ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಸೀಕ್ರೆಟ್‌ ಬಾಕ್ಸ್‌ ಮತ್ತು 4 ಸೂತ್ರಗಳು!

By Kannadaprabha News  |  First Published May 16, 2023, 4:05 AM IST

ಭಾರಿ ಬಹುಮತದಿಂದ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಗೆ ಹಿಡಿದಿರುವ ಬಿಗಿ ಪಟ್ಟನ್ನು ದಿನ ಕಳೆದಂತೆ ಮತ್ತಷ್ಟುಬಿಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಗ್ಗಂಟು ಬಗೆಹರಿಸುವ ಹೊಣೆ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಹೆಗಲೇರಿದೆ.


ಬೆಂಗಳೂರು (ಮೇ.16) : ಭಾರಿ ಬಹುಮತದಿಂದ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಗೆ ಹಿಡಿದಿರುವ ಬಿಗಿ ಪಟ್ಟನ್ನು ದಿನ ಕಳೆದಂತೆ ಮತ್ತಷ್ಟುಬಿಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಗ್ಗಂಟು ಬಗೆಹರಿಸುವ ಹೊಣೆ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಹೆಗಲೇರಿದೆ.

ಸೋನಿಯಾ ಹಾಗೂ ರಾಹುಲ್‌ ಅವರ ಮಧ್ಯಸ್ಥಿಕೆ ಇಲ್ಲದೇ ಈ ಕಗ್ಗಂಟು ಬಗೆಹರಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಭಾನುವಾರ ನಡೆಸಲಾದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ಬಿಡುವ ಏಕ ಸಾಲಿನ ನಿರ್ಣಯ ಹಾಗೂ ಅದರೊಟ್ಟಿಗೆ ಎಲ್ಲ ಶಾಸಕರ ರಹಸ್ಯ ಮತದಾನ ಕೂಡ ನಡೆಸಲಾಗಿತ್ತು.

Tap to resize

Latest Videos

DK Shivakumar: ಡಿಕೆಶಿಗೇ ಸಿಎಂ ಪಟ್ಟ: ಒಕ್ಕಲಿಗ ಸಂಘ ಪಟ್ಟು!...

ಈ ರಹಸ್ಯ ಮತದಾನದ ಪೆಟ್ಟಿಗೆಯನ್ನು ಕಾಂಗ್ರೆಸ್‌ ವೀಕ್ಷಕರು ಸೋಮವಾರವೇ ದೆಹಲಿಗೆ ಒಯ್ದಿದ್ದರು. ಇದರ ಹಿನ್ನೆಲೆಯಲ್ಲೇ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ(DK Shivakumar and Siddaramaiah) ಅವರಿಗೆ ದೆಹಲಿಗೆ ಬರುವಂತೆ ಬುಲಾವ್‌ ಕೂಡ ಬಂದಿತ್ತು. ಅದರಂತೆ, ಸಿದ್ದರಾಮಯ್ಯ ಅವರು ಸೋಮವಾರ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರೂ ಡಿ.ಕೆ. ಶಿವಕುಮಾರ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸ ರದ್ದುಪಡಿಸಿದರು.

ಈ ರೀತಿ ಹಠಾತ್‌ ದೆಹಲಿ ಯಾತ್ರೆ ರದ್ದಾಗುವುದರ ಹಿಂದೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ(Soniya gandhi and rahul gandhi)ಅವರು ದೆಹಲಿಯಲ್ಲಿ ಸೋಮವಾರ ಇಲ್ಲದ್ದೇ ಇದ್ದದ್ದು ಕೂಡ ಕಾರಣ ಎನ್ನಲಾಗುತ್ತಿದೆ. ವಾಸ್ತವವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರು ಸೋಮವಾರ ವೀಕ್ಷಕರೊಂದಿಗೆ ಸಭೆ ನಡೆಸಿ ಶಾಸಕಾಂಗ ಪಕ್ಷದ ಸಭೆಯ ನಡಾವಳಿಯ ಮಾಹಿತಿ ಹಾಗೂ ರಹಸ್ಯ ಮತದಾನದ ಪೆಟ್ಟಿಗೆ ಸುಪರ್ದಿಗೆ ಪಡೆದಿದ್ದರು. ಈ ಪೆಟ್ಟಿಗೆಯನ್ನು ದೆಹಲಿಗೆ ಆಗಮಿಸುವ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಸಮ್ಮುಖ ತೆರೆದು ಶಾಸಕರ ಅಭಿಪ್ರಾಯವನ್ನು ಉಭಯ ನಾಯಕರಿಗೂ ತಿಳಿಸಿ ಮುಖ್ಯಮಂತ್ರಿ ಹುದ್ದೆಯ ವಿಚಾರ ಬಗೆಹರಿಸಬೇಕಿತ್ತು.

