ದೇಗಲಗಳ ಸಲಾಂ ಆರತಿ ಹೆಸರು ಆರತಿ ನಮಸ್ಕಾರ ಎಂದು ಬದಲು: ಸಚಿವೆ ಶಶಿಕಲಾ ಜೊಲ್ಲೆ

By Kannadaprabha NewsFirst Published Dec 11, 2022, 3:00 AM IST
Highlights

ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿಲು ನಿರ್ಧರಿಸಲಾಯಿತು’ ಎಂದು ಸ್ಪಷ್ಟಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ 

ಬೆಂಗಳೂರು(ಡಿ.11):  ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ದೀವಟಿಗೆ ಸಲಾಂ, ಸಲಾಂ ಆರತಿ ಹಾಗೂ ಸಲಾಂ ಮಂಗಳಾರತಿ ಎಂಬ ಪೂಜೆಗಳ ಹೆಸರನ್ನು ಸ್ಥಳೀಯ ಕನ್ನಡ ಭಾಷೆಗೆ ಬದಲಾಯಿಸಲು ನಿರ್ಧರಿಸಲಾಗಿದೆ. ಬದಲಾಗಿ ಈ ಪೂಜೆಗಳು ರದ್ದುಪಡಿಸುವ ಯಾವುದೇ ಚಿಂತನೆ ಇಲ್ಲ ಎಂದು ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಕೊಲ್ಲೂರು, ಮೇಲುಕೋಟೆ, ಶೃಂಗೇರಿ, ಕುಕ್ಕೆ ಸುಬ್ರಮಣ್ಯ, ಪುತ್ತೂರು ಸೇರಿದಂತೆ ರಾಜ್ಯದ ಹಲವೆಡೆ ಶತಮಾನಗಳಿಂದ ನಡೆಸಿಕೊಂಡು ಬರಲಾಗಿದ್ದ ಸಲಾಂ ಹೆಸರಿನ ಪೂಜೆಗಳು ಟಿಪ್ಪು ಕಾಲದಲ್ಲಿ ಜಾರಿಯಾಗಿದ್ದು, ರಾಜ್ಯ ಸರ್ಕಾರದಿಂದ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು.

ಶೃಂಗೇರಿಯ ಟಿಪ್ಪು ಸಲಾಂ ಆರತಿಗೆ ಬ್ರೇಕ್‌? ಆರ್‌ ಆಶೋಕ್‌ ಸುಳಿವು

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವೆ, ‘ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತೃತ ಚರ್ಚೆಯನ್ನು ನಡೆಸಲಾಯಿತು. ಬೇರೆ ಭಾಷೆಯ ಪದಗಳನ್ನು ಬದಲಾಯಿಸಿ, ನಮ್ಮ ಭಾಷೆಯ ಪದವನ್ನು ಅಳವಡಿಸಿಲು ನಿರ್ಧರಿಸಲಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೀವಟಿಗೆ ಸಲಾಂ ಎಂಬ ಪದದ ಬದಲಾಗಿ ದೀವಟಿಗೆ ನಮಸ್ಕಾರ, ಸಲಾಂ ಆರತಿ ಎಂಬ ಪದದ ಬದಲಾಗಿ ಆರತಿ ನಮಸ್ಕಾರ, ಸಲಾಂ ಮಂಗಳಾರತಿ ಎಂಬ ಪದದ ಬದಲಾಗಿ ಮಂಗಳಾರತಿ ನಮಸ್ಕಾರ ಎಂದು ಹೆಸರನ್ನು ಬದಲಾಯಿಸಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು. ಪೂಜಾ ಕಾರ್ಯಗಳನ್ನು ರದ್ದುಪಡಿಸಿಲ್ಲ. ಎಂದಿನಂತೆ ಈ ಪೂಜಾ ಕಾರ್ಯಗಳು ಮುಂದುವರೆಯಲಿವೆ’ ಎಂದು ಮಾಹಿತಿ ನೀಡಿದ್ದಾರೆ.
 

click me!