ಅಪಘಾತದಲ್ಲಿ ಪಾಲಕರು ಮೃತಪಟ್ಟರೆ ಹೆಣ್ಣು ಮಕ್ಕಳಿಗೂ ವಿಮಾ ಪರಿಹಾರ: ಹೈಕೋರ್ಟ್‌

By Govindaraj SFirst Published Aug 13, 2022, 3:00 AM IST
Highlights

ಅಪಘಾತ ಪ್ರಕರಣಗಳಲ್ಲಿ ಪೋಷಕರು ಮೃತಪಟ್ಟಾಗ ಅವರ ವಿವಾಹಿತ ಹೆಣ್ಣು ಮಕ್ಕಳು ಸಹ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್‌ ಆದೇಶಿಸಿದೆ. 

ಬೆಂಗಳೂರು (ಆ.13): ಅಪಘಾತ ಪ್ರಕರಣಗಳಲ್ಲಿ ಪೋಷಕರು ಮೃತಪಟ್ಟಾಗ ಅವರ ವಿವಾಹಿತ ಹೆಣ್ಣು ಮಕ್ಕಳು ಸಹ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್‌ ಆದೇಶಿಸಿದೆ. ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಮಹಿಳೆಯ ವಿವಾಹಿತ ಮಗಳಿಗೆ ಪರಿಹಾರ ಘೋಷಿಸಿದ ಹುಬ್ಬಳ್ಳಿಯ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ (ಎಂಎಸಿಟಿ) ಆದೇಶ ಪ್ರಶ್ನಿಸಿ ವಿಮಾ ಕಂಪನಿಯೊಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ಮೇಲ್ಮನವಿಯನ್ನು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರು, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ತಂದೆ-ತಾಯಿ ಅಪಘಾತದಲ್ಲಿ ಮೃತಪಟ್ಟಾಗ ಅವರ ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಪಡೆಯಬಹುದಾಗಿದೆ ಎಂದು ಆದೇಶಿಸಿ ಮೇಲ್ಮನವಿ ವಜಾಗೊಳಿಸಿದೆ.

ಮದುವೆ ಆಸೆ ತೋರಿಸಿ ರೇಪ್‌: ಕೋರ್ಟ್‌ಲ್ಲಿ ವಿಚಿತ್ರ ಕೇಸ್‌ ರದ್ದು

ನ್ಯಾಷನಲ್‌ ಇನ್‌ಶ್ಯೂರೆನ್ಸ್‌ ಲಿಮಿಟೆಡ್‌ ಮತ್ತು ಬಿರೇಂದರ್‌ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೊರ್ಟ್‌ ನೀಡಿರುವ ತೀರ್ಪುನ್ನು ಉಲ್ಲೇಖಿಸಿರುವ ಹೈಕೋರ್ಟ್‌, ಮೃತ ವ್ಯಕ್ತಿಯ ವಾರಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಯಸ್ಕ, ವಿವಾಹಿತ ಹಾಗೂ ಸಂಪಾದನೆ ಮಾಡುತ್ತಿರುವ ಮಕ್ಕಳು ಸಹ ಮೃತರ ವಾರಸುದಾರರಾಗಿದ್ದಾಗ, ಅವರು ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸುವುದು ನ್ಯಾಯಾಧಿಕರಣದ ಕರ್ತವ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪರಿಹಾರ ಕೋರಿ ಅರ್ಜಿ ಸಲ್ಲಿಸಿದವರು ಮೃತ ವ್ಯಕ್ತಿಗಳ ಮೇಲೆ ಅವಲಂಬಿತರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ ವಾರಸುದಾರರ ಕ್ಲೇಮು ಅರ್ಜಿಯನ್ನು ನ್ಯಾಯಾಧಿಕರಣ ಪರಿಗಣಿಸಬೇಕಾಗುತ್ತದೆ. ಅದರಂತೆ ಈ ಪ್ರಕರಣದಲ್ಲಿ ಸಹ ಪರಿಹಾರ ಕೋರಿರುವುದು ವಿವಾಹಿತ ಗಂಡು ಮಕ್ಕಳೇ ಅಥವಾ ಹೆಣ್ಣು ಮಕ್ಕಳೇ ಎಂಬುದನ್ನು ಪರಿಗಣಿಸಿ ತಾರತಮ್ಯ ಮಾಡಲು ಆಗುವುದಿಲ್ಲ. ಹಾಗಾಗಿ, ಮೃತರ ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬುವವರು ವಿಮಾ ಸಂಸ್ಥೆಯ ವಾದವನ್ನು ಒಪ್ಪಲು ಆಗುವುದಿಲ್ಲ. ವಿವಾಹಿತ ಮತ್ತು ವಯಸ್ಕ ಗಂಡು ಮಕ್ಕಳು ಪರಿಹಾರ ಕ್ಲೇಮು ಮಾಡಲು ಅರ್ಹರಾಗಿದ್ದರೆ, ವಿವಾಹಿತ ಹೆಣ್ಣು ಮಕ್ಕಳು ಸಹ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಹೇಳಿದೆ.

ವಾರದೊಳಗೆ ರಸ್ತೆಗುಂಡಿ ಮುಚ್ಚಿ: ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ

ಪ್ರಕರಣವೇನು: ರೇಣುಕಾ ಎಂಬಾಕೆ 2012ರ ಏ.12ರಂದು ಮದುವೆಗೆ ಹಾಜರಾಗಲು ಹುಬ್ಬಳ್ಳಿಯಿಂದ ಟೆಂಪೊವಿನಲ್ಲಿ ಹೊರಟ್ಟಿದ್ದರು. ಟೆಂಪೊ ಯಮನೂರು ಬಳಿಗೆ ಬಂದಾಗ ಲಾರಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದರಿಂದ ಪರಿಹಾರ ಕೋರಿ ಅವರ ಪತಿ ಹಾಗೂ ವಿವಾಹಿತ ಹೆಣ್ಣು ಮಕ್ಕಳು ಎಂಎಸಿಟಿಗೆ ಕ್ಲೇಮು ಅರ್ಜಿ ಸಲ್ಲಿಸಿದ್ದರು. ಕ್ಲೇಮುದಾರರಿಗೆ ಶೇ.6ರಷ್ಟು ಬಡ್ಡಿದರಲ್ಲಿ 5.91 ಲಕ್ಷ ರು. ಪರಿಹಾರ ಘೋಷಿಸಿ ಎಂಎಸಿಟಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

click me!