
ಬೆಂಗಳೂರು(ಡಿ.11): ಕರ್ನಾಟಕ- ಮಹಾರಾಷ್ಟ್ರದ ನಡುವೆ ಗಡಿಯಲ್ಲಿ ಉಂಟಾಗಿರುವ ಬೆಳವಣಿಗೆ ಕುರಿತಂತೆ ಮಾಹಿತಿ ನೀಡಲು ರಾಜ್ಯದ ಸಂಸದರ ನಿಯೋಗ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಸಹ ಅಮಿತ್ ಶಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಈ ವೇಳೆ ರಾಜ್ಯದ ವಿಚಾರ, ನಿಲುವು, ವಾಸ್ತವಾಂಶವನ್ನು ತಿಳಿಸಿದ್ದೇನೆ. ಈ ವೇಳೆ ಹೇಳಿ ಕಳುಹಿಸಿದಾಗ ಸಭೆಗೆ ಬರಬೇಕಾಗಬಹುದು ಎಂದಿದ್ದಾರೆ. ಇದರ ಜೊತೆಗೆ ಸಂಸದರ ನಿಯೋಗ ಕೂಡ ಸೋಮವಾರ ನವದೆಹಲಿಯಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
Border Dispute: ಮಹಾರಾಷ್ಟ್ರದ ಅಪ್ಪಟ್ಟ ಮರಾಠಿ ಹಳ್ಳಿಗಳಿಗೂ ಕರ್ನಾಟಕ ಸೇರುವ ಒಲವು
ಅಮಿತ್ ಶಾ ಸಭೆ:
ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯೊಂದಿಗೆ ಡಿ.14 ಅಥವಾ 15ರಂದು ಸಭೆ ನಡೆಯಲಿದ್ದು, ನನ್ನನ್ನೂ ಸಹ ಸಭೆಗೆ ಆಹ್ವಾನಿಸಲಾಗಿದೆ. ಇದರ ಜೊತೆಗೆ ನಾನೂ ಸಹ ಖುದ್ದು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಈ ವೇಳೆ ಕರ್ನಾಟಕದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಸರ್ವಪಕ್ಷ ಸಭೆ:
ಈ ನಡುವೆ ಸರ್ವಪಕ್ಷದ ಸಭೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಚರ್ಚಿಸಲಾಗಿದೆ. ಸಭೆ ನಿಗದಿಯಾದ ಬಳಿಕ ಹೇಳಲಾಗುವುದು ಎಂದು ಸಿಎಂ ತಿಳಿಸಿದರು.
ರಾಜೀ ಇಲ್ಲ:
ಇನ್ನು, ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಹಿಂದೆಯೂ ಸಹ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ನಮ್ಮ ನ್ಯಾಯ ಸಮ್ಮತ ವಿಚಾರ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಎಂಇಎಸ್ ಕಾರ್ಯಕರ್ತರೇ ಪುಂಡಾಡಿಕೆ ನಿಲ್ಲಿಸಿ: ಲಕ್ಷ್ಮಣ ಸವದಿ
ಕೊಲ್ಹಾಪುರದಲ್ಲಿ ಮಹಾರಾಷ್ಟ್ರ ಸರ್ಕಾರ ವಿರುದ್ಧ ಪ್ರತಿಭಟನೆ
ಬೆಳಗಾವಿ: ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಮಹಾರಾಷ್ಟ್ರದ ಹೋರಾಟಗಾರರು ಶನಿವಾರ ಕೊಲ್ಹಾಪುರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿಯಲಿ: ಉದ್ಧವ್
ಜಾಲ್ನಾ (ಮಹಾರಾಷ್ಟ್ರ): ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಹಾರಾಷ್ಟ್ರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರು ಬೆಳಗಾವಿ ಗಡಿ ವಿವಾದದ ಕುರಿತು ಮೌನ ಮುರಿಯಬೇಕು. ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