ಹಿಂಗಾರು ಮಳೆ: 10 ಲಕ್ಷ ಹೆಕ್ಟೇರ್‌ ಕಡಿಮೆ ಬಿತ್ತನೆ

Published : Nov 25, 2022, 03:00 AM IST
ಹಿಂಗಾರು ಮಳೆ: 10 ಲಕ್ಷ ಹೆಕ್ಟೇರ್‌ ಕಡಿಮೆ ಬಿತ್ತನೆ

ಸಾರಾಂಶ

ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಹಿಂಗಾರು ಬಿತ್ತನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೃಷಿ ಇಲಾಖೆಯ ನಿಗದಿತ ಗುರಿಗಿಂತ ಬರೋಬ್ಬರಿ 10 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕಡಿಮೆ ಬಿತ್ತನೆಯಾಗಿದೆ. 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.25): ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಹಿಂಗಾರು ಬಿತ್ತನೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೃಷಿ ಇಲಾಖೆಯ ನಿಗದಿತ ಗುರಿಗಿಂತ ಬರೋಬ್ಬರಿ 10 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಕಡಿಮೆ ಬಿತ್ತನೆಯಾಗಿದೆ. ಇಲಾಖೆ ಅಂಕಿ ಅಂಶಗಳ ಪ್ರಕಾರ ನ.10ರವರೆಗೆ ರಾಜ್ಯಾದ್ಯಂತ ಒಟ್ಟಾರೆ 26.68 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಬೇಕಿತ್ತಾದರೂ 16.30 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ 6.42 ಲಕ್ಷ ಹೆಕ್ಟೇರ್‌ ಗುರಿಗೆ ಬದಲಾಗಿ 2.68 ಲಕ್ಷ ಹೆಕ್ಟೇರ್‌ನಲ್ಲಿ ಹಾಗೂ ಮಳೆಯಾಶ್ರಿತದಲ್ಲಿ 20.26 ಲಕ್ಷ ಹೆಕ್ಟೇರ್‌ ಗುರಿಗೆ ಬದಲಾಗಿ 13.63 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳು, ವಾಣಿಜ್ಯ ಬೆಳೆಗಳು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಹಿಂದಿನ ವರ್ಷ ಸೇರಿದಂತೆ ಕಳೆದ ಕೆಲ ವರ್ಷಗಳ ವಾಡಿಕೆಗಿಂತಲೂ ಕಡಿಮೆ ವಿಸ್ತೀರ್ಣದಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಸೇರಿದಂತೆ ಏಕದಳ ಧಾನ್ಯಗಳಲ್ಲಿ ಶೇ.47ರಷ್ಟುಸಾಧನೆಯಾಗಿದ್ದು,11.15 ಲಕ್ಷ ಹೆಕ್ಟೇರ್‌ಗೆ ಬದಲಾಗಿ 5.22 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.

