ಕೊರೋನಾ 4ನೇ ಅಲೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಾ. ಮಂಜುನಾಥ್ ಮಾಹಿತಿ

By Suvarna NewsFirst Published Mar 22, 2022, 10:43 PM IST
Highlights

* ಭಾರತದಲ್ಲೂ ಶುರುವಾಯ್ತು ಕೋರೋನಾ ನಾಲ್ಕನೇ ಅಲೆ ಆತಂಕ
* ಕೊಂಚ ಕಾಲ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಇದೀಗ 4ನೇ ಅಲೆ ಶಾಕ್
* ಮುಂಜಾಗ್ರತಾ ಕ್ರಮಗಳ ಬಗ್ಗೆ ಡಾ. ಮಂಜುನಾಥ್ ಮಾಹಿತಿ

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
 

ಬೆಂಗಳೂರು (ಮಾ.22): ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ಕೊರೋನಾ ವೈರಸ್ (Coronavirus) ಭೀತಿಯಿಂದ ಜನ ಕಂಗೆಟ್ಟಿದ್ದರು. ಕೊರೋನಾ (Corona) ಸೃಷ್ಟಿಸಿದ ಅನಾಹುತ ಅಷ್ಟಿಷ್ಟಲ್ಲ. ಭಾರತವು ಈಗಾಗಲೇ ಕೋವಿಡ್ -19 ರ ಮೂರು ಅಲೆಗಳನ್ನು ಎದುರಿಸಿದ್ದು, ಈ ಪೈಕಿ ಡೆಲ್ಟಾ (Delta) ರೂಪಾಂತರದಿಂದ ಬಂದ ಎರಡನೇ ಅಲೆ ಮಾರಣಾಂತಿಕವಾಗಿತ್ತು. ಅನೇಕ ಜನರ ಜೀವವನ್ನು ಬಲಿ ಪಡೆದು ಹೋಗಿತ್ತು.  

ಎಲ್ಲಾ ಅಲೆ ಮುಗೀತು. ಇನ್ಮುಂದೆಯಾದ್ರೂ ನೆಮ್ಮದಿಯಾಗಿರೊಣ ಅಂತ ಕೊಂಚ ಕಾಲ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಇದೀಗ ಕೊರೊನಾ ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಮತ್ತೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದ್ದು,ಕೋವಿಡ್ -19 ರ ಸಂಭವನೀಯ ನಾಲ್ಕನೇ ಅಲೆಯ (Covid-19 Fourth Wave) ವರದಿಗಳು ಬರುತ್ತಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಾದ ಡಾ.  ಮಂಜುನಾಥ್ ಕೆಲ ಸಲಹೆ, ಸೂಚನೆಗಳನ್ನ ನೀಡಿದ್ದು, ಅದು ಈ ಕೆಳಗಿನಂತಿದೆ ನೋಡಿ 

Covid 4th Wave: ಕರ್ನಾಟಕದಲ್ಲಿ 4ನೇ ಅಲೆ ಬಗ್ಗೆ ಸಚಿವ ಸುಧಾಕರ್‌ ಹೇಳಿದ್ದಿಷ್ಟು

4ನೇ ಅಲೆ ಬಗ್ಗೆ ಡಾ. ಮಂಜುನಾಥ್ ಮಾಹಿತಿ
ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕೊರೋನಾ ನಾಲ್ಕನೇ ಅಲೆ ಬರಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಾದ ಡಾ.  ಮಂಜುನಾಥ್ (Dr Manjunath) ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಮುಂದಿನ ಅಲೆ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದು ಸಲಹೆ ನೀಡಿದ್ದಾರೆ. 

ಈಗಾಗಲೇ ಚೀನಾದಲ್ಲಿ ಲಕ್ಷಾಂತರ ಕೋವಿಡ್ ಕೇಸ್ ಪತ್ತೆಯಾಗ್ತಿದೆ. ದಕ್ಷಿಣ ಕೊರಿಯಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಒಮಿಕ್ರಾನ್ ತಳಿಯಿಂದಲೇ ಮತ್ತೊಂದು ಅಲೆ ಸೃಷ್ಠಿಯಾಗುವ ಸಾಧ್ಯತೆ ಇದೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ನಾಲ್ಕನೇ ಅಲೆ ಬರುವ ಸಾಧ್ಯತೆ ಅತಿ ಹೆಚ್ಚು ಎಂದು ಎಚ್ಚರಿಸಿದ್ದಾರೆ. 

