ಆರ್ಥಿಕ ಸಂಪನ್ಮೂಲ ಕೊರತೆ ನೆಪದಲ್ಲಿ 9 ವಿಶ್ವವಿದ್ಯಾಲಯಗಳ ಬಾಗಿಲು ಬಂದ್: 45 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೆಟ್ಟು?

Published : Feb 19, 2025, 09:05 AM ISTUpdated : Feb 19, 2025, 09:13 AM IST
ಆರ್ಥಿಕ ಸಂಪನ್ಮೂಲ ಕೊರತೆ ನೆಪದಲ್ಲಿ 9 ವಿಶ್ವವಿದ್ಯಾಲಯಗಳ ಬಾಗಿಲು ಬಂದ್: 45 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೆಟ್ಟು?

ಸಾರಾಂಶ

ವಿದ್ಯಾರ್ಥಿಗಳ ಹಾಜರಾತಿ, ಮೂಲಸೌಲಭ್ಯ ಮತ್ತು ಸಂಪನ್ಮೂಲ ಕೊರತೆಯ ನೆಪದಲ್ಲಿ ರಾಜ್ಯ ಸರ್ಕಾರವು ಬಾಗಲಕೋಟೆ ವಿಶ್ವವಿದ್ಯಾಲಯ ಸೇರಿದಂತೆ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಚಿಂತನೆಯಲ್ಲಿದೆ. ಈ ಕ್ರಮವು ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಬಾಗಲಕೋಟೆ ವಿವಿಯಲ್ಲಿ 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಹುತೇಕರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಾಗಿದ್ದಾರೆ.

ಕೇಶವ ಕುಲಕರ್ಣಿ

 ಜಮಖಂಡಿ (ಫೆ.19)  : ವಿದ್ಯಾರ್ಥಿಗಳ ಹಾಜರಾತಿ, ಮೂಲಸೌಲಭ್ಯ ಹಾಗೂ ಸಂಪನ್ಮೂಲ ಕೊರತೆಯ ನೆಪದಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ರಾಜ್ಯದ 9 ವಿಶ್ವವಿದ್ಯಾಲಯಗಳಿಗೆ ಬಾಗಿಲು ಜಡಿಯಲು ಮುಂದಾಗಿದೆ. ಇವುಗಳಲ್ಲಿ ಜಮಖಂಡಿ ನಗರದಲ್ಲಿರುವ ಬಾಗಕೋಟೆ ವಿಶ್ವವಿದ್ಯಾಲಯವೂ ಸೇರಿರುವುದು ಉನ್ನತ ವ್ಯಾಸಂಗದ ಕನಸು ಕಾಣುತ್ತಿರುವ ಈ ಭಾಗದ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.

ಜಮಖಂಡಿ ನಗರದಲ್ಲಿ ಆರಂಭವಾದ ಬಾಗಲಕೋಟೆ ವಿಶ್ವವಿದ್ಯಾಲಯ 2023-24ರ ಪ್ರಥಮ ಸಾಲಿನಲ್ಲಿ 14,768 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2024-25ನೇ ಸಾಲಿನಲ್ಲಿ 15 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸದ್ಯ ಈ ವಿವಿಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅಧ್ಯಯನ ಮಾಡುತ್ತಿದ್ದಾರೆ. ಬರುವ ಶೈಕ್ಷಣಿಕ ವರ್ಷದ ಲೆಕ್ಕ ಹಿಡಿದರೆ ಒಟ್ಟಾರೆ 45 ಸಾವಿರ ವಿದ್ಯಾರ್ಥಿಗಳ ಕನಸಿಗೆ ಕೊಡಲಿಪಟ್ಟು ಬೀಳುವ ಆತಂಕ ಎದುರಾಗಿದೆ.

