ದ್ವೇಷ ಭಾಷಣ ತಡೆ ಬಿಲ್‌ ತಮ್ಮ ಬಳಿಯೇ ಇಟ್ಟುಕೊಂಡ ಗೌರ್‍ನರ್‌

Kannadaprabha News   | Kannada Prabha
Published : Jan 10, 2026, 06:42 AM IST
thawar chand gehlot

ಸಾರಾಂಶ

ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಿಂದ ಅಂಗೀಕಾರ ಪಡೆದು ಸರ್ಕಾರ ಕಳುಹಿಸಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ ಇನ್ನೂ ರಾಜ್ಯಪಾಲರ ಬಳಿ ಪರಿಶೀಲನಾ ಹಂತದಲ್ಲಿದೆ.

ಬೆಂಗಳೂರು : ಪ್ರತಿಪಕ್ಷ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಿಂದ ಅಂಗೀಕಾರ ಪಡೆದು ಸರ್ಕಾರ ಕಳುಹಿಸಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ ಇನ್ನೂ ರಾಜ್ಯಪಾಲರ ಬಳಿ ಪರಿಶೀಲನಾ ಹಂತದಲ್ಲಿದೆ.

ಆದರೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಉಪಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ‘ಕರ್ನಾಟಕ ಅನುಸೂಚಿತ ಜಾತಿಗಳ(ಉಪ-ವರ್ಗೀಕರಣ) ವಿಧೇಯಕ ಮತ್ತು ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕ’ಗಳಿಗೆ ಸಹಿ ಹಾಕದೆ ಕೆಲ ಸ್ಪಷ್ಟನೆ ಕೇಳಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

ಈ ಮೂರು ವಿಧೇಯಕಗಳನ್ನು ಹೊರತುಪಡಿಸಿ ಉಳಿದಂತೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಸರ್ಕಾರ ಕಳುಹಿಸಿದ್ದ ಇನ್ನುಳಿದ 19 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿ ಸರ್ಕಾರಕ್ಕೆ ಕಳುಹಿಸಿದ್ದಾರೆ.

ಸಹಿ ಹಾಕದೆ ವಾಪಸ್‌ ಕಳುಹಿಸಿರುವ ವಿಧೇಯಕಗಳ ಸಂಬಂಧ ರಾಜ್ಯಪಾಲರು ಯಾವ ಸ್ಪಷ್ಟನೆ ಕೇಳಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕಡತ ಇನ್ನೂ ಕಾನೂನು ಇಲಾಖೆ ಕಾರ್ಯದರ್ಶಿ ಅವರ ಕೈಸೇರಿಲ್ಲ ಎನ್ನಲಾಗಿದ್ದು, ಬಳಿಕ ಮಾಹಿತಿ ಲಭ್ಯವಾಗಬೇಕಿದೆ.

ರಾಜ್ಯಪಾರು ಅಂಕಿತ ಹಾಕಿರುವ, ಅಂಕಿತ ಹಾಕದೇ ಸರ್ಕಾರಕ್ಕೆ ವಾಪಸ್‌ ಕಳುಹಿಸಿರುವ ಹಾಗೂ ಅಂಕಿತ ಬಾಕಿ ಇರುವ ವಿಧೇಯಕಗಳ ಬಗ್ಗೆ ಶುಕ್ರವಾರ ರಾಜಭವನದಿಂದಲೇ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ 22 ವಿಧೇಯಕಗಳನ್ನು ರಾಜ್ಯಪಾಲರ ಅಂಕಿತಕ್ಕಾಗಿ ಸ್ವೀಕರಿಸಲಾಗಿತ್ತು. ಈ ಪೈಕಿ 19 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿ ಸರ್ಕಾರಕ್ಕೆ ಕಳುಹಿಸಿದ್ದು, ಸೂಕ್ತ ರಾಜ್ಯಪತ್ರ ಹೊರಡಿಸಲು ಸೂಚಿಸಿದ್ದಾರೆ. ಉಳಿದ ಮೂರು ವಿಧೇಯಕಗಳ ಪೈಕಿ ಕರ್ನಾಟಕ ಅನುಸೂಚಿತ ಜಾತಿಗಳ(ಉಪ-ವರ್ಗೀಕರಣ) ವಿಧೇಯಕ-2025 ಮತ್ತು ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕ-2025 ಅನ್ನು ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ. ಉಳಿದಂತೆ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆ) ವಿಧೇಯಕ 2025’ ರಾಜ್ಯಪಾಲರ ಪರಿಶೀಲನೆ ಹಂತದಲ್ಲಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌.ಪ್ರಭುಶಂಕರ್‌ ತಿಳಿಸಿದ್ದಾರೆ.

