ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಹಣ ಕೇಳಿದ ಮೂವರ ಪರವಾನಗಿ ಅಮಾನತು

By Sathish Kumar KH  |  First Published Jul 22, 2023, 10:15 PM IST

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ವಸೂಲಿ ಮಾಡುತ್ತಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಮೂವರು ಗ್ರಾಮಒನ್ ಕೇಂದ್ರದ ಸಿಬ್ಬಂದಿಯ ಪರವಾನಗಿ ರದ್ದುಗೊಳಿಸಲಾಗಿದೆ. 


ಬಾಗಲಕೋಟೆ/ಕೊಡಗು/ವಿಜಯಪುರ (ಜು.22): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಜಾರಿಗೆ ತರಲಾಗಿರುವ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ (ಮನೆ ಯಜಮಾನಿಗೆ ಮಾಸಿಕ 2000 ರೂ. ಹಣ) ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಮುಖ್ಯವಾಗಿ ಅರ್ಜಿ ಸಲ್ಲಿಸಲು ಹಣ ಪಡೆಯಬಾರದು ಎಂಬ ನಿಯಮವಿದ್ದರೂ, ರಾಜ್ಯದ ವಿವಿಧೆಡೆ ಹಣ ವಸೂಲಿ ಮಾಡಿದ ಸೇವಾಕೇಂದ್ರದ ಸಿಬ್ಬಂದಿಯ ಸರ್ಕಾರಿ ಲಾಗಿನ್‌ ಸಂಖ್ಯೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ "ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್‌ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಗೆ ( (Gruha Lakshmi)ಅರ್ಜಿ ಹಾಕಲು ಹಣ ವಸೂಲಿ ಮಾಡಿರುವ ವಿಚಾರ ತಿಳಿದುಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮ ಒನ್‌ ಕೇಂದ್ರ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ. ಮುಂದುವರೆದು, ಸರ್ಕಾರದ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮ ಸಹಿಸಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲೂ ಹಿಂಜರಿಯಲ್ಲ ಎಂಬ ಎಚ್ಚರಿಕೆಯನ್ನೂ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ. 

Tap to resize

Latest Videos

undefined

ರೇಷನ್‌ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಇನ್ನು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆದ ಹಿನ್ನೆಲೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಗ್ರಾಮ ಒನ್ ಸಿಬ್ಬಂದಿ ದಾನಯ್ಯ ಮಠಪತಿ ಅವರ ಲಾಗಿನ್ ಐಡಿ ರದ್ದುಗೊಳಿಸಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬಾಗಲಕೋಟೆ (Bagalkot) ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ. ಜೊತೆಗೆ, ಇದೇ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಸಿದ್ದಪ್ಪ ಪೂಜಾರಿ ಕೂಡ ಹಣ ಕೇಳಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಐಡಿಯನ್ನೂ ರದ್ದುಗೊಳಿಸಲಾಗಿದೆ. ಅರ್ಜಿ ಹಾಕಿದ ನಂತರ ಹಣ ಕೇಳಿದ್ದಕ್ಕೆ ಸಿದ್ದಪ್ಪ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧಾರಿಸಿ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಐಡಿ ರದ್ದುಗೊಳಿಸಲಾಗಿದೆ. 

ಮಡಿಕೇರಿಯಲ್ಲಿಯೂ ಗ್ರಾಮ ಒನ್ ಕೇಂದ್ರದ ಐಡಿ ರದ್ದು:  ಕೊಡಗು: ಮತ್ತೊಂದೆಡೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸುವ 3ನೇ ದಿನವಾದ ಶನಿವಾರ ಹಣ ವಸೂಲಿ ಮಾಡಿದ ಆರೋಪ ಸಂಬಂಧ ಕೊಡಗು ಜಿಲ್ಲೆಯ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು  ಪೊನ್ನಂಪೇಟೆ ಗ್ರಾಮ ಒನ್ ಕೇಂದ್ರದ ಪರವಾನಗಿ ಅಮಾನತು ಮಾಡಿ ಆದೇಶಿಸಿದ್ದಾರೆ. ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ವ್ಯಕ್ತಿಯೊಬ್ಬರಿಂದ 100 ರೂ. ಪಡೆದಿದ್ದರು. ಜೊತೆಗೆ, ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರಲಾರಂಭಿಸಿದ ಹಿನ್ನೆಲೆ ಕೇಂದ್ರದ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?

ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಬುದ್ಧಿವಾದ: ವಿಜಯಪುರ: ವಿಜಯಪುರ ಜಿಲ್ಲೆಯಲ್ಲೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ವಸೂಲಿ ಆರೋಪ ಕೇಳಿಬಂದಿದೆ. ಬಬಲೇಶ್ವರ ತಾಲೂಕಿನ ಶಿಬರೂರು ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವಾಗ 50 ರಿಂದ 100 ರೂಪಾಯಿ ವಸೂಲಿ‌ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಶ್ರೀಪತಿ ಹಾಗೂ ಇತರರು ಹಣ ವಸೂಲಿ ಮಾಡುತ್ತಿರುವ ‌ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹಣ ವಸೂಲಿ ಮಾಡುತ್ತಿದ್ದ ಸಿಬ್ಬಂದಿಯನ್ನು ತಡೆದ ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಜಮಾದಾರ ಹಾಗೂ ಸದಸ್ಯ ಭೀಮಪ್ಪ ಅವರು ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅರ್ಜಿ ಸಲ್ಲಿಸಲು ಹಣ ಪಡೆಯಬಾರದೆಂದು ಸ್ಥಳಿಯರು ಕೂಡ ಎಚ್ಚರಿಕೆ‌ ನೀಡಿದ್ದಾರೆ. ಆದರೆ, ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕು. 

click me!