ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆದ ಪ್ರಸಂಗ ನಡೆದಿದ್ದು, ಇದರಿಂದ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ (ಅ.22) : ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆದ ಪ್ರಸಂಗ ನಡೆದಿದ್ದು, ಇದರಿಂದ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಡೆದ ಪಾಲಿಕೆ ಸಾಮಾನ್ಯಸಭೆಯಲ್ಲಿ ತೆರಿಗೆ ಪರಿಷ್ಕರಣೆ ಠರಾವನ್ನು ತಿರುಚಿ, ಸರ್ಕಾರಕ್ಕೆ ವರದಿ ಕಳಿಸಿದ ಪ್ರಕರಣದ ಕುರಿತು ಸಿಒಡಿ ಇಲ್ಲವೇ ಸಿಐಡಿ ತನಿಖೆಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಶಾಸಕ ಆಸೀಫ್ ಸೇಠ್ ಅವರು, 138 ಪೌರ ಕಾರ್ಮಿಕ ನೇಮಕಾತಿ ವಿಷಯವನ್ನು ಪ್ರಸ್ತಾಪಿಸಿದರು. ಆದರೆ, ಮೇಯರ್ ಶೋಭಾ ಸೋಮನಾಚೆ ಅವರು ಸಭೆಯನ್ನು ಮುಂದೂಡಿದರು. ಈ ವೇಳೆ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಕೆಲವರು ಕುಳಿತುಕೊಂಡಿದ್ದರು. ನಂತರ ರಾಷ್ಟ್ರಗೀತೆಯನ್ನು ಕೇಳಿ ಎಲ್ಲರೂ ಎದ್ದು ನಿಂತರು. ಆಡಳಿತಾರೂಢ ಬಿಜೆಪಿ ಸದಸ್ಯರು ರಾಷ್ಟ್ರಗೀತೆ ಬಳಿಕ ಸಭೆಯಿಂದ ಹೊರನಡೆದರು.
ಸಿಎಂ, ಡಿಸಿಎಂಗೆ..ಟೆನ್ಷನ್ ಮೇಲೆ ಟೆನ್ಷನ್..! ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಸವಾಲುಗಳು..!
ಶಾಸಕ ಆಸೀಫ್ ಸೇಠ್ ಪೌರ ಕಾರ್ಮಿಕರ ನೇಮಕ ವಿಷಯ ಪ್ರಸ್ತಾವದ ನಡುವೆಯೇ ಅದು ಹೇಗೆ ರಾಷ್ಟ್ರಗೀತೆ ನುಡಿಸಿದೀರಿ? ನೀವು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದೀರಿ. ನಿಮಗೆ ರಾಷ್ಟ್ರಗೀತೆ ನುಡಿಸುವಂತೆ ಹೇಳಿದವರ್ಯಾರು ಎಂದು ವಿರೋಧಪಕ್ಷ ಕಾಂಗ್ರೆಸ್ ಸದಸ್ಯರು ಏರುಧ್ವನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಲ್ಲದೇ, ರಾಷ್ಟ್ರಗೀತೆ ನುಡಿಸಿದ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಷ್ಟ್ರಗೀತೆಗೆ ಹೀಗೆ ಅವಮಾನ ಮಾಡುವುದು ಸರಿಯಲ್ಲ. ತಪ್ಪಿತಸ್ಥ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಪಟ್ಟು ಹಿಡಿದರು. ಬಳಿಕ ಸಚಿವ ಸತೀಶ ಜಾರಕಿಹೊಳಿ ಅವರೇ ಎಲ್ಲರನ್ನೂ ಸಮಾಧಾನಗೊಳಿಸಿದರು.
ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆಯಾ? ಬಿವೈ ವಿಜಯೇಂದ್ರ ಏನು ಹೇಳಿದ್ರು?
ಪಾಲಿಕೆ ಸಾಮಾನ್ಯಸಭೆಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆಗಿರುವ ಘಟನೆ ಸಂಬಂಧ ವಿಚಾರಣೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತರು.