ಜಾಮೀನುರಹಿತ ವಾರಂಟ್: ಬಳ್ಳಾರಿಯ ಇಬ್ಬರು 'ಕೈ' ಶಾಸಕರಿಗೆ ಬಂಧನ ಭೀತಿ!

By Web Desk  |  First Published Jan 11, 2019, 9:44 AM IST

ಬಳ್ಳಾರಿಯ ಇಬ್ಬರು ಶಾಸಕರಿಗೆ ಬಂಧನ ಭೀತಿ| ಬೇಲೆಕೇರಿ ಪ್ರಕರಣ: ಜಾಮೀನುರಹಿತ ವಾರಂಟ್‌ ಜಾರಿ| ನಾಗೇಂದ್ರ, ಆನಂದ್‌ ಸಿಂಗ್‌ಗೆ ವಾರಂಟ್‌ ನೀಡಿದ ಕೋರ್ಟ್


ಬೆಂಗಳೂರು[ಜ.11]: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಇಬ್ಬರು ಕಾಂಗ್ರೆಸ್‌ ಶಾಸಕರಿಗೆ ಬಂಧನ ಭೀತಿ ಎದುರಾಗಿದೆ.

ಪ್ರಕರಣದ ವಿಚಾರಣೆಗೆ ಸುದೀರ್ಘ ಗೈರು ಹಾಜರಾದ ಕಾರಣಕ್ಕೆ ನ್ಯಾಯಾಲಯವು ಗುರುವಾರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರಿಗೆ ವಾರಂಟ್‌ ಜಾರಿಗೊಳಿಸಿತು.

Tap to resize

Latest Videos

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ನ್ಯಾಯಾಲಯಕ್ಕೆ ಶಾಸಕರ ವಿರುದ್ಧ ಆರೋಪ ಪಟ್ಟಿಸಲ್ಲಿಸಿತ್ತು. ಇದರ ವಿಚಾರಣೆ ಕೈಗೆತ್ತಿಕೊಂಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಪ್ರಕರಣದಲ್ಲಿ ತಮ್ಮನ್ನು ಕೈಬಿಡುವಂತೆ ಕೋರಿ ಶಾಸಕರು ಮಾಡಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಆದರೆ ಪದೇ ಪದೇ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯವು, ಕೊನೆಯ ಸಮನ್ಸ್‌ ನೀಡಿದ್ದರೂ ಗುರುವಾರ ಮತ್ತೆ ವಿಚಾರಣೆಗೆ ಗೈರಾದ ಶಾಸಕರಿಗೆ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.

ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್‌ ಕಂಪನಿಯ ಹೆಸರಿನಲ್ಲಿ ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಲಾಗಿದ್ದ 50 ಸಾವಿರ ಟನ್‌ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಾರೆ ಎಂದು ಶಾಸಕರಾದ ಆನಂದ್‌ ಸಿಂಗ್‌ ಹಾಗೂ ಬಿ.ನಾಗೇಂದ್ರ ಸೇರಿ 18 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಸಿಬಿಐ ದೋಷಾರೋಪ ಪಟ್ಟಿಸಲ್ಲಿಸಿದೆ.

click me!