ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದಾಗಿ 18 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿಯ ಜಾಧವ್ ನಗರದಲ್ಲಿ ಆ.5ರಂದು ಕಾಣಿಸಿಕೊಂಡ ಚಿರತೆ, ಕಾರ್ಮಿಕನ ಮೇಲೆ ದಾಳಿಯೂ ಮಾಡಿತ್ತು. ನಂತರ ಕಣ್ಮರೆಯಾದ ಚಿರತೆ ಇದುವರೆಗೆ ಪತ್ತೆಯಾಗಿಲ್ಲ.
ಬೆಳಗಾವಿ/ಮೂಡಲಗಿ (ಆ.12): ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದಾಗಿ 18 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿಯ ಜಾಧವ್ ನಗರದಲ್ಲಿ ಆ.5ರಂದು ಕಾಣಿಸಿಕೊಂಡ ಚಿರತೆ, ಕಾರ್ಮಿಕನ ಮೇಲೆ ದಾಳಿಯೂ ಮಾಡಿತ್ತು. ನಂತರ ಕಣ್ಮರೆಯಾದ ಚಿರತೆ ಇದುವರೆಗೆ ಪತ್ತೆಯಾಗಿಲ್ಲ. ಆದರೂ ಚಿರತೆ ಭೀತಿಯಿಂದಾಗಿ ನಗರದ 22 ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ಆ.12ರ ಶುಕ್ರವಾರದಂದೂ ನಗರದ 12 ಶಾಲೆಗಳಲ್ಲಿ ರಜೆ ಮುಂದುವರಿಸಲಾಗಿದೆ.
ಧರ್ಮಟ್ಟಿಯಲ್ಲೂ ಚಿರತೆ ಪ್ರತ್ಯಕ್ಷ: ಇನ್ನು ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲೂ ಕೂಡ ಚಿರತೆ ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರಲ್ಲಿ ಭಯ ಭೀತಿ ಮೂಡಿಸಿದೆ. ಮೇಕೆಯೊಂದನ್ನು ಎಳೆದುಕೊಂಡು ಹೋಗಿದೆ. ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಧರ್ಮಟ್ಟಿ, ಪಟಗುಂದಿ, ಮಸಗುಪ್ಪಿ, ಕಮಲದಿನ್ನಿ, ರಂಗಾಪೂರ ಹಾಗೂ ಮೂಡಲಗಿಯ ತೋಟದ ಪ್ರದೇಶಗಳ ವ್ಯಾಪ್ತಿಯ 6 ಶಾಲೆಗಳಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆ.12ರ ಶುಕ್ರವಾರ ಒಂದು ದಿನ ರಜೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೀಡಿದ್ದಾರೆ.
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಸೆರೆ!
ಒಂದಲ್ಲ.. ಎರಡಲ್ಲ.. ಮೂರು ಚಿರತೆ ಪ್ರತ್ಯಕ್ಷ: ಗಡಿ ಜಿಲ್ಲೆ ಬೆಳಗಾವಿಗೆ ಚಿರತೆ ಕಾಟ ಶುರುವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಸೆರೆ ಹಿಡಿಯುವುದೇ ಒಂದು ದೊಡ್ಡ ಸವಾಲಾಗಿದೆ. ಬೆಳಗಾವಿ ಜಿಲ್ಲೆಯ ಮೂರು ದಿಕ್ಕುಗಳಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿ 15 ದಿನ ಕಳೆದರೂ ಚಿರತೆ ಸಿಕ್ಕಿಲ್ಲ. ಮತ್ತೊಂದೆಡೆ ಬೆಳಗಾವಿಯ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕ ಸಿದರಾಯಿ ಎಂಬುವರ ಮೇಲೆ ಆಗಸ್ಟ್ 5ರಂದು ಚಿರತೆ ಪ್ರತ್ಯಕ್ಷವಾಗಿತ್ತು. ಜಾಧವ್ ನಗರದಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಇರುವ ಗಾಲ್ಫ್ ಮೈದಾನಕ್ಕೆ ಚಿರತೆ ನುಗ್ಗಿದೆ ಎಂಬ ಅನುಮಾನದಡಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಚಿತ್ರ ಸೆರೆಯಾಗಿತ್ತು.
ಇದಾದ ಬಳಿಕ 16 ಟ್ರ್ಯಾಪ್ ಕ್ಯಾಮರಾ ಎಂಟು ಬೋನುಗಳನ್ನು ಇರಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದರೂ ಚಿರತೆ ಸೆರೆ ಸಿಕ್ಕಿಲ್ಲ. ಇನ್ನು ಚಿರತೆ ಸೆರೆ ಸಿಗದ ಹಿನ್ನೆಲೆ ಬೆಳಗಾವಿ ನಗರದ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಚಿರತೆ ಸೆರೆ ಹಿಡಿಯಲು 7ನೇ ದಿನವೂ ಕಾರ್ಯಾಚರಣೆ ಮುಂದುವರಿದಿದ್ದು ಇಂದು ಚಿರತೆ ಪತ್ತೆಗಾಗಿ ಮೂರು ಡ್ರೋಣ್ ಕ್ಯಾಮರಾಗಳನ್ನು ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಮೂವ್ಮೆಂಟ್ ಕ್ಯಾಮರಾಗಳನ್ನು ಸಹ ಗಾಲ್ಫ್ ಮೈದಾನದಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಡಿಎಫ್ಒ ಆ್ಯಂಥೋನಿ ಮರಿಯಮ್ ತಿಳಿಸಿದ್ದಾರೆ.
ಆರನೇ ದಿನವೂ ಮುಂದುವರೆದ ಚಿರತೆ ಕಾರ್ಯಾಚರಣೆ: ನಗರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆರು ದಿನ ಕಳೆದರೂ ಇದುವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಬಲೆಗೆ ಬಿದ್ದಿಲ್ಲ. ಇದರಿಂದಾಗಿ ನಗರದ ಜನತೆಯಲ್ಲಿ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗಿದೆ. ಇತ್ತ ಅರಣ್ಯ ಅಧಿಕಾರಿಗಳು ಹಗಲು ರಾತ್ರಿಯನ್ನದೇ ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೋಡಗಿದ್ದಾರೆ. ಆ.5ರಂದು ಇಲ್ಲಿನ ಜಾಧವ ನಗರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಕಾರ್ಮಿಕನೋರ್ವನ ಮೇಲೆ ದಾಳಿ ನಡೆಸಿ ಕಣ್ಮರೆಯಾಗಿತ್ತು. ಇದರಿಂದಾಗಿ ನಗರದ ಜನರಲ್ಲಿ ಹಾಗೂ ಅರಣ್ಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು.
3 ದಿನ ಕಳೆದರೂ ಪತ್ತೆಯಾಗದ ಚಿರತೆ: ಅರಣ್ಯ ಸಿಬ್ಬಂದಿಯಿಂದ ತೀವ್ರ ಶೋಧ
ನಂತರ ಆ.8 ರಂದು ರಾತ್ರಿ ನಗರದ ಗಾಲ್‌್ಫ ಮೈದಾನದಲ್ಲಿ ಓಡಾಡುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಖಚಿತವಾಗಿದೆ. ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಆದರೂ ಚಿರತೆ ಮಾತ್ರ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಸಿರುವ ಬಲೆಗೆ ಬಿದ್ದಿಲ್ಲ. ಈ ಚಿರತೆ ಹಿಡಿಯುವ ಕಾರ್ಯಾಚರಣೆಗಾಗಿ ಆರು ಬೋನುಗಳನ್ನು, 16 ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. 50 ಜನ ಅರಣ್ಯ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.