ಐಟಿ ಕೇಸ್‌ ಎಫ್‌ಐಆರ್‌ ಎಸ್‌ಐ ಹಾಕಿದರೆ ತಪ್ಪಲ್ಲ: ಹೈಕೋರ್ಟ್‌

By Kannadaprabha NewsFirst Published Jul 23, 2023, 12:30 AM IST
Highlights

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಇ) ಪ್ರಕಾರ ವ್ಯಕ್ತಿಯ ಖಾಸಗಿ ಭಾಗವನ್ನು ಸೆರೆಹಿಡಿಯುವುದು ಪ್ರಕಟಿಸುವುದು ಖಾಸಗಿತನದ ಉಲ್ಲಂಘನೆ. ಸೆಕ್ಷನ್‌ 78ರ ಪ್ರಕಾರ ಇಂತಹ ಅಪರಾಧ ಕೃತ್ಯ ಸಂಬಂಧ ಪೊಲೀಸ್‌ ಇನ್ಸ್‌ಪೆಕ್ಟರ್‌ಗಿಂತ ಕಡಿಮೆ ಶ್ರೇಣಿಯ ಅಧಿಕಾರಿ ತನಿಖೆ ನಡೆಸುವಂತಿಲ್ಲ. ಆದರೆ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಿಂತ ಕಡಿಮೆ ಶ್ರೇಣಿಯ ಅಧಿಕಾರಿ ಎಫ್‌ಐಆರ್‌ ದಾಖಲಿಸಲು ಯಾವುದೇ ನಿರ್ಬಂಧವಿಲ್ಲ: ಕರ್ನಾಟಕ ಹೈಕೋರ್ಟ್‌

ಬೆಂಗಳೂರು(ಜು.23):  ಮಹಿಳೆ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಮತ್ತು ಅಸಭ್ಯ ಪೋಸ್ಟ್‌ ಮಾಡಿದ ಆರೋಪದಲ್ಲಿ ಮಾಹಿತಿ ತಂತ್ರಜ್ಞಾನದ ಕಾಯ್ದೆಯಡಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂಬ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಪ್ರಕರಣ ರದ್ದತಿಗೆ ಕೋರಿ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಅಶ್ಲೀಲ ಪೋಸ್ಟ್‌ ಪ್ರಕರಣದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ದೂರು ದಾಖಲಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ, ಪೊಲೀಸ್‌ ಇನ್ಸ್‌ಪೆಕ್ಟರ್‌ ಶ್ರೇಣಿಯ ಅಧಿಕಾರಿಯೇ ತನಿಖೆ ನಡೆಸಬೇಕು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ವಿದ್ಯಾರ್ಥಿ ವಿರುದ್ಧದ ತನಿಖೆಗೆ ಹಸಿರು ನಿಶಾನೆ ತೋರಿದೆ.

ಯುವ ಬ್ರಿಗೇಡ್‌ಗೆ ಗುಡ್‌ ನ್ಯೂಸ್‌: ಟಿ.ನರಸೀಪುರ ವೇಣುಗೋಪಾಲ್‌ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್‌ ಅನುಮತಿ

