
ಬೆಂಗಳೂರು : ಬೆಟ್ಟ ಕುರುಬ ಜಾತಿಯನ್ನು ಪರಿಶಿಷ್ಟಪಂಗಡದ ಪಟ್ಟಿಯಲ್ಲಿ ಸೇರುವ ಬಗ್ಗೆ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರವು ಸ್ಪಂದಿಸಿದ್ದು, ಕಾಡು ಕುರುಬ ಜಾತಿಗೆ ಸಮಾನಾಂತರವಾಗಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ಸಮ್ಮತಿ ನೀಡಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದಲ್ಲಿ ಬೆಟ್ಟಕುರುಬ ಜಾತಿಯನ್ನು ಪರಿಶಿಷ್ಟಪಂಗಡದ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಯಿತು. ಈ ಮೂಲಕ ಬೆಟ್ಟಕುರುಬ ಸಮುದಾಯಕ್ಕೆ ಸಿಗಬೇಕಾದ ನ್ಯಾಯಸಮ್ಮತ ಮೀಸಲಾತಿಯನ್ನು ಕಲ್ಪಿಸಲು ಸರ್ಕಾರ ಪ್ರಯತ್ನ ಮಾಡಿದೆ. ಸರ್ಕಾರದ ತೀರ್ಮಾನದಿಂದ ಮೀಸಲಾತಿ ಸೌಲಭ್ಯ ಸಿಗುವ ಆಶಾಭಾವನೆ ಮೂಡಿದೆ.
ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಈ ವಿಷಯ ತಿಳಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿಯ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್-2 ಒಂದು ಸಾವಿರ ಸಿಬ್ಬಂದಿಗೆ ಎಸ್‌ಎಸ್‌ಎಲ್‌ಸಿ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಮುಂಬಡ್ತಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. 2014ಕ್ಕಿಂತ ಮೊದಲು ನೇಮಕಗೊಂಡವರಿಗೆ ಎಸ್‌ಎಸ್‌ಎಲ್‌ಸಿ ಅರ್ಹತೆ ಇತ್ತು. ನಂತರ ನೇಮಕಾತಿಗೆ ಪಿಯುಸಿಗೆ ಅರ್ಹತೆ ನಿಗದಿ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಅರ್ಹತೆ ಇರುವವರಿಗೆ ಬಡ್ತಿ ನೀಡುವುದು ಕಷ್ಟವಾಗಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬರುವ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಲು 77.64 ಕೋಟಿ ರು. ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಯಿತು. ಸುಮಾರು 44.57 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಲಾಗುವುದು. 2018-19ನೇ ಸಾಲಿನಲ್ಲಿ ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಔಷಧಿ ಕಿಟ್‌ಗಳನ್ನು 9.63 ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪೂರ್ವ ಶಿಕ್ಷಣ ಕಿಟ್‌ಗಳನ್ನು 19.77 ಕೋಟಿ ರು. ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಬೇಲೂರು-ಹಾಸನ-ಸಕಲೇಶಪುರ ರೈಲ್ವೆ ಯೋಜನೆ ಪರಿವರ್ತನೆ ಮಾಡಿ ಚಿಕ್ಕಮಗಳೂರು-ಬೇಲೂರು-ಸಕಲೇಶಪುರ ರೈಲ್ವೆ ಮಾರ್ಗ ಯೋಜನೆಯಾಗಿ ಕೈಗೆತ್ತಿಗೊಳ್ಳಲು ಸಚಿವ ಸಂಪುಟ ಸಮ್ಮತಿ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.50:50ರಷ್ಟುವೆಚ್ಚ ಹಂಚಿಕೆಗೆ ಅನುಮೋದನೆ ನೀಡಲಾಗಿದೆ. ರಾಜ್ಯದ 60 ನಾಡ ಕಚೇರಿಗಳು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ 10 ಕೋಟಿ ರು. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಸಚಿವ ಸಂಪುಟದ ಇತರೆ ನಿರ್ಣಯಗಳು:
- ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇತರೆ 23 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 73.62 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ.
- ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ಪ್ರಸ್ತಾಪಿಸಿರುವ ಕುಸನೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ 88.31ಎಕರೆ ಜಮೀನಿನಲ್ಲಿ 94.80 ಕೋಟಿ ರು ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆ.
- ಆಲಮಟ್ಟಿಜಲಾಶಯಕ್ಕೆ ಸಂಬಂಧಿಸಿದಂತೆ ಅಣೆಕಟ್ಟು ಪುನಃಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯಡಿ ಬರುವ ಆಲಮಟ್ಟಿಅಣೆಕಟ್ಟಿನ 1ನೇ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಶೇ.34.75ರ ಹೆಚ್ಚುವರಿ ಆರ್ಥಿಕ ಹೊಣೆ 7.66 ಕೋಟಿ ರು. ಮೊತ್ತಕ್ಕೆ ಅನುಮೋದನೆ.
- ಬಳ್ಳಾರಿಯಲ್ಲಿ ಎರಡು ಎಕರೆ ಜಮೀನನ್ನು ಆದಾಯ ತೆರಿಗೆ ಇಲಾಖೆಗೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಮಾರುಕಟ್ಟೆದರ ವಿಧಿಸಿ ಮಂಜೂರು ಮಾಡಲು ಒಪ್ಪಿಗೆ.
- ಚಿಕ್ಕಮಗಳೂರಿನಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ನೀಡಲಾಗಿದ್ದ 600 ಎಕರೆ ಜಮೀನನ್ನು ವಾಪಸ್ ಅರಣ್ಯ ಇಲಾಖೆಗೆ ಪಡೆದುಕೊಳ್ಳಲು ಅನುಮೋದನೆ.
ಕೆಪಿಎಸ್‌ಸಿಗೆ ಹಂಗಾಮಿ ಅಧ್ಯಕ್ಷರ ನೇಮಕಕ್ಕೆ ಅಸ್ತು
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹಂಗಾಮಿ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸುತ್ತೂರು ಶ್ರೀಗಳ ಪೂರ್ವಾಶ್ರಮದ ಸಹೋದರರೂ ಆಗಿರುವ ಕೆಪಿಎಸ್‌ಸಿಯ ಹಾಲಿ ಸದಸ್ಯ ಷಡಕ್ಷರಿಸ್ವಾಮಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲು ಹಸಿರು ನಿಶಾನೆ ನೀಡಲಾಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯು ಸದ್ಯಕ್ಕೆ ಖಾಲಿ ಇರುವ ಹಿನ್ನೆಲೆಯಲ್ಲಿ ಭರ್ತಿ ಮಾಡಲಾಗಿದೆ. ಶೀಘ್ರದಲ್ಲಿಯೇ ಖಾಯಂ ಅಧ್ಯಕ್ಷರ ನೇಮಕವನ್ನು ಮಾಡಲಾಗುವುದು ಎಂದು ಸಚಿವ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