
ಬೆಂಗಳೂರು(ಅ.22): ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದರೂ ರಾಜ್ಯ ಸರ್ಕಾರ ಕೃತಕ ವಿದ್ಯುತ್ ಅಭಾವ ಸೃಷ್ಟಿಸುವ ಮೂಲಕ ದುಬಾರಿ ದರದಲ್ಲಿ ಖಾಸಗಿಯಿಂದ ವಿದ್ಯುತ್ ಖರೀದಿಸಿ ಕಮಿಷನ್ ಪಡೆಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮರ್ಪಕವಾಗಿ ವಿದ್ಯುತ್ ಉತ್ಪಾದಿಸಿದರೆ ಉಳಿತಾಯವಾಗುವಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಆದರೆ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರ ಕಾಲಹರಣ ಮಾಡಿದೆ. ಮಳೆ ಅಭಾವದಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಹೇಳಿ ವಿದ್ಯುತ್ ಖರೀದಿ ಮಾಡಲು ಮುಂದಾಗುತ್ತಿದೆ. ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ ಮತ್ತು ಸುರ್ಜೇವಾಲಾಗೆ ಕಮಿಷನ್ ಕಳಿಸಲು ಕೃತಕ ಅಭಾವ ಸೃಷ್ಟಿ ಮಾಡಿ ವಿದ್ಯುತ್ ಖರೀದಿ ಹೆಸರಿನಲ್ಲಿ ಕಮಿಷನ್ ಕಬಳಿಸಲು ಮುಂದಾಗಿದೆ ಎಂದು ಟೀಕಿಸಿದರು.
ಡಿಕೆ ಸಾಹೇಬರಿಗೆ ಏನಾದರೂ ಆದ್ರೆ ನಾವು ಸುಮ್ನಿರಲ್ಲ; ಪ್ರಾಣ ಕೊಡಲು ಸಿದ್ಧ: ಪ್ರದೀಪ್ ಈಶ್ವರ್ ಎಚ್ಚರಿಕೆ
ಕಾಂಗ್ರೆಸ್ ಸರ್ಕಾರಕ್ಕೆ ಹಣ ಮಾಡುವ ಒಂದೇ ಉದ್ದೇಶ ಇದೆ. ಹೈಕಮಾಂಡ್ ಮುಂದೆ ನುಡಿದಂತೆ ಕಲೆಕ್ಷನ್ ಮಾಡಲಾಗುತ್ತಿದೆ. ಸಮರ್ಥವಾಗಿ ದುಡ್ಡು ಹೊಡೆಯುವ ಕಾರ್ಯಕ್ರಮಗಳನ್ನಷ್ಟೇ ಕಾಂಗ್ರೆಸ್ಸಿನವರು ಹಾಕಿಕೊಳ್ಳುತ್ತಿದ್ದಾರೆ. ಅದೇ ಮುತುವರ್ಜಿಯನ್ನು ಜನರ ಬಗ್ಗೆ ತೋರಿಸಿದ್ದರೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದಿತ್ತು. ಸದ್ಯದ ಪರಿಸ್ಥಿತಿಯಲ್ಲಿ 16867.63 ಮೆಗಾವ್ಯಾಟ್ ವಿದ್ಯುತ್ ಅನ್ನು ಇವತ್ತೂ ಉತ್ಪಾದನೆ ಮಾಡಬಹುದು. ಬರಗಾಲದ ನಡುವೆಯೂ ಉತ್ಪಾದನೆ ಮಾಡಲು ಸಮಸ್ಯೆ ಇಲ್ಲ. ಆದರೆ ವಿದ್ಯುತ್ ಕ್ಷಾಮ ಸೃಷ್ಟಿಸಿ ಕಮಿಷನ್ ಮಾಡುವ ದುರುದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3906.6 ಮೆ.ವ್ಯಾ. ಜಲ ವಿದ್ಯುತ್, 5020 ಮೆ.ವ್ಯಾ. ಉಷ್ಣ ವಿದ್ಯುತ್, 2050 ಮೆ.ವ್ಯಾ. ಖಾಸಗಿ ಕಂಪನಿಗಳ ವಿದ್ಯುತ್ ಸೇರಿದಂತೆ ಒಟ್ಟು 9947 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ರಾಜ್ಯಕ್ಕಿದೆ. ಆದರೂ, ಸರ್ಕಾರ ಕೃತಕ ಅಭಾವ ಸೃಷ್ಟಿಸುತ್ತಿದೆ. ಸಚಿವ ಜಾರ್ಜ್ ಅವರಿಗೆ ಹಣದ ಕೊರತೆ ಇಲ್ಲ. ಬಹುಶಃ ಹೈಕಮಾಂಡ್ ಇವರಿಂದ ಕಮೀಷನ್ ಸಂಗ್ರಹಕ್ಕೆ ಒತ್ತಡ ಹೇರುತ್ತಿರಬೇಕು ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸಿ ರಾಜ್ಯದಲ್ಲಿ 15 ಸಾವಿರ ಮೆಗಾವ್ಯಾಟ್ ಕೊರತೆ ಇದ್ದು, ಖರೀದಿ ಮಾಡ್ತೀವಿ ಎಂದಿದ್ದಾರೆ. ಐದು ತಿಂಗಳಿಂದ ಸುಮ್ಮನೆ ಇದ್ದವರು ಈಗ ಹಿಂದಿನ ಸರ್ಕಾರದ ಪಾಪದ ಫಲ ಎಂದು ಹೇಳುತ್ತಿದ್ದಾರೆ. ಅವರ ಪುಣ್ಯದ ಫಲವನ್ನು ಜನತೆಗೆ ಕೊಡಬೇಕಲ್ಲವೇ ಎಂದು ವ್ಯಂಗ್ಯವಾಡಿದರು.
100% ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತಾ ಪ್ರೂವ್ ಆಗೋಯ್ತು; ದೇವೇಗೌಡರ ವಿರುದ್ಧ ಇಬ್ರಾಹಿಂ ಕಿಡಿ
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಇತರರು ಉಪಸ್ಥಿತರಿದ್ದರು.
ಅದೇನು ಬಿಚ್ಚಿಡ್ತಾರೋ ಬಿಚ್ಚಿಡಲಿ: ಡಿಕೆಶಿಗೆ ಟಾಂಗ್
ನಾನು ಮಾಹಿತಿ ಇಲ್ಲದೆ ಯಾವ ವಿಚಾರವನ್ನೂ ಚರ್ಚೆ ಮಾಡುವುದಿಲ್ಲ. ಮಾತೆತ್ತಿದರೆ ಬಿಚ್ಚಿಡ್ತೀನಿ ಅಂತಾರಲ್ಲ, ಅದೇನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅವರೇನು ಬಿಚ್ಚಿಟ್ಟರೂ ನನ್ನ ತಕರಾರು ಇಲ್ಲ. ಅವರು ಬಂಧೀಖಾನೆ ಸಚಿವರಾಗಿ ಭವಿಷ್ಯ ಆರಂಭ ಮಾಡಿದ್ದರು. ಎಷ್ಟಾದರೂ ಅವರು ಅಲ್ಲಿಂದಲೇ ಬಂದವರಲ್ಲವೇ? ಬಿಚ್ಚಿಡಲಿ ಬೇಗ. ಅದಕ್ಕೂ ಮೊದಲೇ ಅವರಿಗೆ ಬೇರೆ ಏನಾದರೂ ಆದರೆ ಕಷ್ಟ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