ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಕೆಗೆf ಬಿಬಿಎಂಪಿ ಹೊಸ ಯೋಜನೆ! ಹೇಗೆ ಅಳವಡಿಸಲಾಗುತ್ತೆ? ಉಪಯೋಗವೇನು? ಇಲ್ಲಿದೆ ವಿವರ ಮಾಹಿತಿ

Published : Feb 19, 2025, 06:57 AM ISTUpdated : Feb 19, 2025, 07:00 AM IST
ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಕೆಗೆf ಬಿಬಿಎಂಪಿ ಹೊಸ ಯೋಜನೆ! ಹೇಗೆ ಅಳವಡಿಸಲಾಗುತ್ತೆ? ಉಪಯೋಗವೇನು? ಇಲ್ಲಿದೆ ವಿವರ ಮಾಹಿತಿ

ಸಾರಾಂಶ

ಬೆಂಗಳೂರಿನಲ್ಲಿರುವ 2.79 ಲಕ್ಷ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್‌ ಅಳವಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. 2025-26ನೇ ಸಾಲಿನಲ್ಲಿ 60 ಸಾವಿರ ನಾಯಿಗಳಿಗೆ ಮೊದಲ ಹಂತದಲ್ಲಿ ಚಿಪ್‌ ಅಳವಡಿಸಲಾಗುವುದು. ಚಿಪ್‌ನಲ್ಲಿ ನಾಯಿಯ ವಾಸಸ್ಥಳ, ಲಸಿಕೆ ದಿನಾಂಕ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ದಿನಾಂಕ ಸೇರಿದಂತೆ ಹಲವು ಮಾಹಿತಿಗಳನ್ನು ದಾಖಲಿಸಲಾಗುತ್ತದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಫೆ.19): ರಾಜಧಾನಿಯಲ್ಲಿರುವ 2.79 ಲಕ್ಷ ಬೀದಿ ನಾಯಿಗಳಿಗೆ ತಲಾ ₹170 ವೆಚ್ಚದಲ್ಲಿ ಬಿಬಿಎಂಪಿಯು ಮೈಕ್ರೋ ಚಿಪ್‌ ಅಳವಡಿಕೆಗೆ ಯೋಜನೆ ರೂಪಿಸಿದ್ದು, 2025-26ನೇ ಸಾಲಿನಲ್ಲಿ ಮೊದಲ ಹಂತವಾಗಿ 60 ಸಾವಿರ ಬೀದಿ ನಾಯಿಗಳಿಗೆ ಅಳವಡಿಕೆ ಮಾಡುವ ಗುರಿ ಹಾಕಿಕೊಂಡಿದೆ.

ಬೀದಿ ನಾಯಿಯ ವಾಸ ಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ದಾಖಲಿಸುವ ಉದ್ದೇಶದಿಂದ ಬಿಬಿಎಂಪಿಯ ಪಶುಪಾಲನೆ ವಿಭಾಗವು ನಗರದಲ್ಲಿರುವ ಪ್ರತಿ ಬೀದಿ ನಾಯಿಗೆ ಮೈಕ್ರೋ ಚಿಪ್‌ ಅಳವಡಿಸಲು ತೀರ್ಮಾನಿಸಿದೆ. ಕಳೆದ ಸೆಪ್ಟಂಬರ್‌ನಲ್ಲಿ ನಗರದ ಮಲ್ಲೇಶ್ವರ ಹಾಗೂ ಮತ್ತಿಕೆರೆ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ನಡೆಸಿದ ಮೈಕ್ರೋ ಚಿಪ್‌ ಅಳವಡಿಕೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ನಗರದ ಎಲ್ಲಾ ಬೀದಿ ನಾಯಿಗಳಿಗೆ ಅಳವಡಿಕೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.

ಒಟ್ಟು ₹94 ಲಕ್ಷ ವೆಚ್ಚ:

ಬಿಬಿಎಂಪಿಯು 2023ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ನಗರದಲ್ಲಿ 2.79 ಲಕ್ಷ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ ಪ್ರತಿ ನಾಯಿಗೆ ₹170 ರಂತೆ ಹೆಚ್ಚುವರಿ ಶೇ.20ರಷ್ಟು ಮೀಸಲು ಮೈಕ್ರೋ ಚಿಪ್‌ ಸೇರಿದಂತೆ ಒಟ್ಟಾರೆ 3.30 ಲಕ್ಷ ಮೈಕ್ರೋ ಚಿಪ್‌ ಅಳವಡಿಕೆಗೆ ನಿರ್ಧರಿಸಲಾಗಿದೆ. ಅದಕ್ಕೆ ₹94.97 ಲಕ್ಷ ವೆಚ್ಚವಾಗಲಿದೆ. ಹಂತ-ಹಂತವಾಗಿ ಖರೀದಿ ಮಾಡಿ ಅಳವಡಿಕೆಯನ್ನೂ ಹಂತ ಹಂತವಾಗಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನ, ಚಿಪ್‌ ಮಾತ್ರ ಖರೀದಿ:

