Tomato Flu ಕರ್ನಾಟಕದಲ್ಲಿ ಟೊಮೆಟೋ ಜ್ವರ ಭೀತಿ, ಕೇರಳ ಗಡಿ ಕಟ್ಟೆಚ್ಚರಕ್ಕೆ ಸುಧಾಕರ್ ಸೂಚನೆ!

By Kannadaprabha News  |  First Published May 12, 2022, 4:25 AM IST

-  ಟೊಮೆಟೋ ಜ್ವರ ಬಗ್ಗೆ ಗಡಿ ಕಟ್ಟೆಚ್ಚರ, ಸುಧಾಕರ್‌
- ಕೇರಳ ಗಡಿಯ ಜಿಲ್ಲೆಗಳಲ್ಲಿ ಅಲರ್ಟ್, ಆರೋಗ್ಯ ಇಲಾಖೆ ಸೂಚನೆ
- ಟೊಮೆಟೋ ಜ್ವರದ ಲಕ್ಷಣಗಳೇನು?


ಬೆಂಗಳೂರು(ಮೇ.12): ಕೇರಳದ ಮಕ್ಕಳಲ್ಲಿ ಟೊಮೆಟೋ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಈ ಮಧ್ಯೆ ಟೊಮೆಟೋ ಜ್ವರ ಈಗಾಗಲೇ ಇರುವ ಕಾಯಿಲೆ ಆಗಿರುವ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಟೊಮೆಟೋ ಜ್ವರದ ಲಕ್ಷಣಗಳಿರುವ ರೋಗಿಗಳು ಹೊರ ರೋಗಿಗಳಾಗಿ ಬಂದರೆ ತಕ್ಷಣವೇ ಇಲಾಖೆಗೆ ತಿಳಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Tap to resize

Latest Videos

ಮಕ್ಕಳಿಗೆ ವೈರಲ್‌ ಜ್ವರ: ಫ್ಲೂ ಲಸಿಕೆಗೆ ಹೆಚ್ಚಿದ ಬೇಡಿಕೆ

ಆತಂಕ ಬೇಡ:
ಮಕ್ಕಳಲ್ಲಿ ಕಂಡುಬರುವ ಟೊಮೆಟೋ ಜ್ವರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಈಗಾಗಲೇ ಇರುವ ಕಾಯಿಲೆಯಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ಅಪರೂಪದ ವೈರಸ್‌ ರೋಗವಾಗಿರುವ ಟೊಮೆಟೋ ಜ್ವರದ ಪ್ರಕರಣಗಳು ಕೇರಳದ ಆರ್ಯಂಕಾರು, ಅಂಚಲ್‌ ಹಾಗೂ ನೆಡುವತೂರ್‌ನಲ್ಲಿ ಕಂಡುಬಂದಿದೆ. ಕೇರಳದಲ್ಲಿ ಈ ರೋಗದ ಪ್ರಕರಣಗಳು ಪತ್ತೆಯಾಗಿರುವುದರಿಂದ ಮಂಗಳೂರು, ಉಡುಪಿ, ಕೊಡಗು, ಚಾಮರಾಜ ನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ರಾಜ್ಯದ ಯಾವುದೇ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡು ಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಈ ಜಿಲ್ಲೆಗಳೂ ಸೇರಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲಿಖಿತ ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಟೊಮೆಟೋ ಜ್ವರಕ್ಕೂ ಕೊರೋನಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಕೇರಳದಲ್ಲಿ ಈಗಾಗಲೇ ಇರುವ ಎಂಡೆಮಿಕ್‌ ಕಾಯಿಲೆ ಆಗಿದೆ. ಆದ್ದರಿಂದ ಯಾವುದೇ ಆತಂಕ ಬೇಡ ಎಂದು ಡಾ ಸುಧಾಕರ್‌ ಹೇಳಿದ್ದಾರೆ.

'ಮಳೆ​ಗಾ​ಲಕ್ಕೂ ಮುನ್ನ ಮಕ್ಕ​ಳಿ​ಗೆ ಶೀತ​ಜ್ವ​ರದ ಲಸಿಕೆ ನೀಡಿ'

ಟೊಮೆಟೋ ಜ್ವರದ ಲಕ್ಷಣಗಳು
ಟೊಮೆಟೋ ಜ್ವರ ಕೆಂಪು ಬಣ್ಣದ ದದ್ದುಗಳು, ಚರ್ಮದ ಕಿರಿಕಿರಿ, ಆಯಾಸ, ಮೈ ಕೈ ನೋವು ಮತ್ತು ನಿರ್ಜಲೀಕರಣದ ರೋಗ ಲಕ್ಷಣಗಳನ್ನು ಹೊಂದಿದೆ. ಗುಳ್ಳೆಗಳು ಟೊಮೊಟೋ ಗಾತ್ರದಲ್ಲಿ, ಕೆಂಪುಬಣ್ಣ ಹೊಂದಿರುವುದರಿಂದ ಟೊಮೊಟೋ ಜ್ವರ ಎಂದು ಗುರುತಿಸಲಾಗಿದೆ. ಆ ಗುಳ್ಳೆಗಳು ಒಡೆದರೆ ಮತ್ತೊಬ್ಬರಿಗೆ ಸೋಂಕು ಹರಡಲಿದೆ ಎಂದು ಹೇಳಲಾಗಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಜ್ವರ ಕಾಣಿಸಿಕೊಂಡಾಗ ಮಕ್ಕಳನ್ನು ವಿಶ್ರಾಂತಿಯಲ್ಲಿರಿಸಬೇಕು ಮತ್ತು ಗುಳ್ಳೆಗಳನ್ನು ಕೆರೆಯದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

click me!