ಇದನ್ನೂ ಓದಿ:  ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿ ಆಯ್ತಾ? ಕೇವಲ ಐದು ವರ್ಷದ ಹಿಂದಷ್ಟೇ ಸ್ಥಾಪನೆಯಾಗಿದ್ದ ಮಂಡ್ಯ ವಿವಿ ಮುಚ್ಚಲು ಮುಂದಾದ ಸರ್ಕಾರ?

ಇಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಬಹುತೇಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೇ ಇದ್ದಾರೆ. ಶೇ.95ರಷ್ಟು ಹಿಂದುಳಿದ ವರ್ಗ, ಪ. ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಶೇ.55ರಷ್ಟು ವಿದ್ಯಾರ್ಥಿನಿಯರು ಇರುವುದು ವಿವಿಯ ವಿಶೇಷ. ಕ್ಯುಪಿಡಿಎಸ್‌ ತಂತ್ರಾಂಶ ಮೂಲಕ ಪರೀಕ್ಷೆ ಹಾಗೂ ಅರ್ನ್‌ ವೈಲ್‌ ಲರ್ನ್‌ನ ಪರಿಕಲ್ಪನೆ ಜಾರಿಗೆ ತರುವ ಮೂಲಕ ಸಮಾಜದ ಕಟ್ಟಕಡೆಯ ಸಮುದಾಯದ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತಿದೆ.

ಬಯಸದೇ ಬಂದ ಭಾಗ್ಯ:

2023-24ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳನ್ನು ಒಳಗೊಂಡು ಜಮಖಂಡಿ ನಗರದಲ್ಲಿ ಬಾಗಲಕೋಟೆ ವಿವಿ ಆರಂಭಿಸಲಾಯಿತು. ರಾಣಿ ಚನ್ನಮ್ಮ ವಿವಿಯಿಂದ ವಿಭಜನೆಗೊಂಡು ಪ್ರಾದೇಶಿಕ ಅಧಿಕಾರ ವ್ಯಾಪ್ತಿ, ಕಾರ್ಯಭಾರದ ಆಧಾರದ ಮೇಲೆ ಬೋಧಕ-ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಕೇಂದ್ರ, ಸಂಯೋಜಿತ ಕಾಲೇಜುಗಳು, ಸ್ಥಿರಾಸ್ತಿ-ಚರಾಸ್ತಿಗಳ ಹಂಚಿಕೆಯೂ ಆಗಿದೆ. ಜಿಲ್ಲೆಯ ವ್ಯಾಪ್ತಿಗೆ ಬರುವ 73 ಮಹಾವಿದ್ಯಾಲಯಗಳ ಸಂಯೋಜನೆ ಹೊಂದಿದ್ದು, 7 ಸ್ನಾತಕೊತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ವಿವಿ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳಲ್ಲಿ 22 ಸ್ನಾತಕ ಹಾಗೂ 13 ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಬೀದರ್‌ ವಿಶ್ವವಿದ್ಯಾಲಯಕ್ಕಿಂತ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.

ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸ್ಥಾನಗಳ ಮಧ್ಯೆ ಇರುವ ಜಮಖಂಡಿಯಲ್ಲಿ ವಿಶ್ವವಿದ್ಯಾಲಯ ಇರುವುದರಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಆರ್ಥಿಕ ಹೊರೆಯೂ ಕಡಿಮೆ ಮಾಡಿದೆ. ಪ್ರಸ್ತುತ 3 ಜನ ಕಾಯಂ ಉಪನ್ಯಾಸಕರು, 15 ಜನ ಕಾಯಂ ಸಿಬ್ಬಂದಿ, 18 ಜನ ಅತಿಥಿ ಶಿಕ್ಷಕರು, 18 ಗುತ್ತಿಗೆ ಕೆಲಸಗಾರರು, 450 ಪಿಜಿ ವಿದ್ಯಾರ್ಥಿಗಳಿದ್ದಾರೆ.