ಎಸ್ಸಿ ಒಳಮೀಸಲಾತಿ ವಿಧೇಯಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಇರುವ ಶೇ.17ರಷ್ಟು ಮೀಸಲಾತಿಯನ್ನು ಮೂರು ಪ್ರವರ್ಗದಡಿ ಉಪಪಂಗಡಗಳಿಗೆ ಒಳಮೀಸಲಾತಿ ಮಾಡಿ ಹಂಚಿಕೆ ಮಾಡಲಾಗಿತ್ತು. ಪ್ರವರ್ಗ ಎ ನಲ್ಲಿ 16, ಪ್ರವರ್ಗ ಬಿನಲ್ಲಿ 19 ಮತ್ತು ಪ್ರವರ್ಗ ಸಿ ಅಡಿ 98 ಉಪಜಾತಿಗಳಿಗೆ ಕ್ರಮವಾಗಿ ಶೇ.6, ಶೇ.6 ಮತ್ತು ಶೇ.5ರ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಉಭಯ ಸದನಗಳಲ್ಲಿ ಅಂಗೀಕಾರ ದೊರಕಿತ್ತು.

ಇನ್ನು ಚಾಮುಂಡೇಶ್ವರಿ, ರೇಣುಕಾ ಯಲ್ಲಮ್ಮ ದೇವಸ್ಥಾನ, ಘಾಟಿ ಸುಬ್ರಹ್ಮಣ್ಯ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಗಳಿಗೆ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಎ-ದರ್ಜೆಯ ಹಿರಿಯ ಶ್ರೇಣಿ ಅಧಿಕಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿಯಾಗಿ ನೇಮಿಸುವುದಕ್ಕಾಗಿ ತರಲಾಗಿರುವ ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ (ಕ್ಷೇಮಾಭಿವೃದ್ಧಿ)(ತಿದ್ದುಪಡಿ) ವಿಧೇಯಕ ತಂದು ಸರ್ಕಾರ ಅಂಗೀಕಾರ ಪಡೆದಿತ್ತು.

ದ್ವೇಷ ಭಾಷಣ ಬಿಲ್‌ ವಿರುದ್ಧ ಬಿಜೆಪಿ ಮನವಿ:

ಉಭಯ ಸದನಗಳಲ್ಲೂ ದ್ವೇಷ ಭಾಷಣ ತಡೆ ಕಾಯ್ದೆಗೆ ಪ್ರತಿಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾದರೂ ಇದನ್ನು ಪರಿಗಣಿಸದೆ ಸರ್ಕಾರ ಅಂಗೀಕಾರ ಪಡೆದಿದೆ. ಇದು ಸಂವಿಧಾನದಲ್ಲಿ ಕಲ್ಪಿಸಲಾಗಿರುವ ವಾಕ್‌ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ತರಲಿದೆ. ಹಾಗಾಗಿ ಈ ಮಸೂದೆಗೆ ಅಂಕಿತ ಹಾಕಬಾರದೆಂದು ಬಿಜೆಪಿ ನಾಯಕರು ಅಧಿವೇಶನದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅಲ್ಲದೆ, ಈ ವಿಧೇಯಕದ ವಿರುದ್ಧ ಸದನದ ಒಳಗಷ್ಟೇ ಅಲ್ಲದೆ, ಸದನದ ಹೊರಗೂ ಪ್ರತಿಭಟನೆ ನಡೆಸಿ ವಾಪಸ್‌ ಪಡೆಯಲು ಆಗ್ರಹಿಸಿದ್ದು ಗಮನಾರ್ಹ.

ಅಂಕಿತ ಹಾಕಿದ 19 ವಿಧೇಯಕಗಳು ಯಾವ್ಯಾವು?

ಕಾರ್ಮಿಕ ಕಲ್ಯಾಣ ನಿಧಿ ವಿಧೇಯಕ, ಕರ್ನಾಟಕ ಬಾಡಿಗೆ ವಿಧೇಯಕ, ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ ವಿಧೇಯಕ, ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ವಿಧೇಯಕ, ಕರ್ನಾಟಕ ಭೂ ಕಂದಾಯ ವಿಧೇಯಕ, ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ವಿಧೇಯಕ, ಬಯಲು ಸೀಮೆ ಮಂಡಳಿ ವಿಧೇಯಕ, ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಪ್ರಾಧಿಕಾರ ವಿಧೇಯಕ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಲಿ ವಿಧೇಯಕ, ಕರ್ನಾಟಕ ರಾಜ್ಯ ವಿವಿಗಳ ವಿಧೇಯಕ, ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ವಿಧೇಯಕ, ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವಿಧೇಯಕ, ಔಷಧಗಳು ಮತ್ತು ಸೌಂದರ್ಯವರ್ಧಕಗಳ ತಿದ್ದುಪಡಿ ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ ದೊರಕಿದೆ. ಈ ಮಧ್ಯೆ, ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕಕ್ಕೂ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಖಚಿತ ಮಾಹಿತಿ ಲಭ್ಯವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನ್ನಡ ಶಾಲೆಗಳಲ್ಲಿ ಮಲಯಾಳಂ ಪ್ರಥಮ ಭಾಷೆ - ಮತ್ತೆ ಕೇರಳ VS ಕರ್ನಾಟಕ
ಎಚ್‌ಡಿಕೆ ಅನುಭವದಲ್ಲಿ ಇರುವುದು ಆತ್ಮರತಿಯ ಕೊಚ್ಚೆ : ಡಿಕೆ ಗುಡುಗು