ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕ್ರಾಂತಿ: ಕೊಟ್ಟ ಮಾತಿನಂತೆ ನಡೆದಿದ್ದೇವೆ, ಸಿಎಂ ಸಿದ್ದು

By Kannadaprabha NewsFirst Published Jun 3, 2023, 7:01 AM IST
Highlights

3 ಗ್ಯಾರಂಟಿ ತಕ್ಷಣ ಜಾರಿ. ಆ.15ರಿಂದ ಗೃಹ ಲಕ್ಷ್ಮೀ. 6 ತಿಂಗಳಲ್ಲಿ ಯುವನಿಧಿ, 11ರಿಂದ ಸರ್ಕಾರಿ ಬಸ್‌ಗಳಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ, 200 ಯುನಿಟ್‌, 10 ಕೇಜಿ ಧಾನ್ಯ ಜುಲೈನಿಂದ ಲಭ್ಯ, ಆ.15ಕ್ಕೆ ಮಹಿಳೆಯರಿಗೆ .2000 ಭತ್ಯೆ: ಸಿಎಂ ಸಿದ್ದು ಪ್ರಕಟ, ಕಠಿಣ ಷರತ್ತಿಲ್ಲದೆ ಗ್ಯಾರಂಟಿ ಜಾರಿಗೊಳಿಸಿದ ಕಾಂಗ್ರೆಸ್‌

ಬೆಂಗಳೂರು(ಜೂ.03):  ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದ ಬಹು ನಿರೀಕ್ಷಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಠಿಣ ಷರತ್ತುಗಳಿಲ್ಲದೆ, ಬಹುತೇಕರಿಗೆ ತಲುಪುವಂತೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಐದೂ ಯೋಜನೆ ತಕ್ಷಣದಿಂದ ಜಾರಿಯಾಗಲಿದ್ದು, ಪ್ರಮುಖ ಮೂರು ಯೋಜನೆಗಳು ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳನ್ನು ತಲುಪಲಿವೆ.

ಸಚಿವ ಸಂಪುಟ ನಿರ್ಧಾರದ ಪ್ರಕಾರ, ಯೋಜನೆ ಜಾರಿ ಪ್ರಕ್ರಿಯೆ ಆಧರಿಸಿ ಜೂ.11ರಿಂದಲೇ ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ (ಶಕ್ತಿ) ಅವಕಾಶ ಕಲ್ಪಿಸಲಾಗಿದೆ. ಗರಿಷ್ಠ 200 ಯುನಿಟ್‌ಗಳ ಉಚಿತ ವಿದ್ಯುತ್‌ನ ‘ಗೃಹ ಜ್ಯೋತಿ’ ಹಾಗೂ ತಲಾ 10 ಕೆ.ಜಿ ಆಹಾರ ಧಾನ್ಯ ಒದಗಿಸುವ ‘ಅನ್ನಭಾಗ್ಯ’ ಯೋಜನೆ ಲಾಭ ಜುಲೈ ವೇಳೆಗೆ ಫಲಾನುಭವಿಗಳ ತಲುಪಲಿದೆ.

ಗ್ಯಾರಂಟಿ ಪಡೆದ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷದಷ್ಟು ಲಾಭ..!

ಇನ್ನು ಆಗಸ್ಟ್‌ 15 ರಂದು ‘ಗೃಹ ಲಕ್ಷ್ಮೀ’ ಯೋಜನೆಯಡಿ ಅರ್ಹ ಫಲಾನುಭವಿಗಳ ಖಾತೆಗೆ ನಿಗದಿಯಾಗಿರುವ 2 ಸಾವಿರ ರು. ಜಮೆಯಾಗಲಿದೆ. ‘ಯುವನಿಧಿ’ ಅಡಿ ಆರು ತಿಂಗಳ ಬಳಿಕ ನಿರುದ್ಯೋಗ ಭತ್ಯೆ ನಿರುದ್ಯೋಗಿಗಳಿಗೆ ಲಭ್ಯವಾಗಲಿದೆ.

