
ಬೆಳಗಾವಿ (ಫೆ.19): ದೇಶದ ಕೆಲವೆಡೆ ತೀವ್ರ ಆತಂಕ ಮೂಡಿಸಿರುವ ಗುಯಿಯನ್ ಬರ್ರೆ ಸಿಂಡ್ರೋಮ್ (ಜಿಬಿಎಸ್) ನರರೋಗ ವ್ಯಾಧಿಯ ಪ್ರಕರಣಗಳು ಮಹಾರಾಷ್ಟ್ರದ ಜತೆ ಗಡಿಭಾಗವಾದ ಬೆಳಗಾವಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿವೆ. ಸೋಮವಾರವಷ್ಟೇ ನಿಪ್ಪಾಣಿ ವೃದ್ಧರೊಬ್ಬರು ರೋಗಕ್ಕೆ ಬಲಿಯಾಗಿದ್ದು, ಇದು ಮೊದಲ ಜಿಬಿಎಸ್‌ಗೆ ರಾಜ್ಯದ ಮೊದಲ ಬಲಿ ಎನ್ನಲಾಗಿತ್ತು. ಆದರೆ ಅದಕ್ಕಿಂತ 3-4 ದಿನ ಮೊದಲೇ ಹುಕ್ಕೇರಿ ತಾಲೂಕಿನ 14 ವರ್ಷದ ಬಾಲಕ ಕೂಡ ಇದೇ ಸೋಂಕಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇದು ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಕಾಗವಾಡ, ಸಂಕೇಶ್ವರ ಭಾಗದ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.ಮಹಾರಾಷ್ಟ್ರದಲ್ಲಿ ವ್ಯಾಪಕ ಸೋಂಕು:
ಮಹಾರಾಷ್ಟ್ರದ ಪಂಢರಪುರ, ಪುಣೆ, ಕೊಲ್ಹಾಪುರ, ಸಾಂಗ್ಲಿ, ಅಕ್ಕಲಕೋಟೆ ಮತ್ತಿತರ ಕಡೆಗಳಲ್ಲಿ ಜಿಬಿಎಸ್ ವ್ಯಾಧಿ ವ್ಯಾಪಕವಾಗಿ ಹರಡುತ್ತಿದೆ. ಅಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ಮಧ್ಯೆ, ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ದೋನೆವಾಡಿ ಗ್ರಾಮದ ಯೆತಿಲ್ ಬಾಳಗೌಡ ಪಾಟೀಲ (64) ಸೋಮವಾರ ಜಿಬಿಎಸ್ ಸೋಂಕಿಗೆ ಬಲಿಯಾಗಿರುವುದನ್ನು ಕೊಲ್ಲಾಪುರದ ಆಸ್ಪತ್ರೆ ದೃಢಪಡಿಸಿದೆ. ಈ ಮಧ್ಯೆ, ಮೂರ್ನಾಲ್ಕು ದಿನಗಳ ಹಿಂದೆ ಹುಕ್ಕೇರಿ ತಾಲೂಕಿನ 14 ವರ್ಷದ ಬಾಲಕ ಕೂಡ ಇದೇ ಸೋಂಕಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಬಾಲಕನ ಸಾವು ಈ ಸೋಂಕಿನಿಂದಲೇ ಎಂಬುದು ವೈದ್ಯಕೀಯ ವರದಿಯಲ್ಲಿ ಖಚಿತವಾದಲ್ಲಿ ಜಿಲ್ಲೆಯಲ್ಲಿ ಜಿಬಿಎಸ್ ಸೋಂಕಿಗೆ ರಾಜ್ಯದ ಇಬ್ಬರು ಬಲಿಯಾದಂತಾಗುತ್ತದೆ.
ಇದನ್ನೂ ಓದಿ: ನರಸಂಬಂಧಿ ಮಾರಕ ಜಿಬಿಎಸ್ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ಇದುವರೆಗೆ ದೇಶದಲ್ಲಿ 19 ಸಾವು
ನರಗಳ ಮೇಲೆ ಪರಿಣಾಮ:
ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನಿಂದ ಜಿಬಿಎಸ್ ಸೋಂಕು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಜಿಬಿಎಸ್ ವೇಗವಾಗಿ ಆಕ್ರಮಣ ಮಾಡುತ್ತದೆ. ಈ ವೈರಸ್, ನರಗಳ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತದೆ. ಇದು ಸಾಂಕ್ರಾಮಿಕ ರೋಗವಲ್ಲವಾದರೂ ಮುಂಜಾಗ್ರತಾ ಕ್ರಮ ಅಗತ್ಯ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಗಡಾದ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಜಿಬಿಎಸ್ ಸೋಂಕಿನ ಬಗ್ಗೆ ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಜನರು ಮೊದಲು ಜಾಗೃತರಾಗಬೇಕು. ಶಂಕಿತ ಜಿಬಿಎಸ್ ಪ್ರಕರಣ ಕಂಡು ಬಂದಲ್ಲಿ ಅಂತಹ ಸ್ಥಳಗಳಿಗೆ ತೆರಳಿ, ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಲಾಗುತ್ತದೆ ಎಂದಿದ್ದಾರೆ ಡಾ.ಗಡಾದ.
ಇದನ್ನೂ ಓದಿ: ಗುಯಿಲಿನ್-ಬಾರ್ ಸಿಂಡ್ರೋಮ್‌ಗೆ ದೇಶದಲ್ಲಿ ಮೊದಲ ಬಲಿ, ಜಿಬಿಎಸ್ ಚಿಕಿತ್ಸೆಯ 1 ಇಂಜೆಕ್ಷನ್‌ಗೆ 20 ಸಾವಿರ ರೂಪಾಯಿ!
ಬೆಳಗಾವಿ ಜಿಲ್ಲೆಯಲ್ಲಿ ಜಿಬಿಎಸ್ ಸೋಂಕಿನಿಂದ ವೃದ್ಧರೊಬ್ಬರು ಮೃತಪಟ್ಟಿರುವುದನ್ನು ಕೊಲ್ಹಾಪುರ ಸಿಪಿಆರ್ ಆಸ್ಪತ್ರೆ ದೃಢಪಡಿಸಿದೆ. ಶಂಕಿತ ಜಿಬಿಎಸ್ ಸೋಂಕಿತರು ಕಂಡು ಬಂದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯಇಲ್ಲ.
- ಡಾ.ಎಸ್.ಎಸ್.ಗಡಾದ, ಜಿಲ್ಲಾ ಆರೋಗ್ಯಾಧಿಕಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