
ಸಾಹಿತಿ, ಪ್ರಕಾಶಕರು ಆಗಿರುವ ಆಶಾ ರಘು ಅವರು ಜನವರಿ 9ರಂದು ನಿಧನರಾಗಿದ್ದಾರೆ. ಇವರಿಗೆ 47 ವರ್ಷ ವಯಸ್ಸಾಗಿತ್ತು. ಅನೇಕರು ಈ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಆಶಾ ಅವರ ಪತಿ ರಘು ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ರಘು ಅವರು ಕರ್ನಾಟಕದ ಖ್ಯಾತ ಆಹಾರ ತಜ್ಞರಾಗಿದ್ದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ರಘು ಕನಸಿನಲ್ಲಿ ಬಂದರು ಎಂದು ಅವರು ಪೋಸ್ಟ್ ಹಾಕಿದ್ದರು, ಈಗ ಆತ್ಮ*ಹತ್ಯೆ ಮಾಡಿಕೊಂಡು ತೀರಿಕೊಂಡಿದ್ದಾರೆ ಎನ್ನಲಾಗಿದೆ. ಇವರಿಗೆ ಓರ್ವ ಮಗಳಿದ್ದಾಳೆ ಎನ್ನಲಾಗಿದೆ.
ಕಳೆದ ಹತ್ತು ದಿನಗಳ ಹಿಂದೆ ಆಶಾ ಅವರು ಫೇಸ್‌ಬುಕ್‌ನಲ್ಲಿ, ಹೀಗೊಂದು ಕನಸಾಯಿತು… ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾನ್ಸ್‌ಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜೊತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾಂಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ! ಎಂದು ಬರೆದುಕೊಂಡಿದ್ದರು.
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. 'ಆವರ್ತ', ಪೂತನಿ, ಗತ, ಮಾಯೆ, ಚಿತ್ತರಂಗ ಕಾದಂಬರಿಗಳನ್ನು ಬರೆದಿದ್ದರು. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಕಲಾವಿದೆಯಾಗಿ ನಟಿಸಿದ್ದಾರೆ, ಸಂಭಾಷಣೆ ಬರೆದಿದ್ದಾರೆ, ಸಹಾಯಕ ನಿರ್ದೇಶಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ.
ಇವರ ಬರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ತ್ರಿವೇಣಿ ದತ್ತಿನಿಧಿ ಪ್ರಶಸ್ತಿಗಳು ಬಂದಿವೆ. ಇನ್ನು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ಕೂಡ ಸಿಕ್ಕಿದೆ.
