ಕನ್ನಡ ಶಾಲೆಗಳಲ್ಲಿ ಮಲಯಾಳಂ ಪ್ರಥಮ ಭಾಷೆ - ಮತ್ತೆ ಕೇರಳ VS ಕರ್ನಾಟಕ

Kannadaprabha News   | Kannada Prabha
Published : Jan 10, 2026, 06:36 AM IST
Shivaraja tangadagi

ಸಾರಾಂಶ

ಕಾಸರಗೋಡು ವಿಚಾರವಾಗಿ ಕರ್ನಾಟಕ ಹಾಗೂ ಕೇರಳ ನಡುವೆ ಮತ್ತೊಮ್ಮೆ ಭಾಷಾ ಸಮರ ಭುಗಿಲೆದ್ದಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಅನ್ನು ಕಡ್ಡಾಯವಾಗಿ, ಪ್ರಥಮ ಭಾಷೆಯಾಗಿ ಕಲಿಸಬೇಕೆಂಬ ಮಸೂದೆ ವಿರುದ್ಧ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬೆಳಗಾವಿ : ಕಾಸರಗೋಡು ವಿಚಾರವಾಗಿ ಕರ್ನಾಟಕ ಹಾಗೂ ಕೇರಳ ನಡುವೆ ಮತ್ತೊಮ್ಮೆ ಭಾಷಾ ಸಮರ ಭುಗಿಲೆದ್ದಿದೆ. ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಅನ್ನು ಕಡ್ಡಾಯವಾಗಿ, ಪ್ರಥಮ ಭಾಷೆಯಾಗಿ ಕಲಿಸಬೇಕೆಂಬ ಮಸೂದೆ ವಿರುದ್ಧ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಟೀಕಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ವಿಧೇಯಕಕ್ಕೆ ಅನುಮೋದನೆ ನೀಡದಂತೆ ಒತ್ತಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಶೀಘ್ರವೇ ರಾಷ್ಟ್ರಪತಿ ಬಳಿಗೆ ನಿಯೋಗವೊಂದನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಈ ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿ, ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ-2025 ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದ್ದು, ತಕ್ಷಣವೇ ಇದನ್ನು ಹಿಂಪಡೆಯುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರನ್ನು ಆಗ್ರಹಿಸಿದ್ದರು.

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಂಗಡಗಿ, ಈ ಮಸೂದೆ ಗಡಿ ಪ್ರದೇಶಗಳಲ್ಲಿ, ಅದರಲ್ಲಿಯೂ ವಿಶೇಷವಾಗಿ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಮಸೂದೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ. ಕಾಸರಗೋಡಿನಲ್ಲಿ 7.5 ಲಕ್ಷ ಕನ್ನಡಿಗರಿದ್ದು, 210 ಕನ್ನಡ ಮಾಧ್ಯಮ ಶಾಲೆಗಳಿವೆ. ಸಂವಿಧಾನದ 350ಬಿ ವಿಧಿಯ ನಿಬಂಧನೆಗಳಡಿ, ಕೇರಳ ಸರ್ಕಾರ ಕಳುಹಿಸಿರುವ ಮಸೂದೆಗೆ ಅನುಮೋದನೆ ನೀಡದಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಈ ಸಂಬಂಧ ಸಿಎಂ ಹಾಗೂ ಡಿಸಿಎಂ ಜತೆ ಮಾತುಕತೆ ನಡೆಸಿದ್ದೇನೆ. ಮಲಯಾಳಂ ಭಾಷಾ ಮಸೂದೆಗೆ ಅನುಮೋದನೆ ಕೊಡದಂತೆ ಕೇರಳ ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಮಸೂದೆ ಕುರಿತು ಕೇರಳ ಸಿಎಂಗೆ ಪತ್ರ ಬರೆಯುವಂತೆಯೂ ಸಿಎಂಗೆ ಮನವಿ ಮಾಡುತ್ತೇನೆ. ಈ ನಿಟ್ಟಿನಲ್ಲಿ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವೂ ಮಸೂದೆ ವಿರುದ್ಧ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಅವರು ತಿಳಿಸಿದರು.

ಮಸೂದೆಯಲ್ಲಿ ಏನಿದೆ?:

ಕೇರಳದಲ್ಲಿ ಅಧಿಕಾರದಲ್ಲಿರುವ ಎಲ್‌ಡಿಎಫ್‌ ಸರಕಾರ 2025ರ ಅಕ್ಟೋಬರ್ 6 ರಂದು ವಿಧಾನಸಭೆಯಲ್ಲಿ ‘ಮಲಯಾಳಂ ಭಾಷಾ ಮಸೂದೆ-2025’ನ್ನು ಅಂಗೀಕರಿಸಿದ್ದು, ಮಸೂದೆ ಈಗ ರಾಜ್ಯಪಾಲರ ಅಂಗೀಕಾರಕ್ಕಾಗಿ ಕಾಯುತ್ತಿದೆ.

