ಕಿರುತೆರೆಯಲ್ಲಿ ಅನಿರುದ್ಧ್‌ಗೆ ನಿಷೇಧ ಇಲ್ಲ: ಜೊತೆಜೊತೆಯಲಿ ನಿರ್ಮಾಪಕರ ಜೊತೆ ಸಂಧಾನ ಯಶಸ್ವಿ

By Govindaraj SFirst Published Dec 11, 2022, 7:04 AM IST
Highlights

ನಟ ಅನಿರುದ್ಧ್‌ ಹಾಗೂ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್‌ ಅವರ ನಡುವೆ ಉಂಟಾಗಿದ್ದ ವಿವಾದ ಕೊನೆಗೂ ಸುಖಾಂತ್ಯ ಕಂಡಿದ್ದು, ಆ ಮೂಲಕ ನಾಲ್ಕು ತಿಂಗಳಿಂದ ಜೀವಂತವಾಗಿದ್ದ ವಿವಾದಕ್ಕೆ ತೆರೆ ಎಳೆಯಲಾಗಿದೆ.

ಬೆಂಗಳೂರು (ಡಿ.11): ನಟ ಅನಿರುದ್ಧ್‌ ಹಾಗೂ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್‌ ಅವರ ನಡುವೆ ಉಂಟಾಗಿದ್ದ ವಿವಾದ ಕೊನೆಗೂ ಸುಖಾಂತ್ಯ ಕಂಡಿದ್ದು, ಆ ಮೂಲಕ ನಾಲ್ಕು ತಿಂಗಳಿಂದ ಜೀವಂತವಾಗಿದ್ದ ವಿವಾದಕ್ಕೆ ತೆರೆ ಎಳೆಯಲಾಗಿದೆ. ಜೊತೆಗೆ ನಟ ಅನಿರುದ್ಧ ಕಿರುತೆರೆಯಲ್ಲಿ ನಟನೆಗೆ ಅಘೋಷಿತವಾಗಿದ್ದ ಜಾರಿಯಲ್ಲಿದ್ದ ‘ನಿಷೇಧ’ ತೆರವಾಗಿದೆ. ಶನಿವಾರ ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಆರೂರು ಜಗದೀಶ್‌ ಹಾಗೂ ಅನಿರುದ್ಧ್‌ ನಡುವೆ ರಾಜಿ ಪಂಚಾಯಿತಿ ನಡೆದು ವಿವಾದ ಬಗೆಹರಿಸಲಾಗಿದೆ.

ಸಭೆಯ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ಚಿತ್ರೀಕರಣ ಸಂದರ್ಭದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ ಬರುವುದು ಸಹಜ. ಈಗ ಅದೆಲ್ಲವನ್ನೂ ಮರೆತು ಜತೆಯಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ಆರೂರು ಜಗದೀಶ್‌ ಹಾಗೂ ಅನಿರುದ್ಧ್‌ ಇಬ್ಬರೂ ಒಪ್ಪಿದ್ದಾರೆ. ಯಾರನ್ನೂ ಬ್ಯಾನ್‌ ಮಾಡಬೇಕೆಂಬ ಪದ ಯಾರಿಂದಲೂ ಬಂದಿಲ್ಲ. ಇದು ನಮ್ಮ ಮನೆ ಸಮಸ್ಯೆ. ನಾವೇ ಬಗೆಹರಿಸಿಕೊಳ್ಳುತ್ತೇವೆ. ಇದು ಚಲನಚಿತ್ರಕ್ಕೆ ಸಂಬಂಧಪಟ್ಟಿಲ್ಲ ಎಂದರು. ಸಭೆಯಲ್ಲಿ ಕರ್ನಾಟಕ ಟೆಲಿವಿಷನ್‌ ಅಸೋಸಿಯೆಷನ್‌ ಅಧ್ಯಕ್ಷ ಶಿವಕುಮಾರ್‌, ಪ್ರಮುಖರಾದ ಲಿಂಗದೇವರು, ಭಾಸ್ಕರ್‌ ಎಸ್‌ ಎಸ್‌, ರವಿ ಗರಣಿ ಸೇರಿದಂತೆ ಹಲವರು ಹಾಜರಿದ್ದರು.

