* ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ
* ಕರ್ನಾಟಕ ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ
* ನಮ್ಮ ಮೌನವನ್ನು ಸರ್ಕಾರ ಅಪಾರ್ಥ ಮಾಡಿಕೊಂಡಿರುವಂತಿದೆ ಎಂದು ಶ್ರೀಗಳು
ಬೆಳಗಾವಿ, (ಫೆ.01): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (2A Reservation) ನೀಡಬೇಕೆಂದು ಕೂಡಲಸಂಗಮ ಜಯಮೃತ್ಯುಂಜಯ ಸ್ವಾಮೀಜಿ (Jaya Mruthiyunjaya Swamiji) ಕರ್ನಾಟಕ ಸರ್ಕಾರಕ್ಕೆ ಮತ್ತೆ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಕಳೆದ ವರ್ಷ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ಕನ್ನಡಿಗರಿಗೆ ಚೆನ್ನಾಗಿ ನೆನಪಿದೆ. ಕೋವಿಡ್ (Covid) ಪಿಡುಗಿನ ಹಿನ್ನೆಲೆಯಲ್ಲಿ ಸಮುದಾಯದ ಜನ ಮೌನವಾಗಿದ್ದರು ಆದರೆ, ನಮ್ಮ ಮೌನವನ್ನು ಸರ್ಕಾರ ಅಪಾರ್ಥ ಮಾಡಿಕೊಂಡಿರುವಂತಿದೆ ಎಂದರು.
Panchamasali Reservation: ಬೊಮ್ಮಾಯಿ ಸರ್ಕಾರದ ವಿರುದ್ಧ ಕೂಡಲ ಶ್ರೀ ಕಿಡಿ
ಒಂದು ವರ್ಷದಿಂದ 2ಎ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಇದು ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಪಂಚಮಸಾಲಿ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ. ನಾವು ಪ್ರತಿಬಾರಿ ಸಂಪರ್ಕಿಸಿದಾಗಲೂ ಸರ್ಕಾರ ಸಮಯ ಕೇಳುತ್ತದೆ. ಸರ್ಕಾರಕ್ಕೆ ಅನೇಕ ಸಲ ನಾವು ಗಡುವು ನೀಡಿದ್ದೇವೆ. ಅದರೆ ನಮ್ಮ ಬೇಡಿಕೆ ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ನಾವು ನೀಡಿದ ಪ್ರತಿ ಗಡುವಿನ ಉಲ್ಲಂಘನೆಯಾಗುತ್ತಿದೆ. ಮಾರ್ಚ್ ಒಳಗಾಗಿ ನಾವು ಕೋರಿರುವ ಮೀಸಲಾತಿ ಪ್ರಕಟಿಸಬೇಕು ಅಂತ ಸರ್ಕಾರಕ್ಕೆ ಹೇಳಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಮೀಸಲಾತಿ ಘೋಷಿಸುತ್ತಾರೆ ಎಂಬ ಭರವಸೆ ನಮಗೆ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ಕೊವಿಡ್ ಹಿನ್ನೆಲೆಯಲ್ಲಿ ನಮ್ಮ ಹೋರಾಟಕ್ಕೆ ತಡೆಯೊಡ್ಡಿದ್ದು ನಿಜ, ಆದರೆ ಅದನ್ನು ಸರ್ಕಾರ ನಾವು ಸುಮ್ಮನಾಗಿದ್ದೇವೆ ಎಂದು ಭಾವಿಸಬಾರದು. ನಮ್ಮ ಮುಂದಿನ ಕಾರ್ಯ ಯೋಜನೆಯನ್ನು ನಾಳಿನ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸ್ವಾಮೀಜಿ ಅವರು ಸಾಮಾಜಿಕ ನ್ಯಾಯ ದೃಷ್ಟಿಯಿಂದ ಪಂಚಮಸಾಲಿ ಸಮುದಾಯಕ್ಕೂ ಒಂದು ಸ್ಥಾನ ಮೀಸಲಿಡಬೇಕೆಂದು ಹೇಳಿದರು. ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿ ಕಲ್ಪಿಸಲಾಗಿದೆ. ನಮ್ಮ ಸಮುದಾಯಕ್ಕೂ ಅವಕಾಶ ನೀಡಬೇಕೆಂದು ಬಿಜೆಪಿಯ ವರಿಷ್ಠರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟ 25 ವರ್ಷ ಹಳೆಯದು. ಕಳೆದೊಂದು ವರ್ಷದಿಂದ ಪಾದಯಾತ್ರೆ ಸೇರಿದಂತೆ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ(Government of Karnataka) ಮಾತ್ರ ನಮ್ಮ ಕೂಗಿಗೆ ಮನ್ನಣೆ ನೀಡಿಲ್ಲ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನಿನ್ನೆಯಷ್ಟೇ ಉತ್ತರ ಕರ್ನಾಟಕದ ತಳವಾರ, ಪರಿವಾರ ಸಮಾಜಕ್ಕೆ ಎಸ್ಟಿ ಮೀಸಲಾತಿಯ ಆದೇಶ ಪತ್ರ ನೀಡಲು ಸುತ್ತೋಲೆ ಹೊರಡಿಸಿದೆ. ಆದರೆ, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲಿರುವ ಅಡ್ಡಿ ಏನು? ಎಲ್ಲಾ ಸಮಾಜಗಳ ಮೀಸಲಾತಿ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ ನಮ್ಮ ಸಮುದಾಯದ ದಶಕಗಳ ಕೂಗಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.