ಪ್ರಸ್ತುತ ಕೇರಳ ರಾಜ್ಯದಲ್ಲಿ ಇಂಗ್ಲಿಷ್ ಮತ್ತು ಮಲಯಾಳಂ ಎರಡನ್ನೂ ಅಧಿಕೃತ ಭಾಷೆಗಳನ್ನಾಗಿ ಗುರುತಿಸಲಾಗಿದೆ. ಆದರೆ, ಈ ಮಸೂದೆ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡಲಿದ್ದು, ಸರ್ಕಾರ, ಶಿಕ್ಷಣ, ನ್ಯಾಯಾಂಗ, ಸಾರ್ವಜನಿಕ ಸಂವಹನ, ವಾಣಿಜ್ಯ ಮತ್ತು ಡಿಜಿಟಲ್ ಡೊಮೇನ್‌ನಾದ್ಯಂತ ಅದರ ಬಳಕೆಯನ್ನು ಕಡ್ಡಾಯಗೊಳಿಸುತ್ತದೆ. ಇದರಿಂದಾಗಿ ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯವಾಗಲಿದೆ.

ಈ ಮೊದಲು, 2015ರಲ್ಲಿ ಕೇರಳ ಸರ್ಕಾರ ಮಲಯಾಳ ಭಾಷಾ ಮಸೂದೆ-2015ಯನ್ನು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಆದರೆ, 1963ರ ಅಧಿಕೃತ ಭಾಷಾ ಕಾಯ್ದೆಗೆ ವಿರುದ್ಧವಾದ ನಿಬಂಧನೆಗಳನ್ನು ಅದು ಒಳಗೊಂಡಿರುವುದರಿಂದ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ಸಿಕ್ಕಿರಲಿಲ್ಲ. ಕೇಂದ್ರ ಸರ್ಕಾರ ಕೂಡ ಇದಕ್ಕೆ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಈ ದೋಷಗಳನ್ನು ತೆಗೆದು ಹಾಕಿ, ಹೊಸ ಮಸೂದೆಯನ್ನು ಅಂಗೀಕರಿಸಲಾಗಿದೆ.

ಏನಿದು ವಿವಾದ?

- ಮಲಯಾಳಂ ಭಾಷಾ ಮಸೂದೆಯನ್ನು ಕೇರಳ ಅಂಗೀಕರಿಸಿದ್ದು, ರಾಜ್ಯಪಾಲರ ಒಪ್ಪಿಗೆ ಬಾಕಿ ಇದೆ

- ಆ ವಿಧೇಯಕದ ಪ್ರಕಾರ ಕಾಸರಗೋಡಿನ ಕನ್ನಡ ಶಾಲೆಗಳಲ್ಲೂ ಮಲಯಾಳಂ ಪ್ರಥಮ ಭಾಷೆ ಆಗಲಿದೆ

- ಅದನ್ನು ಕಡ್ಡಾಯವಾಗಿ ಕಲಿಸಬೇಕು. ಇದು ಭಾಷಾ ಅಲ್ಪಸಂಖ್ಯಾತರ ಮೇಲಿನ ಪ್ರಹಾರ ಎಂದು ಆಕ್ರೋಶ

- ಕಾಸರಗೋಡಿನಲ್ಲಿ 7.5 ಲಕ್ಷ ಕನ್ನಡಿಗರು, 210 ಕನ್ನಡ ಮಾಧ್ಯಮ ಶಾಲೆಗಳಿವೆ ಎಂಬುದು ಗಮನಾರ್ಹ

ಪಿಣರಾಯಿ ತಗಾದೆ

- 2017ರಲ್ಲೂ ಇದೇ ರೀತಿ ಮಲಯಾಳ ಕಡ್ಡಾಯ ಮಸೂದೆಯನ್ನು ಕೇರಳ ಸರ್ಕಾರ ಅಂಗೀಕರಿಸಿತ್ತು

- ಆ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿರಲಿಲ್ಲ. ಕೇಂದ್ರ ಸರ್ಕಾರದಿಂದಲೂ ಆಕ್ಷೇಪ ವ್ಯಕ್ತ ಆಗಿತ್ತು

- 2022ರಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಂ ಶಿಕ್ಷಕರನ್ನು ಕೇರಳ ನೇಮಕ ಮಾಡಿತ್ತು

- ವಿರೋಧದ ಬಳಿಕ ವಾಪಸ್‌ ಪಡೆದಿತ್ತು. ಈ ಎಲ್ಲ ಘಟನೆ ನಡೆದಿರುವುದು ಪಿಣರಾಯಿ ಸಿಎಂ ಆದ ಬಳಿಕವೇ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಚ್‌ಡಿಕೆ ಅನುಭವದಲ್ಲಿ ಇರುವುದು ಆತ್ಮರತಿಯ ಕೊಚ್ಚೆ : ಡಿಕೆ ಗುಡುಗು
ನಂಬಿಕೆಗಿಂತ ದೊಡ್ಡ ಗುಣ ಬೇರೆ ಇಲ್ಲ, ತಾಳ್ಮೆ ಇದ್ದರೆ ಜಗತ್ತೇ ಗೆಲ್ಲಬಹುದು : ಡಿಕೆ