ಮೈಕ್ರೋ ಚಿಪ್‌ ಪೂರೈಕೆದಾರರಿಂದ ಚಿಪ್‌ ಹಾಗೂ ತಂತ್ರಜ್ಞಾನವನ್ನು ಮಾತ್ರ ಖರೀದಿ ಮಾಡಲಾಗುವುದು. ಬಿಬಿಎಂಪಿಯು ಈಗಾಗಲೇ ಲಸಿಕಿಕರಣಕ್ಕೆ ಸೇರಿದಂತೆ ಮೊದಲಾದ ಕಾರ್ಯಕ್ಕೆ ನೇಮಿಸಿಕೊಂಡ ಏಜೆನ್ಸಿ ಮೂಲಕ ಬೀದಿ ನಾಯಿಗಳಿಗೆ ಚಿಪ್‌ ಅಳವಡಿಕೆ ಮಾಡುವುದು. ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದ್ದು, ಗುತ್ತಿಗೆದಾರರ ತಾಂತ್ರಿಕ ಅರ್ಹತೆ ಪರಿಶೀಲನೆ ಹಂತದಲ್ಲಿದೆ. ಆ ಬಳಿಕ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಕಾರ್ಯಾದೇಶ ನೀಡಿ ಚಿಪ್‌ ಪಡೆದ ನಂತರ ಅಳವಡಿಕೆ ಕಾರ್ಯ ಆರಂಭಿಸುವುದಕ್ಕೆ ಬಿಬಿಎಂಪಿ ತಯಾರಿ ಮಾಡಿದೆ.

ಹೇಗಿರುತ್ತೆ ಮೈಕ್ರೋ ಚಿಪ್‌,ಅಳವಡಿಸೋದು ಹೇಗೆ?

ಮೈಕ್ರೋ ಚಿಪ್‌ ಅಕ್ಕಿಯ ಕಾಳಿನಷ್ಟು ಗಾತ್ರದಲ್ಲಿ ಇರಲಿದೆ. ಅದನ್ನು ನಾಯಿಯ ಭುಜದ ಭಾಗದ ಚರ್ಮದ ಒಳಗೆ ಇಂಜಕ್ಷನ್‌ ಮೂಲಕ ಅಳವಡಿಕೆ ಮಾಡಲಾಗುತ್ತದೆ. ಚಿಪ್‌ ಅಳವಡಿಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಎಲ್ಲಾ ನಾಯಿಗಳಿಗೂ ಅಳವಡಿಕೆ ಮಾಡಬಹುದಾಗಿದ್ದು, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಈಗಾಗಲೇ ದೇಶದ ವಿವಿಧ ನಗರಗಳಾದ ಗೋವಾ, ರಾಜ್‌ ಕೋಟ್‌, ಅಹಮದಾಬಾದ್‌ ಸೇರಿದಂತೆ ಮೊದಲಾದ ಕಡೆ ಅಳವಡಿಕೆ ಮಾಡಲಾಗಿದೆ.

ಚಿಪ್‌ನಲ್ಲಿ ಹಲವು ಮಾಹಿತಿ ಸಂಗ್ರಹ

ಚಿಪ್‌ನಲ್ಲಿ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್ ಲಸಿಕೆ ನೀಡಿದ ವಿವರ ಸೇರಿದಂತೆ ನಾಯಿ ಗಂಡು ಅಥವಾ ಹೆಣ್ಣು, ನಾಯಿಯ ವಯಸ್ಸು, ನಾಯಿಯ ಫೋಟೋ ಸೇರಿದಂತೆ ಮೊದಲಾದ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ನಾಯಿಯನ್ನು ಹಿಡಿದು ಮೈಕ್ರೋ ಚಿಪ್ ಅನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ, ಎಲ್ಲ ಮಾಹಿತಿ ಮೊಬೈಲ್‌ಗೆ ಲಭ್ಯವಾಗಲಿದೆ. ಈ ಮಾಹಿತಿ ಪರಿಷ್ಕರಣೆ, ಬದಲಾವಣೆ, ಹೆಚ್ಚಿನ ಮಾಹಿತಿ ದಾಖಲು ಮಾಡುವುದಕ್ಕೆ ಅವಕಾಶ ಇರಲಿದೆ.

ಬಿಬಿಎಂಪಿಗೆ ಉಪಯೋಗವೇನು?

ಪ್ರಸ್ತುತ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣ ಹಚ್ಚಿ ಗುರುತಿಸಲಾಗುತ್ತಿದ್ದು, ಒಂದು ವಾರ ಮಾತ್ರ ಗುರು ಬಣ್ಣದ ಗುರುತು ಪತ್ತೆ ಮಾಡಬಹುದಾಗಿದೆ. ನಂತರ ಬಣ್ಣ ಮಾಸಿ ಹೋಗಲಿದೆ. ಇದರಿಂದ ಯಾವ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಪತ್ತೆ ಮಾಡುವುದು ಕಷ್ಟವಾಗಿದೆ. ಇದರಿಂದ ಪದೇ ಪದೆ ಲಸಿಕೆ ಹಾಕುವ ಸಾಧ್ಯತೆ ಇದೆ. ಈ ರೀತಿ ಲಸಿಕೆ ಮತ್ತು ಶಸ್ತ್ರ ಚಿಕಿತ್ಸೆ ಆಗುವ ವೆಚ್ಚ ಕಡಿಮೆ ಮಾಡಬಹುದಾಗಿದೆ.ಪ್ರಾಯೋಗಿಕವಾಗಿ ಮೈಕ್ರೋ ಚಿಪ್‌ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಇದೀಗ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಕ್‌ ಅಳವಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 50 ರಿಂದ 60 ಸಾವಿರ ಬೀದಿ ನಾಯಿಗಳಿಗೆ ಅಳವಡಿಕೆ ಮಾಡಲಾಗುವುದು.

-ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಪಶುಪಾಲನೆ ವಿಭಾಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!