ಕೇರಳದ ವಯನಾಡಿನಭೀಕರ ಭೂಕುಸಿತದಲ್ಲಿ ಜೀವಂತ ಸಮಾಧಿಯಾದರು. ಸುಮಾರು ನಾಲ್ಕು ತಿಂಗಳುಗಳೇ ಕಳೆದರೂ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾತ್ರ ಇಂದಿಗೂ ಕೇರಳದ ಸರ್ಕಾರದಿಂದಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ನಯಾಪೈಸೆ ಪರಿಹಾರ ನೀಡಿಲ್ಲ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ನ.12) : ಕೇರಳದ ವಯನಾಡಿನ ಮಂಡಕೈನಲ್ಲಿ ನಡೆದ ಭೀಕರ ಭೂಕುಸಿತ ನೂರಾರು ಕುಟುಂಬಗಳು ಜೀವಂತ ಸಮಾಧಿಯಾಗುವಂತೆ ಮಾಡಿದ್ದು ಜನ ಮಾನಸದಲ್ಲಿ ಇನ್ನೂ ಹಸಿಹಸಿಯಾಗಿಯೇ ಇದೆ. ಘೋರ ದುರಂತ ನಡೆದ ನಾಲ್ಕು ತಿಂಗಳುಗಳೇ ಕಳೆಯುತ್ತಿವೆ. ಆದರೆ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾತ್ರ ಇಂದಿಗೂ ಕೇರಳದ ಸರ್ಕಾರದಿಂದಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ನಯಾಪೈಸೆ ಪರಿಹಾರ ನೀಡಿಲ್ಲ.
ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ರವಿ ಮತ್ತು ಕವಿತಾ ಕುಟುಂಬ ಬದುಕು ಕಟ್ಟಿಕೊಂಡಿತ್ತು. ಜುಲೈ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲೂ ರಣಭೀಕರ ಮಳೆ ಸುರಿಯುತ್ತಿದ್ದರಿಂದ ಅವರಿದ್ದ ಬಾಡಿಗೆ ಮನೆ ಕುಸಿದು ಬೀಳಲಾರಂಭಿಸಿತ್ತಂತೆ. ತೀವ್ರ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಕವಿತಾ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ತನ್ನ 9 ವರ್ಷದ ಮಗ ರೋಹಿತ್ ನನ್ನು ಕರೆದುಕೊಂಡು ಕೇರಳಕ್ಕೆ ತೆರಳಿದ್ದರು. ಕೇರಳದಲ್ಲಿದ್ದ ತನ್ನ ತಂದೆಗೂ ತೀವ್ರ ಅನಾರೋಗ್ಯ ಕಾಡಿದ್ದರಿಂದ ನೋಡುವುದಕ್ಕಾಗಿ ಹೋಗಿದ್ದರು. ಇಲ್ಲಿ ಮನೆ ಕುಸಿದು ಬೀಳಬಹುದು ಮಕ್ಕಳಿಗೆ ತೊಂದರೆ ಆದೀತು ಎಂದು ಕೇರಳಕ್ಕೆ ತೆರಳಿದ್ದರು. ಆದರೆ ವಿಧಿ ನೋಡಿ ಎಲ್ಲಿಗೆ ಹೋದರು ಬಿಡುವುದಿಲ್ಲ ಎನ್ನುವ ನಂಬಿಕೆಯಂತೆ ಕರ್ನಾಟಕ ಬಿಟ್ಟು ಕೇರಳಕ್ಕೆ ಹೋದರು ಬಿಟ್ಟಿಲ್ಲ.
ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್
ಜುಲೈ 29 ರಂದು ಭೀಕರ ಭೂಕುಸಿತದಲ್ಲಿ ಕೊನೆಗೂ ರೋಹಿತ್ ಮಲಗಿದ್ದ ತನ್ನ ದೊಡ್ಡಮ್ಮನ ಮನೆಯಲ್ಲಿ ಜೀವಂತ ಸಾವನ್ನಪ್ಪಿದನು. ಇದೇ ವೇಳೆಗೆ ಕೊಡಗು ಪ್ರವಾಸ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ರೋಹಿತ್ನ ತಾಯಿ ಕವಿತಾ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದರು. ಸಾಂತ್ವನವನ್ನು ಹೇಳಿ ಪರಿಹಾರ ಕೊಡೋಣ ಎಂದಿದ್ದರು. ಹೀಗೆ ಹೇಳಿ 4 ತಿಂಗಳು ಪೂರೈಸುತ್ತಿದೆಯಾದರೂ ಇಂದಿಗೂ ಪರಿಹಾರ ದೊರೆತ್ತಿಲ್ಲ.ಒಂದೆಡೆ ಕೇರಳ ಸರ್ಕಾರದಿಂದಲೂ ಬಾಲಕ ರೋಹಿತ್ ನ ಕುಟುಂಬಕ್ಕೆ ಪರಿಹಾರ ಇಲ್ಲ. ಇತ್ತ ಕರ್ನಾಟಕದಿಂದ ಪರಿಹಾರ ನೀಡೋಣ ಎಂದಿದ್ದ ಸಿಎಂ ಸಿದ್ದರಾಮಯ್ಯ ಅಥವಾ ಸಿದ್ದರಾಮಯ್ಯನವರು ಪರಿಹಾರ ನೀಡುವುದಾಗಿ ಹೇಳುವ ಸಂದರ್ಭ ಸಿದ್ದರಾಮಯ್ಯನವರ ಜೊತೆಗೆ ಇದ್ದ ಅವರ ಕಾನೂನು ಸಲಹೆಗಾರನಾಗಿರುವ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರಾಗಲಿ ಇತ್ತ ಗಮನ ಹರಿಸಿಲ್ಲ.
ಕೂಲಿ ಮಾಡಿ ಬದುಕುತ್ತಿದ್ದ ಕವಿತಾ ಮತ್ತು ರವಿ ದಂಪತಿ ಮಗನನ್ನು ಕಳೆದುಕೊಂಡ ನೋವಿನಲ್ಲಿಯೇ ಇದ್ದು, ಕೂಲಿ ಕೆಲಸಕ್ಕೂ ಹೋಗಲಾರದೆ ತೊಳಲಾಡುತ್ತಿದ್ದಾರೆ. ಪರಿಹಾರ ದೊರೆಯಬಹುದೇನೋ ಎಂದು ಮಗ ಸತ್ತಿರುವ ದಾಖಲೆಗಳ ಹಿಡಿದು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಮೃತ ರೋಹಿತ್ ತಂದೆ ರವಿ ಘಟನೆಯಾದಾಗ ಶಾಸಕ ಪೊನ್ನಣ್ಣ ಅವರು ನಮ್ಮ ಮನೆಗೆ ಬರುತ್ತೇನೆ ಪರಿಹಾರದ ಚೆಕ್ ನೀಡುತ್ತೇನೆ ಎಂದಿದ್ದರು. ಆದರೆ ಇದುವರೆಗೆ ಇತ್ತ ತಿರುಗಿ ನೋಡಿಲ್ಲ ಎನ್ನುತ್ತಿದ್ದಾರೆ. ಕವಿತಾ ಕೂಡ ಸಿದ್ದರಾಮಯ್ಯನವರೇ ನನ್ನೊಂದಿಗೆ ಮಾತನಾಡಿದ್ದರು. ಆದರೆ ಘಟನೆಯಾಗಿ ಇದುವರೆಗೆ ಯಾವುದೇ ಪರಿಹಾರವನ್ನೇ ನೀಡಿಲ್ಲ ಎನ್ನುತ್ತಿದ್ದಾರೆ. ಏನೇ ಆಗಲಿ ಘಟನೆ ನಡೆದು ನಾಲ್ಕು ತಿಂಗಳಾಗಿದ್ದರೂ ಕೇರಳ ಸರ್ಕಾರವಾಗಲಿ ಅಥವಾ ಕರ್ನಾಟಕ ಸರ್ಕಾರವಾಗಲಿ ಪರಿಹಾರ ನೀಡದೇ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.