ಆದರೆ, ಖರ್ಗೆ ಅವರ ಸಮ್ಮುಖವೇ ಈ ಪೆಟ್ಟಿಗೆ ತೆರೆದು ಅದರ ಪರಿಣಾಮ ಏನೇ ಆಗಿದ್ದರೂ ಉಭಯ ನಾಯಕರ ಪೈಕಿ ಸಿಎಂ ಹುದ್ದೆ ದೊರೆಯದವರು ಈ ನಿರ್ಣಯಕ್ಕೆ ಒಪ್ಪದೇ ಬಂಡಾಯವೇಳುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ. ಹೀಗಾಗಿ ಈ ನಿರ್ಣಯ ಸೋನಿಯಾ ಹಾಗೂ ರಾಹುಲ್‌ ಅವರಲ್ಲದೆ ಮತ್ಯಾರಿಂದಲೂ ಬಗೆಹರಿಯುವ ಯಾವ ಸಾಧ್ಯತೆಗಳು ಇದ್ದಂತಿಲ್ಲ ಎಂದು ಮೂಲಗಳು ಹೇಳುತ್ತವೆ.

ಸೋನಿಯಾ ಹಾಗೂ ರಾಹುಲ್‌ ಗಾಂಧಿ ಅವರೇ ಉಭಯ ನಾಯಕರೊಂದಿಗೆ ನೇರಾ ನೇರ ಮಾತುಕತೆ ನಡೆಸಿ ಸಂಧಾನ ಸೂತ್ರ ರೂಪಿಸಿ ಸಮಸ್ಯೆ ಬಗೆಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಹಸ್ಯ ಮತ ಪೆಟ್ಟಿಗೆ ಹಾಗೂ ಸಂಧಾನ ಸೂತ್ರದ ಪದರಗಳು ಸೋನಿಯಾ ಮತ್ತು ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ ನಂತರವೇ ಬಹಿರಂಗಕ್ಕೆ ಬರಬೇಕಿದೆ.

4 ಸಂಧಾನ ಸೂತ್ರ ಏನು?:

ಮೂಲಗಳ ಪ್ರಕಾರ ಉಭಯ ನಾಯಕರ ನಡುವೆ ಸಂಧಾನ ನಡೆಸಲು ಹೈಕಮಾಂಡ್‌ ಮುಂದೆ ರಹಸ್ಯ ಮತ ಪೆಟ್ಟಿಗೆಯಲ್ಲಿನ ಫಲಿತಾಂಶದ ಆಧಾರದ ಮೇಲೆ ನಾಲ್ಕು ಸೂತ್ರಗಳಿವೆ. ಅವು-

ಸೂತ್ರ 1: ರಹಸ್ಯ ಮತ ಪೆಟ್ಟಿಗೆ ತೆರೆದಾಗ ಶಾಸಕರ ಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಕಂಡು ಬಂದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸುವುದು. ಡಿ.ಕೆ.ಶಿವಕುಮಾರ್‌ ಅವರಿಗೆ ಉಪಮುಖ್ಯಮಂತ್ರಿ ಪಟ್ಟಹಾಗೂ ಪ್ರಬಲ ಖಾತೆಗಳನ್ನು ನೀಡುವುದು. ಅಲ್ಲದೆ, ಸಚಿವ ಸಂಪುಟ ಹಾಗೂ ನಿಗಮ ಮಂಡಳಿಯಲ್ಲಿ ಡಿ.ಕೆ. ಶಿವಕುಮಾರ್‌ ಸೂಚಿಸಿದವರಿಗೂ ಸ್ಥಾನ ಮಾನ ನೀಡುವುದು. ಈ ಸೂತ್ರ ಒಪ್ಪಿತವಾದರೆ ಆಗ ಕೆಪಿಸಿಸಿ ಹುದ್ದೆ ಕಥೆ ಏನಾಗುತ್ತದೆ ಎಂಬುದು ಸ್ಪಷ್ಟವಿಲ್ಲ.

