ಗ್ಯಾರಂಟಿ ಪಡೆದ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷದಷ್ಟು ಲಾಭ..!

By Kannadaprabha NewsFirst Published Jun 3, 2023, 6:36 AM IST
Highlights

ಐದು ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷವೊಂದಕ್ಕೆ ಸುಮಾರು 60 ಸಾವಿರ ಕೋಟಿ ರು.ಗಳ ಹೊರೆಯಾಗುವ ಅಂದಾಜು ಮಾಡಲಾಗಿದೆ. 

ಬೆಂಗಳೂರು(ಜೂ.03): ರಾಜ್ಯ ಸರ್ಕಾರ ಶುಕ್ರವಾರ ಅನುಷ್ಠಾನ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವ ಪ್ರತಿ ಕುಟುಂಬಕ್ಕೆ ವಾರ್ಷಿಕ ಗರಿಷ್ಠ 1 ಲಕ್ಷ ರು.ಗಳಷ್ಟುಲಾಭ ದೊರೆಯಲಿದೆ ಎಂಬುದೊಂದು ಅಂದಾಜು.

ಗೃಹ ಜ್ಯೋತಿ ಅಡಿ ಗರಿಷ್ಠ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಾಸಿಕ 1,550 ರು.ಗಳ ಗರಿಷ್ಠ ವಿದ್ಯುತ್‌ ಶುಲ್ಕದಿಂದ ವಿನಾಯಿತಿ ಪಡೆಯಬಹುದು. ತನ್ಮೂಲಕ ವರ್ಷಕ್ಕೆ 18,600 ರು.ಗಳಷ್ಟುಗರಿಷ್ಠ ಲಾಭ ಪಡೆಯಬಹುದು. ಇನ್ನು ಗೃಹ ಲಕ್ಷ್ಮೀ ಯೋಜನೆಯಡಿ ಮನೆಯೊಡತಿ ಒಬ್ಬರು ಮಾಸಿಕ 2 ಸಾವಿರ ರು.ಗಳಂತೆ 24 ಸಾವಿರ ರು. ಪಡೆಯಲಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಆದಾಯದ ಮೂಲ ಯಾವುದು?: ನಳಿನ್‌ ಕುಮಾರ್‌ ಕಟೀಲ್‌

ಇನ್ನು ಅನ್ನಭಾಗ್ಯ ಅಡಿ ಪ್ರತಿ ಕುಟುಂಬಕ್ಕೆ ಸರಾಸರಿ 50 ಕೆ.ಜಿ.ಯಂತೆ ವರ್ಷಕ್ಕೆ 600 ಕೆ.ಜಿ. ಆಹಾರ ಧಾನ್ಯ ಪೂರೈಕೆಯಾಗಲಿದೆ. ಪ್ರತಿ ಕೆ.ಜಿಗೆ. 40 ರು.ಗಳಂತೆ 24,000 ರು. ಮೌಲ್ಯದ ಆಹಾರ ಧಾನ್ಯ ನಾಗರಿಕರನ್ನು ತಲುಪಲಿದೆ.
ಇನ್ನು ಯುವ ನಿಧಿ ಯೋಜನೆಯಡಿ ಪದವಿ ಪಡೆದವರಿಗೆ ಮಾಸಿಕ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವಿಧರರಿಗೆ 1,500 ರು. ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ. ಮಾಸಿಕ 3 ಸಾವಿರ ರು. ಪಡೆಯುವವರಿಗೆ ವಾರ್ಷಿಕ

36,000 ರು. ದೊರೆಯಲಿದೆ. ಈ ನಾಲ್ಕೂ ಯೋಜನೆಗಳಿಂದಲೇ ನಾಲ್ಕು ಯೋಜನೆ ಅನ್ವಯವಾಗುವವರಿಗೆ ಗರಿಷ್ಠ 1.02 ಲಕ್ಷ ರು. ಲಾಭ ಸಿಗಲಿದೆ.
ಇನ್ನು ಮನೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ಸು ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಲಾಭ ಹಣದ ರೂಪದಲ್ಲಿ ಲೆಕ್ಕಾಚಾರ ಕಷ್ಟವಾದರೂ ತಕ್ಕ ಮಟ್ಟಿಗೆ ಲಾಭ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ 60000 ಕೋಟಿಯಷ್ಟು ಹೊರೆ

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷವೊಂದಕ್ಕೆ ಸುಮಾರು 60 ಸಾವಿರ ಕೋಟಿ ರು.ಗಳ ಹೊರೆಯಾಗುವ ಅಂದಾಜು ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಮಟ್ಟದಲ್ಲಿ ನಡೆದಿರುವ ಅನಗತ್ಯ ಖರ್ಚು, ದುಂದು ವೆಚ್ಚ ಕಡಿವಾಣ ಹಾಗೂ ನಿಷ್ಪ್ರಯೋಜಕವಾದ ಕೆಲ ಸಣ್ಣ ಪುಟ್ಟಯೋಜನೆಗಳನ್ನು ಸ್ಥಗಿತಗೊಳಿಸಿ ಈ ನಷ್ಟ ಭರಿಸಿಕೊಳ್ಳುವ ಸಾಧ್ಯತೆಯಿದೆ.

click me!