Kannada Sahitya Sammelana: ಕನ್ನಡ ಸಾಹಿತ್ಯ ಸಮ್ಮೇಳನ ನೋಂದಣಿಗೆ ಚಾಲನೆ

By Kannadaprabha NewsFirst Published Dec 2, 2022, 9:07 AM IST
Highlights

ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಆರಂಭವಾಗಿದೆ. ಆ್ಯಪ್‌ ಮೂಲಕವೇ ಸದಸ್ಯತ್ವ, ನೋಂದಣಿಗೆ ಅವಕಾಶ ನೀಡಲಾಗಿದ್ದು, ಪುಸ್ತಕ, ವಾಣಿಜ್ಯ ಮಳಿಗೆಗಳ ನೋಂದಣಿಯೂ ಕೂಡ ಶುರುವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು (ಡಿ.2): 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿಗೆ ಚಾಲನೆ ನೀಡಲಾಗಿದೆ. ಹಾವೇರಿಯಲ್ಲಿ 2023 ಜನವರಿ 6ರಿಂದ 8ರವರೆಗೆ ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಸೇರಿದಂತೆ ಸಮ್ಮೇಳನದ ಸಂಪೂರ್ಣ ಮಾಹಿತಿ ಒದಗಿಸಲು ಮೊಬೈಲ್‌ ಆ್ಯಪ್‌ ಅನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿದ್ದಪಡಿಸಿದೆ.

ಪ್ರತಿನಿಧಿಗಳಾಗಿ ಭಾಗವಹಿಸಲು ನೋಂದಾಯಿಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ https://play.google.com/store/apps/details?id=com.knobly.kasapa ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಲಾಗ್‌ಇನ್‌ ಆಗುವ ಮೂಲಕ ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ https://play.google.com/store/apps/details?id=com.tritantra.kasapa ನಮೂದಿಸಿ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹುದು.

ಉಪ ಸಮಿತಿ ರಚನೆ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಾಗೂ ವಸ್ತು ಪ್ರದರ್ಶನ ಸಮಿತಿಗೆ ಮಾಜಿ ಶಾಸಕ ಯು.ಬಿ.ಬಣಕಾರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯ ಡಿ.ಎಂ.ಸಾಲಿ ಅವರ ಉಪಾಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಪುಸ್ತಕ ಮತ್ತು ವಾಣಿಜ್ಯ ಮಳಿಗೆಯಲ್ಲಿನ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗೆ ಹಾವೇರಿಯ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ (86603 48505), ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ (99027 68704), ಹಾವೇರಿ ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ (98802 68265), ಪಾಶ್ರ್ವನಾಥ್‌ (99010 59888), ಧನಂಜಯ (99806 08182) ಸಂಪರ್ಕಿಸಬಹುದು ಎಂದು ಕಸಾಪ ತಿಳಿಸಿದೆ.

ಸಮ್ಮೇಳನ ರಥಕ್ಕೆ ಸಿದ್ದಾಪುರದ ಭುವನಗಿರಿಯಲ್ಲಿ ಚಾಲನೆ
ಸಿದ್ದಾಪುರ:
ಹಾವೇರಿಯಲ್ಲಿ ಜ.6 ಮತ್ತು 7ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕರುನಾಡಿನಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿಯನ್ನೊಳಗೊಂಡ ಕನ್ನಡರಥಕ್ಕೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು. ಕನ್ನಡತಾಯಿ ಭುವನೇಶ್ವರಿಯ ಸನ್ನಿಧಾನದಲ್ಲಿ ಚಾಲನೆ ದೊರೆತ ಕನ್ನಡರಥ, ರಾಜ್ಯಾದ್ಯಂತ ಸಂಚರಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಹಾವೇರಿ ತಲುಪಲಿದೆ. ಇದೇ ಜ್ಯೋತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.

Haveri: ಕನ್ನಡದ ಕಟ್ಟಾಳು ಪಾಟೀಲ್‌ ಪುಟ್ಟಪ್ಪ ಸಮಾಧಿ ಕಾಯಕಲ್ಪ ಮರೆತ ಸರ್ಕಾರ

ಜ್ಯೋತಿ ಬೆಳಗಿಸಿ, ಕನ್ನಡರಥಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ, ಕರ್ನಾಟಕದಲ್ಲಿ ಕನ್ನಡತನವನ್ನು ಉಳಿಸಲು ಕನ್ನಡರಥ ದಾರಿದೀಪವಾಗಲಿದೆ. ಶಿಕ್ಷಣದಲ್ಲಿ, ಉದ್ಯೋಗ, ನ್ಯಾಯಾಲಯದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು ಎಂಬುದು ಕಸಾಪದ ಉದ್ದೇಶವಾಗಿದೆ.

ಹಾವೇರಿ: 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಈ ಸಮ್ಮೇಳನ ಸಾಹಿತ್ಯೋತ್ಸವದ ಜತೆಗೆ ಕನ್ನಡಿಗರ ವಿಜಯೋತ್ಸವವಾಗಲಿದೆ. ಎಲ್ಲ ಕನ್ನಡಿಗರು ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಬೇಕು ಎಂದು ಕರೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.

click me!