Mekedatu project ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ ಎಂದ HDK

By Suvarna News  |  First Published Mar 22, 2022, 1:34 PM IST

*ಸರಕಾರಕ್ಕೆ ಇಚ್ಛಾಶಕ್ತಿ ಬೇಕೆಂದ ಹೆಚ್ ಡಿಕೆ
*ದೇವೇಗೌಡರ ಸಲಹೆ ಪಾಲಿಸುವಂತೆ ಸರಕಾರಕ್ಕೆ ಸಲಹೆ
*ನಮ್ಮ ಹಕ್ಕಿನ ನೀರಿನ ಬಗ್ಗೆ ತಮಿಳುನಾಡು ಕೇಳುವಂತಿಲ್ಲ


ವರದಿ: ಸುರೇಶ್ ಎ ಎಲ್. ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು(ಮಾ.22):
ಮೇಕೆದಾಟು (Mekedatu) ವಿಷಯದಲ್ಲಿ ಸೋಮವಾರದಂದು ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೂ ಮತ್ತು ರಾಜ್ಯಕ್ಕೂ ಸಂಬಂಧ ಇಲ್ಲ. ರಾಜ್ಯ ಸರಕಾರ ಈ ಯೋಜನೆ ವಿಷಯದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು  ಸಲಹೆ ಮಾಡಿದರು.

ವಿಧಾನಸೌಧದ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿನ್ನೆ ವಿಧಾನಸಭೆಯಲ್ಲಿ ತಮಿಳುನಾಡಿನ ಎಲ್ಲಾ ಪಕ್ಷಗಳು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ನಿರ್ಣಯ ಮಾಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ತಮಿಳುನಾಡು ಸರ್ಕಾರ ಒತ್ತಡ ಹೇರುವಂತದ್ದು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

Tap to resize

Latest Videos

ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಕುಡಿಯುವ ಹಕ್ಕಿದೆ. ಅವರ ನೀರನ್ನು ಕೊಡದಿದ್ದಾಗ ಅವರು ಕೇಳಬೇಕು. ನಮ್ಮ ಭಾಗದಲ್ಲಿ ಜಲಾಶಯ ಕಟ್ಟಲು  ತಕರಾರು ಇಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂ ಕೋರ್ಟಿನಲ್ಲಿ ಹೇಳಿದ್ದಾರೆ. ಈಗ ನೋಡಿದರೆ ಹೊಸ ವರಸೆ ಶುರು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

Mekedatu Dispute: ತಮಿಳುನಾಡು ವಿಧಾನಸಭೆ ಮೇಕೆದಾಟು ನಿರ್ಣಯ ಕಾನೂನುಬಾಹಿರ: ಸಿಎಂ

ಮೇಕೆದಾಟು ಯೋಜನೆಯನ್ನು ವಿರೋಧ ಮಾಡುವ ಯಾವುದೇ ಹಕ್ಕು ತಮಿಳುನಾಡಿಗೆ ಇಲ್ಲ. ನಮಗೆ ಪರಿಸರ ವಿಷಯದಲ್ಲಿ ಮಾತ್ರ ಒಪ್ಪಿಗೆ ಬಾಕಿ ಇದೆ. ತಮಿಳುನಾಡಿನ ನಾಯಕರು ವಿಧಾನಸಭೆಯಲ್ಲಿ ಮಾಡಿಕೊಂಡಿರುವ ನಿರ್ಣಯಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ಬದ್ದತೆ ತೋರಿಸಬೇಕು. ಎಲ್ಲವೂ ಸರ್ಕಾರದ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕಾವೇರಿಯಲ್ಲಿ ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯ ಆಗಿದೆ ಅದನ್ನು ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು. ಮುಂಗಡ ಪತ್ರದಲ್ಲಿ 1000 ಕೋಟಿ  ಇಟ್ಟರೆ ಸಾಲದು,  ಕೆಲಸ ಆರಂಭ ಆಗಬೇಕು. ಅಲ್ಲದೆ, ಕಾವೇರಿ ವ್ಯಾಪ್ತಿಯಲ್ಲಿ ತಮಿಳುನಾಡು ಸರ್ಕಾರ ಕೆಲ ಯೋಜನೆಯನ್ನು ನಡೆಸುತ್ತಿದೆ.‌ ಅವರು ಏನು ಚಟುವಟಿಕೆ  ಮಾಡುತ್ತಿದ್ದಾರೆ.‌ ಕರ್ನಾಟಕ ಎಂದೂ ತೊಂದರೆ ಮಾಡಿಲ್ಲ.‌ಹೀಗಾಗಿ ಅವರ ಚಟುವಟಿಕೆ ನಡೆಯುತ್ತಲೆ ಇದೆ.‌ ಇದೇ ರೀತಿ ಮುಂದುವರೆದರೆ 9 ಸಾವಿರ ಕೋಟಿ ಡಿಪಿಆರ್ ಎಲ್ಲಿಗೆ ಹೋಗುತ್ತದೆ ಎಂದು ಅವರು ಪ್ರಶ್ನಿಸಿದರು.

