ಎತ್ತಿನಹೊಳೆ ವೆಚ್ಚ ಡಬಲ್‌: ಪರಿಷ್ಕೃತ ಯೋಜನಾ ವೆಚ್ಚಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ

By Govindaraj SFirst Published Dec 9, 2022, 11:43 AM IST
Highlights

ಬಯಲುಸೀಮೆ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಆರಂಭಿಸಿರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎತ್ತಿನಹೊಳೆ ಯೋಜನಾ ವೆಚ್ಚವನ್ನು 23,251 ಕೋಟಿ ರು.ಗಳಿಗೆ ಹೆಚ್ಚಿಸಿ ಅನುಷ್ಠಾನಗೊಳಿಸುವ ಸಂಬಂಧ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ. 

ಬೆಂಗಳೂರು (ಡಿ.09): ಬಯಲುಸೀಮೆ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಆರಂಭಿಸಿರುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎತ್ತಿನಹೊಳೆ ಯೋಜನಾ ವೆಚ್ಚವನ್ನು 23,251 ಕೋಟಿ ರು.ಗಳಿಗೆ ಹೆಚ್ಚಿಸಿ ಅನುಷ್ಠಾನಗೊಳಿಸುವ ಸಂಬಂಧ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 23,251.66 ಕೋಟಿ ರು. ಮೊತ್ತದಲ್ಲಿ ಅನುಷ್ಠಾನಗೊಳಿಸಲು ವಿವರವಾದ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ. ಯೋಜನೆ ಪ್ರಾರಂಭಿಸಿದಾಗ 12 ಸಾವಿರ ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಯೋಜನೆಯ ಹೋಗುತ್ತಾ 23,251 ಕೋಟಿ ರು. ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದರು. ವೆಚ್ಚ ಪರಿಷ್ಕರಣೆಯಲ್ಲಿ ವ್ಯತ್ಯಾಸವಾಗುವುದು ಮಾರುಕಟ್ಟೆಯಲ್ಲಿನ ಬೆಲೆಗಳ ಹೆಚ್ಚಳದಿಂದಾಗುತ್ತದೆ. 

ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆಗೆ ಮಾರ್ಚ್‌ವರೆಗೆ ಅವಕಾಶ

ಭೂಸ್ವಾಧೀನ ವೆಚ್ಚವೇ ಅಧಿಕವಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಯೋಜನೆಯ ವೆಚ್ಚ ಪರಿಷ್ಕರಣೆ ಕುರಿತು ಹೇಳಿಕೆ ಸರಿಯಲ್ಲ. ಮಣ್ಣು, ಸ್ಟೀಲ್‌, ಸಿಮೆಂಟ್‌ ದರ ಹೆಚ್ಚಳವಾಗಿರುವುದರಿಂದ ಪರಿಷ್ಕರಣೆ ಮಾಡಬೇಕಾಗುತ್ತದೆ. ಯೋಜನೆ ಪ್ರಾರಂಭಿಸುವ ಮೊದಲು ಅಂದಾಜು ಮೊತ್ತ ಮಾಡಲಾಗುತ್ತದೆ. ನಂತರ ಕಾಮಗಾರಿ ವೇಳೆ ಹೆಚ್ಚಾಗುತ್ತದೆ. ಯಾರ ಯಾರ ಕಾಲದಲ್ಲಿ ಏನಾಗಿದೆ ಎಂಬುದು ಮತ್ತೊಮ್ಮೆ ಹೇಳುತ್ತೇನೆ ಎಂದರು. ಬಯಲು ಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಎತ್ತಿನ ಯೋಜನೆಯಿಂದ ಕುಡಿಯುವ ನೀರು ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. 

ಹೆಚ್ಚುವರಿ ವಿದ್ಯುತ್‌ ಸಂಗ್ರಹ ಯೋಜನೆಗೆ ಸಂಪುಟ ಅಸ್ತು

ಏಳು ಜಿಲ್ಲೆಗಳ 75 ಲಕ್ಷ ಜನರಿಗೆ ಈ ಯೋಜನೆಯು ಅನುಕೂಲವಾಗಲಿದೆ ಎಂದು ಅಂದಾಜು ಮಾಡಲಾಗಿದೆ. 2012ರಲ್ಲಿ 8,323.50 ಕೋಟಿ ರು. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚವನ್ನು 12.91 ಸಾವಿರ ಕೋಟಿ ರು.ಗೆ ಹೆಚ್ಚಿಸಲಾಯಿತು. 2014ರಲ್ಲಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮಂದಗತಿ ಕಾಮಗಾರಿಯಿಂದಾಗಿ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗುತ್ತಿದೆ. ಇದೀಗ ಪರಿಷ್ಕೃತ ಅಂದಾಜು ಮೊತ್ತ 23,251 ಕೋಟಿ ರು. ಹೆಚ್ಚಳ ಮಾಡಲಾಗಿದೆ. ಈ ಮೊತ್ತದ ಯೋಜನಾ ವರದಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

click me!