ಈ ಕುರಿತಂತೆ ತನ್ನ ವಿರುದ್ಧ ಬೆಳಗಾವಿ ನಗರದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ವಿದ್ಯಾರ್ಥಿ ನೆಹ ರಫೀಕ್‌ ಚಚಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್‌ 66(ಇ) ಪ್ರಕಾರ ಯಾವುದೇ ಪುರುಷ ಅಥವಾ ಮಹಿಳೆಯ ಖಾಸಗಿ ಭಾಗವನ್ನು ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಸೆರೆಹಿಡಿಯುವುದು, ಪ್ರಕಟಿಸುವುದು ಮತ್ತು ವಿದ್ಯುನ್ಮಾನವಾಗಿ ರವಾನಿಸಿಸುವುದು ಗೌಪ್ಯತೆಯ (ಖಾಸಗಿತನ) ಉಲ್ಲಂಘನೆಯಾಗಲಿದೆ. ಸೆಕ್ಷನ್‌ 78ರ ಪ್ರಕಾರ ಇಂತಹ ಅಪರಾಧ ಕೃತ್ಯ ಸಂಬಂಧ ಪೊಲೀಸ್‌ ಇನ್ಸ್‌ಪೆಕ್ಟರ್‌ಗಿಂತ ಕಡಿಮೆ ಶ್ರೇಣಿಯ ಅಧಿಕಾರಿ ತನಿಖೆ ನಡೆಸುವಂತಿಲ್ಲ. ಆದರೆ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಿಂತ ಕಡಿಮೆ ಶ್ರೇಣಿಯ ಅಧಿಕಾರಿ ಪ್ರಕರಣ (ಎಫ್‌ಐಆರ್‌) ದಾಖಲಿಸಲು ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಲಭ್ಯವಿರುವ ದಾಖಲೆಗಳಿಂದ ಪ್ರಕರಣದಲ್ಲಿ ದೂರುದಾರೆ ಮಹಿಳೆ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು, ನಕಲಿ ಮತ್ತು ಅಶ್ಲೀಲತೆ ಒಳಗೊಂಡ ಅಂಶವನ್ನು ಪೋಸ್ಟ್‌ ಮಾಡಿರುವುದು ಸ್ಪಷ್ಟವಾಗುತ್ತದೆ. ಅರ್ಜಿದಾರನೇ ನಕಲಿ ಖಾತೆ ತೆರೆದು ಪೋಸ್ಟ್‌ ಹಾಕಿದ್ದಾನೆ ಎಂಬುದು ದೂರುದಾರೆಯ ಆರೋಪ. ಹಾಗಾಗಿ, ಘಟನೆಯ ಸತ್ಯಾಸತ್ಯ ಪತ್ತೆ ಹಚ್ಚುವುದು ಅತ್ಯಗತ್ಯ. ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್‌ 66(ಇ) ಪ್ರಕಾರ ಕೃತ್ಯ ಗಂಭೀರ ಸ್ವರೂಪದ್ದಾಗಿದ್ದು, ಆರೋಪ ಸಾಬೀತಾದರೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ, ಇಲ್ಲವೇ ಎರಡೂ ವಿಧಿಸಲು ಅವಕಾಶವಿದೆ. ಆದ್ದರಿಂದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಪ್ರಕರಣದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಎಫ್‌ಐಆರ್‌ ದಾಖಲಿಸಿದ್ದರೂ, ಹೈಕೋರ್ಟ್‌ ಈ ಹಿಂದೆ ತಡೆಯಾಜ್ಞೆ ನೀಡಿದ್ದರಿಂದ ಸದ್ಯ ತನಿಖೆ ಸ್ಥಗಿತಗೊಂಡಿದೆ ಎಂದ ಹೈಕೋರ್ಟ್‌, ತಡೆಯಾಜ್ಞೆಯನ್ನು ತೆರವುಗೊಳಿಸಿತು. ಜತೆಗೆ, ಸಿಇಎನ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ತನಿಖೆ ನಡೆಸಬೇಕು ಎಂದು ಸೂಚಿಸಿದೆ.

ಪ್ರಕರಣದ ವಿವರ:

ತನ್ನ ಹೆಸರಿನಲ್ಲಿ ರಫೀಕ್‌ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಅಶ್ಲೀಲ ಮತ್ತು ಅಸಭ್ಯಕರವಾದ ಪೋಸ್ಟ್‌ ಪ್ರಕಟಿಸಿದ್ದು, ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ದೂರುದಾರ ಮಹಿಳೆ ಬೆಳಗಾವಿ ನಗರ ಸಿಇಎನ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಇ) ಅಡಿಯಲ್ಲಿ 2019ರ ಅ.2ರಂದು ಎಫ್‌ಐಆರ್‌ ದಾಖಲಿಸಿ, ತನಿಖೆ ಕೈಗೊಂಡಿದ್ದರು. ಈ ಪ್ರಕರಣದ ತನಿಖೆ ರದ್ದು ಕೋರಿ 2019ರ ನವೆಂಬರ್‌ನಲ್ಲಿ ರಫೀಕ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಕಳೆದು ಹೋದ ಪಾಸ್‌ಪೋರ್ಟ್‌ ಮತ್ತೆ ಪಡೆಯಲು ಎಫ್‌ಐಆರ್‌ ಕಾಪಿ ಕಡ್ಡಾಯ: ಹೈಕೋರ್ಟ್‌

