸಲಾಗಿದೆ. ಶಾಲಾ, ಕಾಲೇಜುಗಳ ಆರಂಭದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಧರ್ಮಸ್ಥಳ, ಕುಕ್ಕೆ, ಬನಶಂಕರಿ ಸಜ್ಜು

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಬನಶಂಕರಿ ಸೇರಿದಂತೆ ರಾಜ್ಯಾದ್ಯಂತ ಎಲ್ಲ ದೇಗುಲಗಳನ್ನು ಸೋಮವಾರದಿಂದ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಗುಲಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ವಿಶೇಷ ಪೂಜೆ, ಪ್ರಸಾದ ವಿನಿಯೋಗ ಇರುವುದಿಲ್ಲ.

ರಾತ್ರಿ 8 ಗಂಟೆವರೆಗೆ ಮೆಟ್ರೋ ಸಂಚಾರ

ಬೆಂಗಳೂರಿನಲ್ಲಿ ಇಷ್ಟುದಿನ ಸಂಜೆ 5ರವರೆಗೆ ಮಾತ್ರ ಸೀಮಿತ ಅವಧಿಯಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲು ಸೋಮವಾರದಿಂದ ರಾತ್ರಿ 8 ಗಂಟೆಯವರೆಗೂ ಸಂಚರಿಸಲಿದೆ. ಜೊತೆಗೆ ಇಷ್ಟುದಿನ ಶೇ.50ರಷ್ಟುಪ್ರಯಾಣಿಕರ ನಿರ್ಬಂಧವನ್ನೂ ತೆರವುಗೊಳಿಸಲಾಗಿದೆ.

4,000 ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಸಿದ್ಧ

ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ತಮ್ಮ ಬಸ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ರಸ್ತೆಗಿಳಿಸಲು ಸಜ್ಜಾಗಿವೆ. ಕೆಎಸ್‌ಆರ್‌ಟಿಸಿ 4000 ಬಸ್‌ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಂಡಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದರೆ ಎಲ್ಲ ಬಸ್‌ಗಳು ರಸ್ತೆಗಿಳಿಯಲಿವೆ.

ಬಾರ್‌, ಮಾಲ್‌ಗಳೂ ರಾತ್ರಿವರೆಗೆ ಓಪನ್‌

ಸೋಮವಾರದಿಂದ ಬಾರ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ಅವಕಾಶ ನೀಡಲಾಗಿದೆ. ಶಾಪಿಂಗ್‌ ಮಾಲ್‌ಗಳು ಕೂಡ ಆರಂಭವಾಗುತ್ತಿವೆ. ಇವುಗಳನ್ನು ರಾತ್ರಿ 9 ಗಂಟೆಯವರೆಗೂ ತೆರೆದು 100%ನಷ್ಟುಗ್ರಾಹಕರಿಗೆ ಸೇವೆ ನೀಡಲು ಅನುಮತಿ ದೊರೆತಿದೆ.

click me!