ಅನಿರುದ್ಧ್‌ ಬ್ಯಾನ್‌ಗೆ ಆಗ್ರಹ: ಇಂದು ಫಿಲಂ ಚೇಂಬರ್ ಸಭೆ

ಅನಿರುದ್ಧ್‌ ಪರ ಮಂಡಳಿ: ರಾಜಿ ಸಂಧಾನ ಸಭೆಗೂ ಮುನ್ನ ಮಾತನಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌ ‘ಒಬ್ಬ ಸಜ್ಜನ ಹಾಗೂ ಶಿಸ್ತಿನ ಕಲಾವಿದನ ಮೇಲೆ ಇಲ್ಲಸಲ್ಲದ ಆರೋಪ ಸರಿಯಲ್ಲ. ಬ್ಯಾನ್‌ ಮಾಡುವ ಅಧಿಕಾರ ಯಾರಿಗೂ ಇಲ್ಲ. ಬ್ಯಾನ್‌ ಎನ್ನುವುದೇ ಕಾನೂನು ಬಾಹಿರ. ಅನಿರುದ್ಧ್‌ಗೆ ನಮ್ಮ ಬೆಂಬಲವಿದೆ’ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿಯ ಪ್ರಮುಖರಾದ ಟಿ.ಪಿ.ಸಿದ್ದರಾಜು, ಎಸ್‌.ಎ.ಚಿನ್ನೇಗೌಡ, ನಂದನಕೇಳಿ ನಿತ್ಯಾನಂದ ಪ್ರಭು ಮುಂತಾದವರು ಹಾಜರಿದ್ದರು.

ನಾವೆಲ್ಲ ಒಂದೇ ಕುಟುಂಬದವರು. ಅಸಮಾಧಾನಗಳು ಬರುತ್ತವೆ. ಸಭೆಯಲ್ಲಿ ಆ ಎಲ್ಲದರ ಬಗ್ಗೆ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ. ಜೀ ಕನ್ನಡ ವಾಹಿನಿ ಹಾಗೂ ಆರೂರು ಜಗದೀಶ್‌ ಅವರಿಗೆ ಒಳ್ಳೆಯದಾಗಲಿ. ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನನ್ನ ಕೃತಜ್ಞತೆಗಳು.
- ಅನಿರುದ್ಧ್‌, ನಟ

ಎಸ್‌. ನಾರಾಯಣ್‌ ಜೊತೆ ಕೈ ಜೋಡಿಸಿ 'ಸೂರ್ಯವಂಶ'ಕ್ಕೆ ಎಂಟ್ರಿ ಕೊಟ್ಟ ಅನಿರುದ್ಧ್; ಸಿಂಹ ಘರ್ಜನೆ ಶುರು

ಶಿಸ್ತು ಕಲಿಸಬೇಕು ಎನ್ನುವ ಕಾರಣಕ್ಕೆ ನಾವು ಈ ರೀತಿ ಮಾಡಿದ್ದು. ಇದು ಬಿಟ್ಟು ಬೇರೆ ಉದ್ದೇಶ ಇಲ್ಲ. ಅನಿರುದ್ಧ್‌ ಅವರಿಗೂ ಒಳ್ಳೆಯದಾಗಬೇಕು. ನಾನು ಮತ್ತು ಅನಿರುದ್ಧ್‌ ಅವರು ಮತ್ತೆ ಜತೆಯಾಗಿ ಕೆಲಸ ಮಾಡುವ ಬಗ್ಗೆ ಮುಂದೆ ನೋಡೋಣ.
- ಆರೂರು ಜಗದೀಶ್‌, ನಿರ್ಮಾಪಕ

click me!