ಅರ್ಜಿಯನ್ನು 2022ರ ಏ.1ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತನಿಖೆಗೆ ತಡೆಯಾಜ್ಞೆ ನೀಡಿತ್ತು. ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಅರ್ಜಿದಾರ ಪರ ವಕೀಲರು, ರಫೀಕ್‌ ಮೇಲಿನ ಆರೋಪವು ಗಂಭೀರ ಸ್ವರೂಪದಿಂದ (ಕಾಗ್ನಿಜಬಲ್‌) ಕೂಡಿಲ್ಲ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿಸಿ)ಯ ಸೆಕ್ಷನ್‌ 155(2) ಪ್ರಕಾರ ಇಂತಹ ಅಪರಾಧದ ಸಂಬಂಧ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಆದೇಶವಿಲ್ಲದೆ ತನಿಖೆ ನಡೆಸುವಂತಿಲ್ಲ. ಆದರೆ, ಪೊಲೀಸರು ಮ್ಯಾಜಿಸ್ಪ್ರೇಟ್‌ ಕೋರ್ಚ್‌ ಆದೇಶವಿಲ್ಲದೆ ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಮೇಲಾಗಿ, ಪ್ರಕರಣ ಸಂಬಂಧ ಕಾಯ್ದೆಯ ಸೆಕ್ಷನ್‌ 78 ಪ್ರಕಾರ ಎಫ್‌ಐಆರ್‌ ದಾಖಲಿಸಬೇಕಿರುವುದು ಪೊಲೀಸ್‌ ಇನ್ಸ್‌ಪೆಕ್ಟರ್‌ ಮಾತ್ರ. ಇಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಎಫ್‌ಐಆರ್‌ ದಾಖಲಿಸಿ, ತನಿಖೆಗೆ ಕೈಗೊಂಡಿದ್ದಾರೆ. ಅವರಿಗೆ ತನಿಖೆ ನಡೆಸಲು ಅಧಿಕಾರ ಇಲ್ಲವಾಗಿದ್ದು, ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿದ್ದರು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಇ) ಪ್ರಕಾರ ವ್ಯಕ್ತಿಯ ಖಾಸಗಿ ಭಾಗವನ್ನು ಸೆರೆಹಿಡಿಯುವುದು ಪ್ರಕಟಿಸುವುದು ಖಾಸಗಿತನದ ಉಲ್ಲಂಘನೆ. ಸೆಕ್ಷನ್‌ 78ರ ಪ್ರಕಾರ ಇಂತಹ ಅಪರಾಧ ಕೃತ್ಯ ಸಂಬಂಧ ಪೊಲೀಸ್‌ ಇನ್ಸ್‌ಪೆಕ್ಟರ್‌ಗಿಂತ ಕಡಿಮೆ ಶ್ರೇಣಿಯ ಅಧಿಕಾರಿ ತನಿಖೆ ನಡೆಸುವಂತಿಲ್ಲ. ಆದರೆ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಿಂತ ಕಡಿಮೆ ಶ್ರೇಣಿಯ ಅಧಿಕಾರಿ ಎಫ್‌ಐಆರ್‌ ದಾಖಲಿಸಲು ಯಾವುದೇ ನಿರ್ಬಂಧವಿಲ್ಲ: ಕರ್ನಾಟಕ ಹೈಕೋರ್ಟ್‌

click me!