ಪಂಚಮಸಾಲಿಗಳಿಗೆ 2A ಮೀಸಲು: ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕೂಡಲ ಶ್ರೀ

By Kannadaprabha NewsFirst Published Nov 25, 2022, 6:30 AM IST
Highlights

ವರದಿ ತರಿಸಿಕೊಳ್ಳದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ, ಬೊಮ್ಮಾಯಿ ಭೇಟಿ ಮಾಡಿದ ಬಳಿಕ ಕೂಡಲಸಂಗಮ ಶ್ರೀ ಎಚ್ಚರಿಕೆ

ಬೆಂಗಳೂರು(ನ.25):  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತಂತೆ ಡಿ.19ರೊಳಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳಲು ಸರ್ಕಾರಕ್ಕೆ ಹೊಸ ಗಡುವು ನೀಡಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯು, ತಪ್ಪಿದರೆ ಅಧಿವೇಶನದ ದಿನ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದೆ. ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಜನಪ್ರತಿನಿಧಿಗಳು ಹಾಗೂ ಸಮಿತಿಯ ಪದಾಧಿಕಾರಿಗಳನ್ನೊಳಗೊಂಡ ನಿಯೋಗ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಚರ್ಚೆ ನಡೆಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ ಅವರು, ಕಳೆದ ಎರಡು ವರ್ಷಗಳಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಾವು ಹೋರಾಟ ಮಾಡುತ್ತಿದ್ದೇವಿ. ಆದರೂ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಹಾಗೂ ನಾವು ಕೊಟ್ಟಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಡಿ.12ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್‌ ಶಕ್ತಿ ಪ್ರದರ್ಶನ ಹೋರಾಟ ಮಾಡಲು ನಿರ್ಧರಿಸಿದ್ದೆವು. ಆದರೆ, ಮುಖ್ಯಮಂತ್ರಿಗಳು ವಿಧಾನಸೌಧ ಮುತ್ತಿಗೆ ಹಾಕಿದರೆ ಸರ್ಕಾರಕ್ಕೆ ಮುಜುಗರವಾಗಲಿದೆ. ಮುತ್ತಿಗೆ ನಿರ್ಧಾರ ಕೈಬಿಟ್ಟು ತಮ್ಮ ಮೇಲೆ ನಂಬಿಕೆ ಇಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.12ರ ಹೋರಾಟದ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ ಎಂದು ತಿಳಿಸಿದರು.

ಡಿ.12 ರೊಳಗಾಗಿ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲೇಬೇಕು: ಯತ್ನಾಳ

ಒಂದು ವೇಳೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳದೆ ಇದ್ದರೆ ಅಧಿವೇಶನ ಆರಂಭದ ದಿನವೇ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು. ಕೊಟ್ಟ ಮಾತಿನಂತೆ ನಡೆಯದೆ ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ಮುಂದೆ ಚುನಾವಣೆ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವುದು ಮುಖ್ಯಮಂತ್ರಿಗಳೂ ಸೇರಿ ಸರ್ಕಾರದ ಎಲ್ಲರಿಗೂ ಗೊತ್ತಿದೆ. ಸಮುದಾಯದ ಲಕ್ಷಾಂತರ ಜನರೊಂದಿಗೆ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.

ನಿಯೋಗದಲ್ಲಿ ಸಚಿವ ಸಿ.ಸಿ. ಪಾಟೀಲ್‌, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಮಿತಿ ರಾಷ್ಟಾ್ರಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಮುದಾಯದ ವಿವಿಧ ಮಠಾಧೀಶರು, ಮುಖಂಡರು ಇದ್ದರು. ಇದಕ್ಕೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮುದಾಯದ ಜನಪ್ರತಿನಿಧಿಗಳು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮೀಸಲಾತಿಗಾಗಿ ಮುಂದಿನ ಹೋರಾಟದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.

click me!