
ಬೆಂಗಳೂರು(ಜೂ.06): ಪಠ್ಯ ಪರಿಷ್ಕರಣೆ ವಿವಾದ ಮುಗಿಯದ ಅಧ್ಯಾಯವಾದಂತಿದೆ. ಇದೀಗ ಕನ್ನಡ ರಾಜ್ಯೋತ್ಸವದ ಕುರಿತು ಆರನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ತಾಯಿ ಭುವನೇಶ್ವರಿಯ ‘ಮೆರವಣಿಗೆ’ ಕುರಿತ ಪಾಠವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿರುವ ಆರೋಪ ಕೇಳಿ ಬಂದಿದೆ.
6ನೇ ತರಗತಿ ‘ಸಿರಿಗನ್ನಡ’ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಆರನೇ ಗದ್ಯವಾಗಿ ಮೆರವಣಿಗೆ ಪಾಠವಿತ್ತು. ಈ ಪಠ್ಯವನ್ನು ಹಿಂದಿನ ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ಭುವನೇಶ್ವರಿ ತಾಯಿಯ ಮೆರವಣಿಗೆಯನ್ನು ತಿಳಿಸುವ ಪಾಠ ಇದಾಗಿತ್ತು. ಆದರೆ, ಈ ಪಾಠವನ್ನು ಕೈಬಿಟ್ಟು ಬದಲಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಿಂದ ಪ್ರತಿ ವರ್ಷ ನಡೆಯುವ ‘ಸಿದ್ಧಾರೂಢ ಜಾತ್ರೆ’ ಪಾಠವನ್ನು ಸೇರಿಸಲಾಗಿದೆ ಎನ್ನಲಾಗುತ್ತಿದೆ.
ಭಾರತವು ನೂರಾರು ಮಠಮಾನ್ಯಗಳಿಂದ ತುಂಬಿರುವ ದೇಶ. ಇಲ್ಲಿ ಪ್ರತಿ ಧಾರ್ಮಿಕ ಸಂಸ್ಥೆಯೂ ತನ್ನ ಆಚರಣೆ, ಸಂಪ್ರದಾಯ, ಸಮಾಜಸೇವೆ ಇತ್ಯಾದಿ ಕೆಲಸಗಳಿಂದ ವಿಶಿಷ್ಟವಾಗಿ ನಿಲ್ಲುತ್ತದೆ.... ಹೀಗೆ ಹೊಸ ಪಾಠ ಆರಂಭವಾಗಿ ಆರಂಭವಾಗುತ್ತದೆ. ರುಸ್ತುಂ ಎಂಬ ಹುಡುಗ ಸಿದ್ಧಾರೂಢರ ಕುರಿತು ಹೇಳುತ್ತಾನೆ. ನಂತರ ಹಸೀನಾ ಎಂಬ ಹುಡುಗಿ ಕೂಡ ಮಠದ ಬಗ್ಗೆ ಮಾಹಿತಿ ಕೇಳುತ್ತಾಳೆ. ಗುರುಗಳು ವಿವರಿಸುತ್ತಾ ಹೋಗುವ ಪಾಠ ಇದಾಗಿದೆ.
ಸಿದ್ಧಾರೂಢರ ಜಾತ್ರೆಯನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ, ರಾಜ್ಯೋತ್ಸವ ಪಾಠವನ್ನು ತೆಗೆಯುವ ಬದಲು ಅದನ್ನು ಹಾಗೇ ಉಳಿಸಿಕೊಂಡು ಜಾತ್ರೆಯ ಪಾಠವನ್ನು ಬೇರೆಡೆ ಸೇರಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದಲ್ಲದೇ ಹೊಸದಾಗಿ ಸೇರಿಸಿರುವ ಸಿದ್ಧಾರೂಢ ಜಾತ್ರೆಯ ಪಾಠದಲ್ಲಿ ತೇರಿನ ಮುಂದೆ ಕೇಸರಿ ಬಾವುಟ ಹಾರಾಡುತ್ತಿರುವ ಚಿತ್ರವನ್ನು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