ಗದಗ ಜಿಲ್ಲೆಯ ಮುಂಡರಗಿಯ ಅನಿಲ್ ಅಂಗಡಿಯಿಂದ ಕಾರ್ಯನಿರ್ವಹಣೆ, ನಾಸಿ ಅಸೋಸಿಯೇಟ್ಸ್‌ನಲ್ಲಿ ಪ್ಲಾನಿಂಗ್ ಹೆಡ್ ಆಗಿರುವ ಅನಿಲ್
ಮುಂಡರಗಿ(ಜೂ.03): ದೆಹಲಿಯ ನೂತನ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದು, ಇದರ ಒಳಾಂಗಣ ವಿನ್ಯಾಸ ಇಡೀ ಜಗತ್ತನ್ನೇ ಮೆಚ್ಚಿಸಿದೆ. ಈ ಉತ್ತಮ ಕಾರ್ಯವನ್ನು ಮುಂಚೂಣಿಯಲ್ಲಿ ನಿಂತು ನಿರ್ವಹಿಸಿದ ತಂಡದಲ್ಲಿ ಗದಗ ಜಿಲ್ಲೆ ಮುಂಡರಗಿಯ ಯುವಕ ಅನಿಲ ಅಂಗಡಿ (ತಿಗರಿ) ಇದ್ದಾರೆ.
ನೂತನ ಸಂಸತ್ ಭವನದ ಒಳಾಂಗಣ ವಿನ್ಯಾಸ (ಇಂಟೀರಿಯರ್ ಡಿಸೈನ್) ಕಾರ್ಯವನ್ನು ಮುಂಬೈ ಮೂಲದ ನಾರ್ಸಿ ಅಸೋಸಿಯೇಟ್ಸ್ ನಿರ್ವಹಿಸಿದೆ. ಇದರಲ್ಲಿ ಪ್ಲ್ಯಾನಿಂಗ್ ಹೆಡ್ ಆಗಿ ಒಳಾಂಗಣ ವಿನ್ಯಾಸದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಇದೇ ಅನಿಲ್.
undefined
ನವ ಭಾರತದ ನೂತನ ಗುರುತು ಸೆಂಟ್ರಲ್ ವಿಸ್ತಾ: 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕಟ್ಟಡ !
ಅನಿಲ್ ಮೂಲತ: ವ್ಯಾಪಾರಸ್ಥರ ಕುಟುಂಬದಿಂದ ಬಂದವರಾಗಿದ್ದು, ಇವರ ಅಜ್ಜ ಗುಂಡಪ್ಪ ಅಂಗಡಿ ದೊಡ್ಡ ವ್ಯಾಪಾರಿ. ಇವರು ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಜಗದ್ಗುರು ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ದಾವಣಗೆರೆಯ ಸಪ್ತಗಿರಿ ವಿದ್ಯಾಸಂಸ್ಥೆಯಲ್ಲಿ ಪಡೆದರು. ಗದಗದ ಜೆ.ಟಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಪಡೆದು, ನಂತರ ಬೆಂಗಳೂರಿನ ನಾಗಾರ್ಜುನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ, ನಂತರ ಪುಣೆಯ ನಿಕ್ಮಾರ್ ಇನ್ಸ್‌ಟಿಟ್ಯೂಟ್‌ನಲ್ಲಿ ಪ್ಲ್ಯಾನಿಂಗ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಸದ್ಯ ಮುಂಬೈನ ನಾರ್ಸಿ ಮತ್ತು ಅಸೋಸಿಯೇಟ್ಸ್ ಕಂಪನಿಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅಚ್ಚುಕಟ್ಟಾಗಿ ಕೆಲಸ ಮಾಡಿ ಮುಗಿಸಿದೆವು:
‘ಕನ್ನಡಪ್ರಭ’ ಜೊತೆ ಮಾತನಾಡಿದ ಅನಿಲ್, ‘ಟಾಟಾ ಪ್ರೊಜೆಕ್ಟ್ನಲ್ಲಿ ನಿರ್ಮಾಣವಾದ ನೂತನ ಸಂಸತ್ ಭವನದ ಒಳಾಂಗಣ ವಿನ್ಯಾಸ ಕಾರ್ಯ ಮುಂಬೈ ಮೂಲದ ನಾರ್ಸಿ ಅಸೋಸಿಯೇಟ್ಸ್ ಕಂಪನಿಗೆ ದೊರೆಯಿತು. ಈ ಸಂದರ್ಭದಲ್ಲಿ ನಾನು ಹೈದರಾಬಾದ್‌ನಲ್ಲಿ ಬೇರೆ ಪ್ರೊಜೆಕ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಬಾಸ್ ಕರೆ ಮಾಡಿ ನನ್ನನ್ನು ದೆಹಲಿಯ ಸಂಸತ್ ಭವನದ ಇಂಟೀರಿಯರ್ ವಿನ್ಯಾಸ ಕಾರ್ಯಕ್ಕೆ ನಿಯೋಜನೆ ಮಾಡಿರುವುದಾಗಿ ತಿಳಿಸಿದರು. ಅಲ್ಲಿಗೆ ಹೋಗಿ ಉಳಿದ ಎಲ್ಲಾ ತಂಡದೊಂದಿಗೆ ಸೇರಿಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡಿ ಮುಗಿಸಿದೆವು. ಈ ಕಾರ್ಯ ನಿರ್ವಹಣೆಯ ಸಂದರ್ಭದಲ್ಲಿ ನಾವೆಂದೂ ಬೇಸರ ಮಾಡಿಕೊಂಡಿಲ್ಲ. ಗಡಿಯಾರ ನೋಡಿ ಕೆಲಸ ಮಾಡಿಲ್ಲ. ಇದು ಇಡೀ ದೇಶವೇ ನೋಡುವಂತಹ ಸ್ಥಳ. ನಾವಿಲ್ಲಿ ಮಾಡುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕು ಎನ್ನುವ ಉದ್ದೇಶದಿಂದ ನಾವು ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಿದ್ದೇವೆ’ ಎಂದು ತಿಳಿಸಿದರು.
ಸಂಸತ್ ಭವನವನ್ನು ನೋಡಿದಾಗೊಮ್ಮೆ ನಮಗೆ ಹೆಮ್ಮೆ ಎನಿಸುತ್ತದೆ. ನನ್ನೂರು ಮುಂಡರಗಿಯ ಹೆಸರನ್ನು ದೇಶದೆಲ್ಲೆಡೆ ಹರಡುವುದು ನನ್ನ ಕನಸಾಗಿತ್ತು. ಇದೀಗ ಈ ಕಾರ್ಯದ ಮೂಲಕ ನನ್ನ ಕನಸು ನನಸಾಗಿದೆ ಅಂತ ನಾರ್ಸಿ ಅಸೋಸಿಯೇಟ್ಸ್ ಪ್ಲ್ಯಾನಿಂಗ್ ಮುಖ್ಯಸ್ಥ ಅನಿಲ್ ಅಂಗಡಿ ತಿಳಿಸಿದ್ದಾರೆ.