ಪ್ರಸಕ್ತ ವರ್ಷ ಪದವಿ, ಡಿಪ್ಲೊಮಾ ಪೂರೈಸಿರುವ ಅಭ್ಯರ್ಥಿಗಳಿಗೆ ಆರು ತಿಂಗಳ ಬಳಿಕ 24 ತಿಂಗಳ ಕಾಲ ನಿರುದ್ಯೋಗ ಭತ್ಯೆ ದೊರೆಯಲಿದೆ. ಪದವಿ ಪೂರೈಸಿ ಆರು ತಿಂಗಳು ಉದ್ಯೋಗ ಪಡೆಯದವರನ್ನು ಮಾತ್ರ ನಿರುದ್ಯೋಗಿ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ‘ಯುವನಿಧಿ’ ಅನುಷ್ಠಾನಕ್ಕೆ ಮಾತ್ರ 6 ತಿಂಗಳು ಗಡುವು ಇರಲಿದೆ.

ಎಪಿಎಲ್‌ ಕಾರ್ಡ್‌ದಾರರಿಗೂ ಅಚ್ಛೇ ದಿನ್‌!:

‘ಗೃಹ ಲಕ್ಷ್ಮೀ’, ‘ಗೃಹ ಜ್ಯೋತಿ’, ‘ಯುವನಿಧಿ’ ಹಾಗೂ ‘ಶಕ್ತಿ’ಯಂತಹ ನಾಲ್ಕು ಪ್ರಮುಖ ಯೋಜನೆಗಳನ್ನು ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿನ) ಕುಟುಂಬಗಳಿಗೆ ಮಾತ್ರ ಸೀಮಿತವಾಗದೆ ಎಪಿಎಲ್‌ (ಬಡತನ ರೇಖೆಗಿಂತ ಮೇಲ್ಪಟ್ಟವರು) ಕುಟುಂಬಗಳಿಗೂ ಅನ್ವಯವಾಗುವಂತೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ತನ್ಮೂಲಕ ಇದೇ ಮೊದಲ ಬಾರಿಗೆ ಬಿಪಿಎಲ್‌ ಕಾರ್ಡ್‌ದಾರರ ಜತೆಗೆ ಎಪಿಎಲ್‌ ಕಾರ್ಡ್‌ದಾರರಿಗೂ ಅಚ್ಛೇ ದಿನ್‌ ಪ್ರಾಪ್ತಿಯಾಗಿದೆ.

ಇನ್ನು ರಾಜ್ಯದ ಪ್ರತಿಯೊಂದು ಕುಟುಂಬದ ಮನೆಯೊಡತಿಗೆ ಮಾಸಿಕ 2 ಸಾವಿರ ರು. ನೀಡುವ ಗೃಹ ಲಕ್ಷ್ಮೇ ಯೋಜನೆ ಫಲಾನುಭವಿಗಳಿಗೆ ಯಾವುದೇ ಷರತ್ತು ವಿಧಿಸಿಲ್ಲ. ಈಗಾಗಲೇ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗಲವಿಕಲ ವೇತನ ಸೇರಿದಂತೆ ಯಾವುದೇ ಸಾಮಾಜಿಕ ಪಿಂಚಣಿ ಪಡೆಯುತ್ತಿದ್ದರೂ ಗೃಹ ಲಕ್ಷ್ಮೇ ಯೋಜನೆಗೆ ಅವರು ಅರ್ಹರು. ಗೃಹ ಲಕ್ಷ್ಮೇ ಸಹಾಯಧನ ಜತೆಗೆ ಹೆಚ್ಚುವರಿಯಾಗಿ ಪಿಂಚಣಿಯನ್ನೂ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಖುದ್ದು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಪ್ರಣಾಳಿಕೆ ವೇಳೆ ನೀಡಿದ್ದ ಐದು ಗ್ಯಾರಂಟಿ (ಭರವಸೆ) ಯೋಜನೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಿಂದಲೇ ಜಾರಿ ಮಾಡಲು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗ ಭೇದವಿಲ್ಲದೆ ರಾಜ್ಯದ ಎಲ್ಲಾ ಜನರಿಗೂ ಪ್ರಸಕ್ತ ವರ್ಷದಿಂದಲೇ ಜಾರಿ ಮಾಡಲಾಗುವುದು. ಮಹಿಳೆಯರಿಗೆ ಸಿಗುವ ಎಲ್ಲಾ ಗ್ಯಾರಂಟಿ ಯೋಜನೆಗಳೂ ಲಿಂಗತ್ವ ಅಲ್ಪಸಂಖ್ಯಾತರಿಗೂ (ಮಂಗಳಮುಖಿಯರು) ಅನ್ವಯವಾಗಲಿವೆ. ಯಾವುದೇ ಕಠಿಣ ಷರತ್ತುಗಳಿಲ್ಲದೆ ಬಹುತೇಕರಿಗೆ ಯೋಜನೆಗಳು ಮುಟ್ಟುವಂತೆ ಮಾಡಿದ್ದೇವೆ ಎಂದು ತಿಳಿಸಿದರು.