ಸೂತ್ರ 2: ರಹಸ್ಯ ಮತ ಪೆಟ್ಟಿಗೆಯ ಫಲಿತಾಂಶ ಏನೇ ಇದ್ದರೂ ಅದನ್ನು ನಿರ್ಲಕ್ಷಿಸಿ ಅಧಿಕಾರಾವಧಿಯನ್ನು ಉಭಯ ನಾಯಕರ ನಡುವೆ ಹಂಚುವುದು. ಈ ಹಂಚಿಕೆಯು ತಲಾ ಎರಡೂವರೆ ವರ್ಷ ಅವಧಿಯದ್ದಾಗಿರಬಹುದು ಅಥವಾ ಮೊದಲ ಅವಧಿಗೆ ಮುಖ್ಯಮಂತ್ರಿಯಾದವರಿಗೆ ಮೂರು ವರ್ಷ, ನಂತರದವರಿಗೆ ಎರಡು ವರ್ಷ ಇಲ್ಲವೇ ಮೊದಲ ಅವಧಿಯವರಿಗೆ ಎರಡು ವರ್ಷ ಹಾಗೂ ಅನಂತರದ ಅವಧಿಗೆ ಮೂರು ವರ್ಷ ನೀಡುವುದು. ಹಿರಿತನದ ಆಧಾರದ ಮೇಲೆ ಮೊದಲ ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಅನಂತರದ ಅವಧಿಗೆ ಡಿ.ಕೆ. ಶಿವಕುಮಾರ್‌ ಅವರಿಗೆ ಹುದ್ದೆ ನೀಡುವುದು. ಮೊದಲ ಅವಧಿಗೆ ಸಿದ್ದರಾಮಯ್ಯ ಅವರಿಗೆ ನೀಡುವಾಗ ಅವಧಿ ಮುಗಿದ ನಂತರ ಹುದ್ದೆಯನ್ನು ಬಿಟ್ಟುಕೊಡುವ ವಾಗ್ದಾನವನ್ನು ಹೈಕಮಾಂಡ್‌ ಮುಂದೆಯೇ ಪಡೆಯುವುದು.

ಬಜರಂಗದಳ ನಿಷೇಧ ವಿಚಾರ; ಖರ್ಗೆ ವಿರುದ್ಧ 100 ಕೋಟಿ ರು. ಮಾನಹಾನಿ ಕೇಸ್‌ !

ಸೂತ್ರ 3: ಶಾಸಕರ ಬೆಂಬಲ ಡಿ.ಕೆ. ಶಿವಕುಮಾರ್‌ ಅವರಿಗೆ ಇದೆ ಎಂದಾದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡುವುದು. ನೂತನ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ವಾದವನ್ನೇ ಅವರ ಮುಂದಿಟ್ಟು ಸಿದ್ದರಾಮಯ್ಯ ಅವರನ್ನು ಒಪ್ಪಿಸುವುದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸೂಚಿಸಿದವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದು.

ಸೂತ್ರ 4: ಈ ಯಾವ ಸೂತ್ರಗಳಿಗೂ ಉಭಯ ನಾಯಕರು ಒಪ್ಪದೇ ಬಿಗಿ ಪಟ್ಟು ಮುಂದುವರೆಸಿದರೆ ಲೋಕಸಭಾ ಚುನಾವಣೆವರೆಗೂ ಉಭಯ ನಾಯಕರಿಗೆ ಹೊರತಾದ ಹಿರಿಯರೊಬ್ಬರಿಗೆ ಮುಖ್ಯಮಂತ್ರಿ ಹುದ್ದೆ ನೀಡುವುದು.

click me!