ಬೆಂಗಳೂರು (ಮೇ.25): ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿಕಿತ್ಸೆಯ ಬಾಕಿ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ. ನಿರಾಕರಿಸಿದ್ದು ಕಂಡುಬಂದರೆ ಅಂತಹ ಆಸ್ಪತ್ರೆಗಳ ನೋಂದಣಿ ರದ್ದಾಗಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸೋಮವಾರ ಆದೇಶವೊಂದನ್ನು ಹೊರಡಿಸಿದ್ದು, ಬಾಕಿ ಬಿಲ್ ನೀಡಿಲ್ಲ ಎಂದು ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದ ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಾ. ಸುಧಾಕರ್
ರಾಜ್ಯದ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಾಗ ಬಾಕಿ ಬಿಲ್ ಪಾವತಿಗೆ ಒತ್ತಡ ಹಾಕುತ್ತಿರುವ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್ (ಕೆಪಿಎಂಇ) 2007ರ ಷರತ್ತುಗಳ ಅನ್ವಯ ಮೃತವ್ಯಕ್ತಿಯ ದೇಹವನ್ನು ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ಬಾಕಿ ಬಿಲ್ ಪಾವತಿಗೆ ಒತ್ತಾಯ ಅಥವಾ ಒತ್ತಡ ಹೇರುವಂತಿಲ್ಲ. ಕುಟುಂಬದವರು ಬಿಲ್ ಪಾವತಿಸದ ಪಕ್ಷದಲ್ಲಿ ಮೃತದೇಹ ಹಸ್ತಾಂತರ ಮಾಡಲು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇಂತಹ ಆಸ್ಪತ್ರೆಗಳ ಬಗ್ಗೆ ಕ್ರಮ ಜರುಗಿಸಬೇಕು ಹಾಗೂ ವಾರಕೊಮ್ಮೆ ಕ್ರಮ ಕೈಗೊಂಡ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.