ವೀರಲೋಕ ನಿಮ್ಮ ಪುಸ್ತಕ ಪ್ರಕಟಿಸಲು ಸಿದ್ಧವಿದೆ. ನೀವು ಏನನ್ನಾದರೂ ಬರೆಯುತ್ತಿದ್ದರೆ ಅದನ್ನು ವೀರಲೋಕಕ್ಕೆ ಕೊಡಿ ಎಂದು ವೀರಲೋಕ ಶುರುವಾದಾಗ ನೂರಾರು ಲೇಖಕರಿಗೆ ನಾನೊಂದು ಪತ್ರ ಬರೆದಿದ್ದೆ. ಆ ಮನವಿಗೆ ಕೆಲವರು ಕೊಡುವುದಾಗಿಯೂ, ನೋಡುವುದಾಗಿ, ತಿಳಿಸುವುದಾಗಿಯೂ ಉತ್ತರಿಸಿದ್ದರು. ಆದರೆ ಆಶಾರಘು ಅವರು ಮಾತ್ರ ʼನನಗೆ ಈಗಾಗಲೇ ಪ್ರಕಾಶಕರು ಇರುವುದರಿಂದ ನಿಮಗೆ ಪುಸ್ತಕ ಕೊಡಲಾಗುವುದಿಲ್ಲʼ ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಸಾಮಾನ್ಯವಾಗಿ ನಮ್ಮಲ್ಲೊಂದು ಅಹಂಕಾರವಿರುತ್ತದೆ. ನಾವು ಫೋನ್ ಮಾಡಿದ ತಕ್ಷಣ ಅವರು ರಿಸೀವ್ ಮಾಡಿಬಿಡಬೇಕು. ನಾವು ಕೇಳಿದ ತಕ್ಷಣ ದುಡ್ಡು ಕೊಟ್ಟುಬಿಡಬೇಕು. ನಾವು ಸಿಗೋಣ ಅಂದ ತಕ್ಷಣ ಸಿಕ್ಕಿಬಿಡಬೇಕು. ... ಹಾಗೇ, ಹೀಗೆ ಅಂತ! ನನಗೂ ಆ ಕ್ಷಣಕ್ಕೆ ಅಂತಹುದ್ದೇ ಕಾರಣಕ್ಕೆ ಬೇಸರವೆನಿಸಿತ್ತು. ಅವರು ನಮ್ಮ ಪತ್ರಕ್ಕೆ ಉತ್ತರಿಸದಿದ್ದರೂ ಆಗಿತ್ತು, ನೋಡೋಣ ಎಂದಿದ್ದರೂ ಆಗಿತ್ತು. ಅದು ಬಿಟ್ಟು ಕೊಡುವುದೇ ಇಲ್ಲ ಎಂದುಬಿಟ್ಟರಲ್ಲ ಅಂತ ಮನಸಲ್ಲೇ ಬುಸ್ ಅಂದುಕೊಂಡಿದ್ದೆ. ಆದರೆ ಅದು ಆ ಕ್ಷಣದ ಬೇಸರವಾಗಿತ್ತಷ್ಟೇ. ಆ ನಂತರ ಎಲ್ಲೇ ಸಿಕ್ಕರೂ ಬಾಯ್ತುಂಬ ಮಾತನಾಡುತ್ತಿದ್ದೆವು. ಅವರ ಪತಿ ತೀರಿಕೊಂಡಾಗ ಮನೆಯ ಕಾರ್ಯಕ್ರಮಕ್ಕೆ ಕರೆದಿದ್ದರು. ಕಳೆದ ಪುಸ್ತಕ ಸಂತೆಯಲ್ಲಂತೂ ವೇದಿಕೆ ಪಕ್ಕದಲ್ಲಿಯೇ ಅವರ ಮಳಿಗೆ ಇತ್ತು. ಅದೇ ಕಾರಣಕ್ಕೆ ಪದೇ ಪದೇ ಅವರ ಮಳಿಗೆ ಮುಂದೆ ಓಡಾಡುತ್ತಿದ್ದೆ.
ಪುಸ್ತಕ ಸಂತೆಯ ಎರಡನೇ ದಿನ ಏನಾಯಿತೆಂದರೆ... ಸುಮಾರು ಹನ್ನೊಂದು ಗಂಟೆಗೆ ಅವರ ಮಳಿಗೆ ಮುಂದೆ ಹಾದು ಹೋಗುವಾಗ ಅವರು ನನ್ನನ್ನು ಕರೆದರು. ಸರ್... ಇವತ್ತು ಲೈಬ್ರರಿಗೆ ಪುಸ್ತಕ ಸಲ್ಲಿಸಬೇಕು. ಮಧ್ಯಾಹ್ನ ಎರಡು ಗಂಟೆಯೊಳಗೆ ನಾನು ಸೆಂಟ್ರಲ್ ಲೈಬ್ರರಿಗೆ ಹೋಗಬೇಕು. ನಮ್ಮ ಹುಡುಗ ಇನ್ನೂ ಬಂದಿಲ್ಲ. ಫೋನ್ ಮಾಡಿದ್ರೆ ಇನ್ನೂ ಒಂದು ಗಂಟೆಯಾಗುತ್ತೆ ಅಂತಿದ್ದಾನೆ. ನೀವು ಏನಾದರೂ ಮಾಡಬಹುದಾ ಅಂತ ಕೇಳಿದ್ರು. ಅಯ್ಯೋ... ಅಷ್ಟೇ ತಾನೇ? ಮಳಿಗೆ ನಾನೇ ನೋಡ್ಕೋತೀನಿ ನೀವು ಹೋಗಿ ಅಂತ ಕಳುಹಿಸಿದ್ದೆ. ಅದೇ ಪ್ರಕಾರ ಒಂದಿಪ್ಪತ್ತು ನಿಮಿಷ ಅವರ ಮಳಿಗೆಯಲ್ಲಿ ನಾನೇ ಕೂತು ಒಂದು ಪುಸ್ತಕ ಸಹ ಮಾರಿದ್ದೆ! ಅಲ್ಲಿಂದಾಚೆಗೆ ಒಂದು ರೀತಿಯ ಆಪ್ತತೆ ಉಂಟಾಗಿತ್ತು.