Chikkaballapur: ಜಿಲ್ಲೆಯಲ್ಲಿ ಈ ಬಾರಿ ಗುರಿ ಮೀರಿ ಸಿರಿಧಾನ್ಯ ಬಿತ್ತನೆ

ದ್ವಿದಳ, ವಾಣಿಜ್ಯ ಬೆಳೆ ಬಿತ್ತನೆಯೂ ಕಡಿಮೆ: ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆಯೂ ಕಡಿಮೆಯಾಗಿದೆ. 12.20 ಲಕ್ಷ ಹೆಕ್ಟೇರ್‌ ಗುರಿಗೆ ಬದಲಾಗಿ 9.24 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಹತ್ತಿ, ಕಬ್ಬು, ತಂಬಾಕು ಸೇರಿದಂತೆ ವಾಣಿಜ್ಯ ಬೆಳೆಗಳನ್ನು 1.38 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಬೇಕಿತ್ತಾದರೂ 44 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ಎಣ್ಣೆ ಕಾಳುಗಳ ಬಿತ್ತನೆ ಪ್ರಮಾಣವೂ ಇದಕ್ಕೆ ಹೊರತಾಗಿಲ್ಲ. ಎಳ್ಳು, ಸೂರ್ಯಕಾಂತಿ, ಕುಸುಬೆ, ಅಗಸೆ, ಸೋಯಾ ಅವರೆ, ಶೇಂಗಾ, ಹುಚ್ಚೆಳ್ಳು ಮತ್ತಿತರ ಬೆಳೆಗಳ ಬಿತ್ತನೆ ಗುರಿ 1.93 ಲಕ್ಷ ಹೆಕ್ಟೇರ್‌ ಇತ್ತಾದರೂ 1.40 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಜಿಲ್ಲೆಗಳ ಪೈಕಿ ಹಾವೇರಿ ಶೇ.13, ವಿಜಯನಗರ ಶೇ.20 , ಬಳ್ಳಾರಿ ಶೇ.22, ಚಿಕ್ಕಬಳ್ಳಾಪುರ ಶೇ.33, ಚಿತ್ರದುರ್ಗ ಶೇ.41, ದಾವಣಗೆರೆ ಶೇ.43 ಮತ್ತು ಬಾಗಲಕೋಟೆಯಲ್ಲಿ ಶೇ.48ರಷ್ಟುಬಿತ್ತನೆಯಾಗಿದೆ. ಆದರೆ, ಕೊಪ್ಪಳ ಮತ್ತು ಮೈಸೂರು ಜಿಲ್ಲೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಸಾಧನೆಯಾಗಿದೆ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಹಿಂಗಾರು ಬಿತ್ತನೆಗೆ ಅವಕಾಶವಿದ್ದು ಈಗಾಗಲೇ ಒಂದೂವರೆ ತಿಂಗಳು ಕಳೆದಿರುವುದರಿಂದ ದಕ್ಷಿಣ ಕರ್ನಾಟಕ ಭಾಗದಲ್ಲಿ ಹಿಂಗಾರು ಬಿತ್ತನೆಗೆ ಹಿನ್ನಡೆ ಉಂಟಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಿಂಗಾರು ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಿದ್ದು, ಮಳೆ ಬಿಡುವು ನೀಡಿದರೆ ಬಿತ್ತನೆ ಚುರುಕಾಗಲಿದೆ. ಇಲ್ಲದಿದ್ದರೆ ನಿರೀಕ್ಷಿತ ಗುರಿಗಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ.

ಬಾರೋ...ಬಾರೋ ಮಳೆರಾಯ...ನಿತ್ಯ ಮಳೆಗಾಗಿ ಜಪಿಸುತ್ತಿರುವ ಅನ್ನದಾತರು!

ಅಲ್ಪಾವಧಿ ಬೆಳೆಗಿದೆ ಅವಕಾಶ: ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಭೂಮಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿಲ್ಲ. ಈ ಭಾಗದಲ್ಲಿ ತಿಂಗಳಾಂತ್ಯದವರೆಗೂ ಹಿಂಗಾರು ಬೆಳೆಗೆ ಅವಕಾಶವಿದೆ. ಬಳಿಕ ಪರಿಸ್ಥಿತಿ ಪೂರಕವಾಗಿರುವುದಿಲ್ಲ ಎಂದು ಕೃಷಿ ಹವಾಮಾನ ತಜ್ಞ ಡಾ.ರಾಜೇಗೌಡ ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಹಿಂಗಾರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಇಲ್ಲಿ ಕಪ್ಪು ಮಣ್ಣು(ಎರೆ ಭೂಮಿ) ಅಧಿಕ ಪ್ರಮಾಣದಲ್ಲಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆ ಭಾಗದಲ್ಲಿ ಕುಸುಬೆ, ಹೆಸರು, ಉದ್ದು ಮತ್ತಿತರ ಕಡಿಮೆ ದಿನಗಳಲ್ಲಿ ಫಸಲು ನೀಡುವ ಬೆಳೆಗಳಿಗೆ ಇನ್ನೂ ಕಾಲಾವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್