ಐಎಎಸ್‌ ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ ತಾಕತ್ತಿದೆಯೇ?: ಸರ್ಕಾರಕ್ಕೆ ಸಾ.ರಾ. ಮಹೇಶ್‌ ಪ್ರಶ್ನೆ

By Kannadaprabha News  |  First Published Sep 17, 2021, 1:25 PM IST

*  ಸರ್ಕಾರದ ಬೊಕ್ಕಸ ಲೂಟಿ ಮಾಡುವ ಅಧಿಕಾರಿಗಳ ವಿರುದ್ಧ ಯಾವ ಕ್ರಮ?
*  ಕ್ರಮಕ್ಕೆ ಮುಖ್ಯಕಾರ್ಯದರ್ಶಿಗೆ ಸೂಚನೆ
*  ಸಭಾಧ್ಯಕ್ಷರು ನಮ್ಮ ರಕ್ಷಣೆಗೆ ಬರಬೇಕು 


ಬೆಂಗಳೂರು(ಸೆ.17): ಸರ್ಕಾರದ ಹಣ ಲೂಟಿ ಮಾಡುವ ಐಎಎಸ್‌ ಅಧಿಕಾರಿಗಳ ವಿರುದ್ಧ ತನಿಖೆ ಮಾಡಬೇಕು, ಕೆಎಎಸ್‌, ಎಫ್‌ಡಿಎ ಅಧಿಕಾರಿಗಳ ಮೇಲೆ ದಾಳಿ ಮಾಡುವ ಸರ್ಕಾರಕ್ಕೆ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಮೇಲೆ ದಾಳಿ ಮಾಡುವ ತಾಕತ್ತು ಇದೆಯೇ ಎಂದು ಜೆಡಿಎಸ್‌ ಶಾಸಕ ಪ್ರಶ್ನಿಸಿದ್ದಾರೆ. 

ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಕುರಿತಂತೆ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಚರ್ಚೆಯ ವೇಳೆ ಮಧ್ಯ ಪ್ರವೇಶಿಸಿದ ಅವರು, ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ ಅವರ ಹೆಸರು ಉಲ್ಲೇಖಿಸದೇ, 40 ರು. ಬ್ಯಾಗ್‌ಗೆ 69 ರು.ಗಳಂತೆ 15 ಲಕ್ಷ ಬ್ಯಾಗ್‌ ಖರೀದಿಸಿದ್ದಾರೆ. ಇದೊಂದು ಖರೀದಿಯಲ್ಲೇ ಸುಮಾರು 6.50 ಕೋಟಿ ಲೂಟಿ ಮಾಡಲಾಗಿದೆ. ನಾವು ಒಂದೆರಡು ರು. ತೆಗೆದುಕೊಂಡರೂ ಚುನಾವಣೆ ವೇಳೆ ಅದನ್ನು ಜನರಿಗೆ ನೀಡುತ್ತೇವೆ. ಆದರೆ ಐಎಎಸ್‌ ಅಧಿಕಾರಿಗಳು ಯಾರಿಗೆ ಕೊಡುತ್ತಾರೆ. ಲೂಟಿ ಮಾಡಿದ ಹಣವನ್ನು ಆಂಧ್ರಪ್ರದೇಶ, ಉತ್ತರ ಪ್ರದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಆಕ್ರೋಶದಿಂದ ನುಡಿದರು.

Latest Videos

undefined

35 ವರ್ಷಗಳ ಕಾಲ ಶೋಕಿ ಮಾಡಿ ನಿವೃತ್ತಿ ನಂತರ ಈ ಅಧಿಕಾರಿಗಳು 500 ಕೋಟಿ ರು. ಆಸ್ತಿ ಮಾಡುತ್ತಾರೆ. ಹಾಗೆಂದು ಎಲ್ಲ ಅಧಿಕಾರಿಗಳು ಭ್ರಷ್ಟರು ಎಂದು ಹೇಳುವುದಿಲ್ಲ, ಒಳ್ಳೆಯವರು, ದಕ್ಷರು ಇದ್ದಾರೆ. ಆದರೆ ಸರ್ಕಾರದ ಬೊಕ್ಕಸ ಲೂಟಿ ಮಾಡುವ ಅಧಿಕಾರಿಗಳ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ. ನಿವೃತ್ತಿ ನಂತರ ಚುನಾವಣೆಗೆ ನಿಲ್ಲುತ್ತಾರೆ ಎಂದು ಹರಿಹಾಯ್ದರು.

ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಪ್ರಚಾರ ಪ್ರಿಯೆ: ಸಾರಾ

ನಾವು 10 ರು. ಪಡೆದುಕೊಂಡರೆ ಬೆಳಗಿನಿಂದ ಇಡೀ ದಿನ ನಮ್ಮನ್ನು ತೋರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಲಾಗುತ್ತದೆ, ನನ್ನಂತವರಿಗೆ ಇಷ್ಟು ನೋವು ಕೊಟ್ಟಿದ್ದಾರೆ. ಹಾಗಾಗಿ ಸಭಾಧ್ಯಕ್ಷರು ನಮ್ಮ ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿದರು.

ವ್ಯವಸ್ಥೆ ಎಲ್ಲಿಗೆ ನಿಲ್ಲಿಸುತ್ತಾರೆ?:

ಸಾ.ರಾ. ಮಹೇಶ್‌ ಅವರ ಮಾತಿಗೆ ಪೂರಕವಾಗಿ ಮಾತನಾಡಿದ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಒಬ್ಬ ಸರ್ಕಾರಿ ಅಧಿಕಾರಿ ಶಾಸಕರ ವಿರುದ್ಧ ಮಾಧ್ಯಮಗಳ ಎದುರು ಆರೋಪಿಸುವ ಅಧಿಕಾರವನ್ನು ಯಾವಾಗ ಕೊಟ್ಟಿದ್ದೀರಾ, ಸರ್ಕಾರಿ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ಮುಖ್ಯ ಕಾರ್ಯದರ್ಶಿಗಳ ಮುಂದೆ ಹೇಳಬೇಕಾಗುತ್ತದೆ. ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೋಗುವ ಮೂಲಕ ಈ ವ್ಯವಸ್ಥೆಯನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿರಿ, ಮೈಸೂರು ಪ್ರಕರಣದಲ್ಲಿ ಮುಖ್ಯಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಯನ್ನು ತಮ್ಮ ಬಳಿ ಕರೆಯಿಸಿಕೊಳ್ಳುವ ಬದಲು ಅವರೇ ಮೈಸೂರಿಗೆ ಹೋಗುತ್ತಾರೆ. ಇದು ಸರಿಯಲ್ಲ ಎಂದು ಹೇಳಿದರು.

ಕ್ರಮಕ್ಕೆ ಮುಖ್ಯಕಾರ್ಯದರ್ಶಿಗೆ ಸೂಚನೆ

ಯಾವದೇ ಸರ್ಕಾರಿ ಅಧಿಕಾರಿ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದು, ಕೆಲವರು ಓವರ್‌ ಆಕ್ಟಿಂಗ್‌ ಮಾಡುತ್ತಾರೆ, ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಭರವಸೆ ನೀಡಿದರು.
 

click me!