ಮೇಕೆದಾಟು ಯೋಜನೆಯನ್ನು ಯಾವ ರೀತಿ ಕಾರ್ಯಗತ ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಎರಡು ಹಂತಗಳಲ್ಲಿ ಕಾರ್ಯಗತ ಮಾಡಿ ಎಂದು ಅವರು ಹೇಳಿದ್ದಾರೆ. ನಾನು ಕೂಡ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಜತೆಗೆ, ಮುಖ್ಯಮಂತ್ರಿಗಳು ಸರ್ವಪಕ್ಷ ನಾಯಕರನ್ನು ದೆಹಲಿಗೆ ಕರೆದೊಯ್ಯುವ ವಿಚಾರವನ್ನು ಸರ್ವಪಕ್ಷ  ಸಭೆಯಲ್ಲಿ ಹೇಳಿದ್ದಾರೆ. ಮೊದಲು ಸೋಮವಾರ ಗೋವಿಂದ ಕಾರಜೋಳ ದೆಹಲಿಗೆ ಹೋಗಿದ್ದಾರೆ. ನಂತರ ಸಂಸದರ ನಿಯೋಗ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಾದು ನೋಡೋಣ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಮೇಕೆದಾಟು: ತ.ನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ, ಬಿಜೆಪಿ ಬೆಂಬಲ, ಸಿದ್ದು ಕೆಂಡಾಮಂಡಲ

ನಾನೇನು ಇಡೀ ರಾಜ್ಯದ ಜನ ಆರಿಸಿ ಸಿಎಂ ಆದವನಲ್ಲಾ: ಪಂಚ ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಗ್ಯಾಸ್ ಬೆಲೆ ಹೆಚ್ಚಳವಾದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಜನಕ್ಕೆ ಈಗ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳುವ ಜರೂರತ್ತು ಇಲ್ಲ, ಧರ್ಮದ ವಿಚಾರ, ಹಿಜಾಬ್ ವಿಚಾರ,ಕಾಶ್ಮೀರಿ ಫೈಲ್ಸ್ ವಿಚಾರ ಬಿಜೆಪಿಯವರ ಹಿಡನ್ ಅಜೆಂಡಾಗಳ ಬಗ್ಗೆ ಮಾತ್ರಾ ಆಸಕ್ತಿ . ಜನರೂ ಈಗ ಸಂಪಧ್ಬರಿತರಾಗಿ ಇದ್ದಾರೆ. ಎಷ್ಟೇ ಬೆಲೆ ಏರಿಕೆ ಆದ್ರೂ ಖರೀದಿ ಮಾಡುವಷ್ಟು ಶಕ್ತಿಯುತರಾಗಿದ್ದಾರೆ. ನಾವು ಮಾತನಾಡಿದರೆ ಕೆಟ್ಟವರಾಗ್ತೀವಿ. ಸಿದ್ದರಾಮಯ್ಯ ಕೂಡಾ ಈಗ ಹಿಜಾಬ್, ಧರ್ಮ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ.ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಇದರ ಬಗ್ಗೆ ಮಾತನಾಡಿದರೆ ಜನ ಮತ ನೀಡಲ್ಲ. ಮತ ನೀಡದೇ ಇದ್ರೂ ಪರವಾಗಿಲ್ಲ ನಾನು ಟೀಕೆ ಮಾಡ್ತೀನಿ. ನನಗೆ ಮತಗಳನ್ನು ಕಳೆದುಕೊಳ್ಳುವ ಭಯವಿಲ್ಲ. ಎರಡು ಬಾರಿ ಕಡಿಮೆ ಸ್ಥಾನಗಳನ್ನು ಗಳಿಸಿಯೂ ಸಿಎಂ ಆದವನು ನಾನು. ಇಡೀ ರಾಜ್ಯದ ಜನ ನನ್ನನ್ನು ಒಪ್ಪಿ ಸಿಎಂ ಮಾಡಿರಲಿಲ್ಲ. ನನಗೆ ಮುಂದೆಯೂ ಸಿಎಂ ಆಗಬೇಕೆಂಬ ಆಸೆಯೇನೂ ಇಲ್ಲ, ಈಗಾಗಲೇ ಸಿಎಂ ಆಗಿ ನನ್ನ ಹೆಸರು ವಿಧಾನಸೌಧದಲ್ಲಿದೆ ಎಂದರು.