ಸಚಿವ ಸಂಪುಟ ಸಭೆಗೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗಳ ವ್ಯವಸ್ಥಿತ ಜಾರಿ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಚಿವ ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವ ಸಂಪುಟ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕೊಟ್ಟ ಮಾತಿನಂತೆ ನಡೆದಿದ್ದೇವೆ: ಸಿಎಂ

ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಖಚಿತ. ಅವರು ಇವರು ಎಂದೇನಿಲ್ಲ. ನನ್ನ ಹೆಂಡತಿಗೂ ಉಚಿತ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ (ವಂದಿತಾ ಶರ್ಮಾ) ಉಚಿತ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಆದಾಯದ ಮೂಲ ಯಾವುದು?: ನಳಿನ್‌ ಕುಮಾರ್‌ ಕಟೀಲ್‌

ಲಾಭ ತ್ಯಜಿಸಿದರೆ ಸ್ವಾಗತ: ಡಿಸಿಎಂ

ಬಸವಣ್ಣನ ನಾಡಿನಲ್ಲಿ ನುಡಿದಂತೆ ನಡೆದಿದ್ದೇವೆ. ಎಲ್ಲಾ ಐದು ಗ್ಯಾರಂಟಿ ಅನುಷ್ಠಾನ ಘೋಷಿಸಿದ್ದೇವೆ. ಸರ್ಕಾರಿ ನೌಕರರು ಹಾಗೂ ಇತರೆ ಸಂಘಸಂಸ್ಥೆಗಳು ನಮಗೆ ಈ ಯೋಜನೆಗಳ ಸೌಲಭ್ಯ ಬೇಡ ಎಂದು ಸ್ವಇಚ್ಛೆಯಿಂದ ಪತ್ರ ಬರೆದಿದ್ದಾರೆ. ಯೋಜನೆಯ ಲಾಭ ತ್ಯಜಿಸಲು ಇಚ್ಛಿಸಿದರೆ ಅದನ್ನು ಸರ್ಕಾರ ಸ್ವಾಗತ ಮಾಡಲಿದೆ ಅಂತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ

ಸರ್ಕಾರ 3 ಗ್ಯಾರಂಟಿಗಳನ್ನು ತಕ್ಷಣ ಜಾರಿಗೊಳಿಸಿ, 2 ಗ್ಯಾರಂಟಿ ವಿಳಂಬ ಮಾಡಲಿದೆ ಎಂದು ಯೋಜನೆಯ ಷರತ್ತುಗಳ ಸಮೇತ ಕನ್ನಡಪ್ರಭ ಗುರುವಾರ ಹಾಗೂ ಶುಕ್ರವಾರ ನಿಖರ ವರದಿ ಪ್ರಕಟಿಸಿತ್ತು.

click me!