ವಿಜಯಪುರದ ವಿದ್ಯಾಲಯಗಳನ್ನು ಇಲ್ಲಿ ಸಂಯೋಜನೆಗೊಳಿಸಿದರೆ 220 ವಿದ್ಯಾಲಯಗಳ ಸಂಯೋಜನೆ ಹೊಂದಿ, ರಾಜ್ಯದ ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರುವುದರಲ್ಲಿ ಅನುಮಾನ ಇಲ್ಲ. ವಿಜಯಪುರ ವಿದ್ಯಾಲಯಗಳು ಬೆಳಗಾವಿಯ ಆರ್‌ಸಿಯು ವ್ಯಾಪ್ತಿಗೆ ಒಳಪಡುವುದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಹೆಚ್ಚಿಸಿದೆ. 5 ಗಂಟೆ ಪ್ರಯಾಣಿಸಿ ಬೆಳಗಾವಿ ತಲುಪಬೇಕಾಗುತ್ತದೆ. ಆದರೆ, ಜಮಖಂಡಿ ಕೇವಲ 65 ಕಿಮೀ ದೂರ ಇರುವುದರಿಂದ ವಿಜಯಪುರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಯತ್ನ ಮಾಡಬಾರದು ಎಂದು ವಿವಿ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಗುಯಿಲಿನ್-ಬಾರ್‌ ಸಿಂಡ್ರೋಮ್‌ಗೆ ಕರ್ನಾಟಕದ ಬೆಳಗಾವಿಯಲ್ಲಿ ಮೊದಲ ಬಲಿ!

ನಗರಕ್ಕೆ ಕಳಶಪ್ರಾಯವಾಗಿರುವ ಬಾಗಲಕೋಟೆ ವಿಶ್ವವಿದ್ಯಾಲಯ ಮುಚ್ಚುವ ಪ್ರಯತ್ನವನ್ನು ಸರ್ಕಾರ ಕೂಡಲೇ ಹಿದಂಕ್ಕೆ ಪಡೆಯಬೇಕು, ಕೇವಲ 2 ವರ್ಷಗಳ ಅವಧಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ವರ್ಷಕ್ಕೆ ₹7 ಕೋಟಿ ಆಂತರಿಕ ಆದಾಯ ಹೊಂದಿದೆ. ಸರ್ಕಾರ ಕೂಲಂಕಶವಾಗಿ ಪರಿಶೀಲಿಸಿ ವಿವಿಯನ್ನು ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ಕನಸಿಗೆ ತಣ್ಣೀರೆರೆಚುವ ಕೆಲಸ ಮಾಡಬಾರದು.

-ಸಂದೀಪ ಬೆಳಗಲಿ, ಬಾಗಲಕೋಟೆ ವಿವಿ ಹೋರಾಟ ಸಮಿತಿ ಅಧ್ಯಕ್ಷರು ಜಮಖಂಡಿ

ನಗರದಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ವಿಶ್ವಕ್ಕೆ ಅಧ್ಯಾತ್ಮ ಪರಿಚಯಿಸಿದ ತತ್ವಜ್ಞಾನಿ ಗುರುದೇವ ರಾನಡೆ ಅವರ ನಮಕರಣ ಮಾಡಬೇಕು. ಜಮಖಂಡಿ ನಗರದ ಕೇಂದ್ರ ಸ್ಥಾನ, ಭವಿಷ್ಯದ ಜಿಲ್ಲೆಯೂ ಆಗಿದ್ದು, ಇಲ್ಲಿರುವ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಯತ್ನ ಸರ್ಕಾರದ ಮೂರ್ಖತನದ ನಿರ್ಧಾರ. ಉತ್ತರ ಕರ್ನಾಟಕ ಭಾಗದ ಅತ್ಯಂತ ಪ್ರಮುಖ ವಿಶ್ವವಿದ್ಯಾಲಯವಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿದ್ದು, ವಿವಿ ಮುಚ್ಚುವ ನಿರ್ಧಾರ ಕೈಬಿಡಬೇಕು.

- ಶ್ರೀಕಾಂತ ಕುಲಕರ್ಣಿ ಮಾಜಿ ಶಾಸಕರು ಜಮಖಂಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