ಅದೇ ಕಾರಣಕ್ಕೋ ಏನೋ... ಬಹುತೇಕರು ಕುಂಟುನೆಪಗಳನ್ನು ಹೇಳಿ ಬೀದರ್ ಪ್ರಯಾಣದಿಂದ ತಪ್ಪಿಸಿಕೊಳ್ಳುತ್ತಿರುವಾಗ ಆಶಾರಘು ಅವರು ಮಾತ್ರ ನಾನು ಬರ್ತೀನಿ ಅಂತ ಹೇಳಿದ್ದರು! ಮೊನ್ನೆ ನಮ್ಮ ಪುಸ್ತಕ ಸಂತೆಯ ವಾಟ್ಸಪ್ ಗ್ರೂಪಿನಲ್ಲಿ ಯಾರೆಲ್ಲಾ ಬೀದರಿಗೆ ಬರ್ತೀರಿ ಅಂತ ಕೇಳಿದ್ದಕ್ಕೆ ʼಆಶಾ ರಘು ಅವರು ನಾನು ಬರ್ತೀನಿ ಅಂತ ಮೊದಲಿಗೇ ರಿಪ್ಲ್ಯೆ ಮಾಡಿದ್ದರು. ಬೀದರಿಗೆ ಟಿಕೇಟ್ ಕೂಡ ಆಗಿತ್ತು. ಅಂತಹ ಜೀವನೋತ್ಸಾಹಿ, ನಿಗರ್ವಿ ಮತ್ತು ನಗುಮುಖದ ಸೋದರಿ ಇನ್ನಿಲ್ಲವೆಂದರೆ ಹೇಗೆ ನಂಬುವುದು? ಇನ್ನೂ ಜಸ್ಟ್ ೪೭ ವರ್ಷ ವಯಸ್ಸು. ಇದು ಸಾಯುವ ವಯಸ್ಸಾ ಹೇಳಿ? ಎರಡು ವರ್ಷದ ಹಿಂದಷ್ಟೇ ಪತಿಯನ್ನು ಕಳೆದುಕೊಂಡಿದ್ದರು. ಪತಿಯ ಸಾವಿನ ನಂತರ ಅವರನ್ನು ಜೀವಂತವಾಗಿರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಅಂತಹ ಜೀವವೇ ಇಂದು ಜೀವ ಕಳೆದುಕೊಂಡಿದೆ. ಅವರ ಬದುಕು, ಸಾಹಿತ್ಯ ನನಗೆ ಅಷ್ಟಾಗಿ ಪರಿಚಯವಿಲ್ಲ. ಆದರೆ ಪರಿಚಯವಾದ ಕೆಲವೇ ಅವಧಿಯಲ್ಲಿ ಅವರು ನನಗೆ ದಕ್ಕಿದ್ದು ವಿಶೇಷವಾಗಿಯೇ ಮತ್ತು ಎಂದೂ ಮರೆಯದಂತೆಯೇ....
ನೀವಿಲ್ಲದೆ ಬೀದರಿಗೆ ಹೋಗುತ್ತಿದ್ದೇವೆ ಮೇಡಂ.
ನೀವು ಅಲ್ಲಿರುವಂತೆಯೇ ಪುಸ್ತಕ ಸಂತೆ ರೂಪಿಸುತ್ತೇವೆ.
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮೇಡಂ.
ನಿಮ್ಮ
ವೀರಕಪುತ್ರ ಶ್ರೀನಿವಾಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