ರಾಜಕೀಯ ಅಸ್ತ್ರವಾದ  ಕಾಶ್ಮೀರಿ ಫೈಲ್ಸ್: ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ತಿದೆ. ಹಿಂದೆ ಕೂಡಾ ಭಾರತ ಪಾಕಿಸ್ತಾನಗಳ ನಡುವೆ ಸ್ನೇಹ ಸೌಹಾರ್ಧತೆ ಮೂಡಿಸುವ ಅನೇಕ ಚಿತ್ರಗಳು ಬಂದಿವೆ. ಗದ್ದರ್ ಎಂಬ ಚಿತ್ರದಲ್ಲಿ ಪಾಕಿಸ್ತಾನ ಹಾಗೂ ಭಾರತದ ಬಾಂಧವ್ಯ ಬೆಸೆಯುವ ರೀತಿಯ ಪ್ರೇಮಕಥೆ ಇತ್ತು. ಭಜರಂಗಿ ಬಾಯಿಜಾನ್ ಎಂಬ ಚಿತ್ರದಲ್ಲಿ ಕಳೆದುಹೋದ ಪಾಕಿಸ್ತಾನದ ಮಗುವನ್ನು ಅದರ ದೇಶಕ್ಕೆ ತಲುಪಿಸುವ ಉತ್ತಮ ಸಂದೇಶ ಇತ್ತು. ಆದರೆ ಕಾಶ್ಮೀರಿ ಫೈಲ್ಸ್ ನಲ್ಲಿ ಏನಿದೆ.ಇದು ಕೇವಲ ಬಿಜೆಪಿಯ ರಾಜಕೀಯ ಅಸ್ತ್ರ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ..

ಎಸಿಬಿ  ರೈಡ್ ಕೇವಲ ಕಣ್ಣೊರೆಸುವ ನಾಟಕ: ಅನೇಕ ಬಾರಿ ಎಸಿಬಿ ರೈಡ್ ಗಳು ಆಗಿದ್ರೂ ಕೂಡಾ ತಪ್ಪಿತಸ್ಥರಿಗೆ ಶಿಕ್ಷೆ ಆಗಿರುವ ಪ್ರಕರಣಗಳು ಕಡಿಮೆ. ಕೇವಲ ಕಣ್ಣೊರೆಸುವ ನಾಟಕಾವಾಗಬಾರದು. ಯಾರ ಮೇಲೆ ದಾಳಿಗಲಾಗುತ್ತದೆಯೋ ಅದನ್ನು ಪಾಲೋ ಅಪ್ ಮಾಡಿ ತಾರ್ಕಿಕ ಅಂತ್ಯ ಮುಟ್ಟಿಸಿದಾಗಲೇ ಇದಕ್ಕೆ ಒಂದು ಅರ್ಥ. ತೋರ್ಪಡಿಕೆ ದಾಳಿ ಆಗವಾರದು ಎಂದು ಎ ಸಿ ಬಿ ದಾಳಿಗಳ ಬಗ್ಗೆ ಕುಮಾರಸ್ವಾಮಿ ಟೀಕಿಸಿದ್ದಾರೆ..

click me!