ನಾಲ್ಕನೇ ಅಲೆ ಮುಂಜಾಗ್ರತೆ ಇರಲಿ
ಮೂರು ಅಲೆ ಮುಗಿಸಿದ್ದೇವೆ ಎಂದು ನಾಲ್ಕನೇ ಅಲೆ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಕೊರೋನಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಈಗೀಗ ಮಾಸ್ಕ್ ಹಾಕುವವರ ಸಂಖ್ಯೆ ಕಡಿಮೆ ಇದೆ. ಮಾಸ್ಕ್ ಧಾರಣೆ ಕಡ್ಡಾಯ ಮಾಡಬೇಕು ಎಂದು  ಮಂಜುನಾಥ್ ಹೇಳಿದ್ದಾರೆ 

ನಾಲ್ಕನೇ ಅಲೆ ತಡೆಗೆ ಏನು ಕ್ರಮ ಅಗತ್ಯ?
ಕೊರೋನಾ ನಿಯಮಗಳನ್ನು ಜನ ಹೆಚ್ಚಾಗಿ ಪಾಲಿಸುವಂತೆ ಮಾಡಬೇಕಿದೆ. ಒಳಾಂಗಣ ಕಾರ್ಯಕ್ರಮದಲ್ಲಿ ಭಾಗಿಯಾವುದನ್ನ ಕಡಿಮೆ ಮಾಡಬೇಕು. ಗಾಳಿಯಾಡದ ಪ್ರದೇಶಗಳಲ್ಲಿ ಜನಸಂದಣಿ ಸೇರುವ ಕಡೆ ಸೋಂಕಿನ ಅಪಾಯ ಹೆಚ್ಚು. ಹೀಗಾಗಿ ಜನಸಂದಣಿ ಸೇರುವ ಪ್ರದೇಶಗಳಿಗೆ ಹೋಗದಿರುವುದೇ ಒಳಿತು‌. ಮದುವೆ ಫಂಕ್ಷನ್ ಗಳಿಗೆ ಹೋಗುವುದು ಕಡಿಮೆ ಮಾಡಬೇಕು. ಸೋಂಕು ಹೆಚ್ಚಾಗುತ್ತಿರುವ ದೇಶಗಳಿಂದ ಬರುವವರ ಮೇಲೆ ಹದ್ದಿನ ಕಣ್ಣು ಅವಶ್ಯಕವಾಗಿದೆ. ಏರ್ ಪೋರ್ಟ್ ಗಳಲ್ಲಿ ಹೆಚ್ಚಿನ ಕೋವಿಡ್ ತಪಾಸಣೆ ಅತ್ಯಗತ್ಯ ಎಂದು ಡಾ. ಮಂಜುನಾಥ್ ಸಲಹೆ ನೀಡಿದ್ದಾರೆ.

ತಜ್ಞರ ಅಭಿಪ್ರಾಯ
ಕೋವಿಡ್ -19 ರ ಸಂಭವನೀಯ ನಾಲ್ಕನೇ ಅಲೆಯ (Covid-19 fourth Wave) ವರದಿಗಳು ಬರುತ್ತಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದು ಸ್ಪೈಕ್‌ಗಾಗಿ ಭಾರತ ಸಿದ್ಧವಾಗುವ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. 

ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಭಾಗದ ಅಧ್ಯಯನವು ಈ ವರ್ಷದ ಜೂನ್‌ನಲ್ಲಿ ಕೋವಿಡ್ -19 ರ ನಾಲ್ಕನೇ ಅಲೆಯ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಈ ಅಲೆಯು ಭಾರತದ ಆರೋಗ್ಯ ಮತ್ತು ಮೂಲಸೌಕರ್ಯದ ಮೇಲೆ ಒತ್ತಡವನ್ನು ಉಂಟುಮಾಡುವುದಿಲ್ಲ ಮತ್ತು ಹಿಂದಿನ ಎಲ್ಲ ಅಲೆಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಸಂಶೋಧನೆ ಹೇಳಿದೆ.
 

click me!