ಬೆಂಗಳೂರು (ಮೇ.25): ಸೋಮವಾರ ಬಂಗಾಳ ಕೊಲ್ಲಿಯಲ್ಲಿ ‘ಯಾಸ್’ ಚಂಡಮಾರುತ ಸೃಷ್ಟಿಯಾಗಿದೆ. ಇದು ಮೇ 26ರಂದು ಒಡಿಶಾ ಮಾರ್ಗವಾಗಿ ಸಾಗುವುದರಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇಲ್ಲ. ಈ ಕಾರಣದಿಂದ ಈಗಾಗಲೇ ‘ತೌಕ್ಟೆ’ ಚಂಡಮಾರುತಕ್ಕೆ ತುತ್ತಾಗಿದ್ದ ರಾಜ್ಯದ ಕರಾವಳಿ ಭಾಗದ ಜನರು ‘ಯಾಸ್’ಗೆ ಭಯಪಡುವ ಅಗತ್ಯವಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
26ರವರೆಗೆ ಕರಾವಳಿಯಲ್ಲಿ ಉತ್ತಮ ಮಳೆಯಾದರೆ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ತುಂತುರು ಮಳೆ ಸಂಭವವಿದೆ. ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಆರ್ಭಟಿಸಿದ್ದ ವರುಣ ಮೇ 26ರ ನಂತರದ 2-3 ದಿನ ತಾತ್ಕಾಲಿಕವಾಗಿ ವಿರಾಮ ಪಡೆಯಲಿದ್ದಾನೆ ಎಂದು ಹೇಳಿದೆ.
ಬುಧವಾರ ಅಪ್ಪಳಿಸಲಿದೆ ಪ್ರಚಂಡಮಾರುತ ದಾಳಿ! ...
ಮೇ 24ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಹುನಗುಂದ, ಯಾದಗಿರಿಯ ಕೆಂಬಾವಿ ಮತ್ತು ಜಾಲಹಳ್ಳಿ, ಉತ್ತರ ಕನ್ನಡದ ಕದ್ರಾ, ಬೆಳಗಾವಿಯ ಚಿಕ್ಕೋಡಿ ಮತ್ತಿತರೆಡೆ ಕೆಲ ಹೊತ್ತು ಗಾಳಿ ಸಹಿತ ಮಳೆ ಸುರಿದಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಬಹುತೇಕ ಕಡೆಗಳಲ್ಲಿ ಮೇ 26ರವರೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಚದುರಿದಂತೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.