ಕನ್ನಡಿಗನ ಮೇಲೆ ಹಲ್ಲೆಗೆ ವಾಯುಪಡೆ ವಿಷಾದ! ವಿಂಗ್ ಕಮಾಂಡರ್‌ ಕೆಲಸ ಕುತ್ತು?

Published : Apr 22, 2025, 05:09 PM ISTUpdated : Apr 22, 2025, 05:25 PM IST
ಕನ್ನಡಿಗನ ಮೇಲೆ ಹಲ್ಲೆಗೆ ವಾಯುಪಡೆ ವಿಷಾದ! ವಿಂಗ್ ಕಮಾಂಡರ್‌ ಕೆಲಸ ಕುತ್ತು?

ಸಾರಾಂಶ

ಬೆಂಗಳೂರಿನಲ್ಲಿ ವಾಹನ ಹಿಂದಿಕ್ಕುವ ವಿಚಾರದಲ್ಲಿ ವಾಯುಪಡೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಬೋಸ್‌ರ ಹಲ್ಲೆಯನ್ನು ದೃಢಪಡಿಸಿವೆ. ವಾಯುಪಡೆ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದೆ. ಸಿಎಂ ಸಿದ್ದರಾಮಯ್ಯ ಘಟನೆ ಖಂಡಿಸಿ, ಕಾನೂನು ಕ್ರಮಕ್ಕೆ ಆದೇಶಿಸಿದ್ದಾರೆ. ಬೋಸ್‌ ಮೇಲೆ ಹಲ್ಲೆ, ಸುಳ್ಳು ದೂರು ಹಾಗೂ ಸಾಮಾಜಿಕ ಜಾಲತಾಣ ನಿಯಮ ಉಲ್ಲಂಘನೆ ಆರೋಪಗಳಿವೆ.

ಬೆಂಗಳೂರು (ಏ.22): ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ಭಾರತೀಯ ವಾಯು ದಳದ ವಿಂಗ್ ಕುಮಾಂಡರ್ ಹಾಗೂ ಬೈಕ್ ಸವಾರ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಘಟನೆಗೆ ಭಾರತೀಯ ವಾಯುಪಡೆ ಕ್ಷಮೆಯಾಚಿಸಿದೆ. ಬೆಂಗಳೂರಿನಲ್ಲಿ ನಡೆದ ಘಟನೆಯ ಕುರಿತು IAF ಹೇಳಿಕೆ ನೀಡಿದ್ದು,"ನಿನ್ನೆ ಬೆಂಗಳೂರಿನಲ್ಲಿ IAF ಅಧಿಕಾರಿಯೊಬ್ಬರು ಭಾಗಿಯಾಗಿರುವ  ಘಟನೆ ಸಂಭವಿಸಿದ್ದು ದುರದೃಷ್ಟಕರ. ಪ್ರಕರಣವನ್ನು ತನಿಖೆ ಮಾಡಲು ಮತ್ತು ಕಾನೂನುಬದ್ಧವಾಗಿ ಪರಿಹರಿಸಲು IAF ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದೆ" ಎಂದಿದೆ.

ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್   ಖಾಸಗಿ ಕಂಪನಿ ಉದ್ಯೋಗಿ ವಿಕಾಸ್ ಕುಮಾರ್‌ ಎಂಬವರ ಮೇಲೆ ಹಿಗ್ಗಾಮುಗ್ಗಾ ಥಳಿಸಿ ಸ್ವತಃ ತಾನೇ ವಿಡಿಯೋ ಮಾಡಿ ಕನ್ನಡಿಗರಿಂದ ತನ್ನ ಮೇಲೆ ಹಲ್ಲೆ ಎಂದು ಆರೋಪಿಸಿದ್ದ, ತಾವು ಬಹಳ ಮುಗ್ಧ ಎನ್ನುವಂತೆ ಬಿಂಬಿಸಿಕೊಂಡಿದ್ದ ವಿಂಗ್‌ ಕಮಾಂಡರ್ ಇದರ ಜೊತೆಗೆ ಕನ್ನಡ ಭಾಷೆಯನ್ನು ಎಳೆದು ತಂದಿದ್ದರು. ಆದರೆ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳು ಬೇರೆ ಕತೆಯನ್ನೇ ಹೇಳಿದ್ದವು. ಇದಾದ ಬಳಿಕ ತಪ್ಪು ವಿಗ್‌ ಕಮಾಂಡರ್‌ ನದ್ದೇ ಎಂಬುದು ಬಯಲಾಗಿ ಕನ್ನಡ ಪರ ಹೋರಾಟಗಾರರು ವಿಕಾಸ್ ಪರ ನಿಂತಿದ್ದವು. ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಖಂಡಿಸಿದ್ದರು. ವಿಕಾಸ್ ಕುಮಾರ್ ಮೇಲೆ ಹಲ್ಲೆ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ  ಸೂಕ್ತ ಕಾನೂನು ಕ್ರಮ ಜರುಗಿಸಲು ಪೋಲೀಸ್ ಕಮೀಷನರ್ ಗೆ ಆದೇಶ ನೀಡಿದ್ದಾರೆ.

ಕನ್ನಡಿಗನ ಮೇಲೆ ಹಲ್ಲೆ ಮಾಡಿದ ವಿಂಗ್ ಕಮಾಂಡರ್: ಕ್ರಮಕ್ಕೆ ಸಿಎಂ ಆದೇಶ

ವಿಂಗ್ ಕಮಾಂಡ್ ನೀಡಿದ ದೂರಿನ ಮೇರೆಗೆ ವಿಕಾಸ್ ವಿರುದ್ಧ ಎಫ್‌ಐಆರ್  ಮತ್ತು  ಅದೇ ರೀತಿ ವಿಕಾಸ್ ಅವರ ದೂರಿನ್ವಯ ಸಹ ಶಿಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಮಧುಮಿತಾ ದತ್ತು ದಂಪತಿ ಮೇಲೆ ಪ್ರಕರಣ ದಾಖಲಾಗಿದ್ದು, ಸ್ಟೇಷನ್ ಬೇಲ್ ಮೇಲೆ ವಿಕಾಸ್‌ ನನ್ನು ಮನೆಗೆ ಕಳುಹಿಸಲಾಗಿದ್ದು, ಮುಂದಿನ ವಿಚಾರಣೆಗೆ ಏ.24ರಂದು ಹಾಜರಾಗಲು ಹೇಳಲಾಗಿದೆ. ಇದಾದ ನಂತರ ವಿಕಾಸ್‌ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ನನ್ನ ಪರವಾಗಿ ನಿಂತ ಮಾಧ್ಯಮಗಳು ಹಾಗೂ ಕನ್ನಡಪರ ಸಂಘಟನೆಗಳಿಗೆ ಧನ್ಯವಾದ. ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ವಿಂಗ್ ಕಮಾಂಡರ್ ವಿರುದ್ದ ಕಾನೂನು ಹೋರಾಟ ಮಾಡ್ತೇನೆ. ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದಿದ್ದಾರೆ.

ವಾಯುಪಡೆ ನಿಯಮ ಉಲ್ಲಂಘಿಸಿದ ಶಿಲಾಧಿತ್ಯ ಬೋಸ್ ಕೆಲಸ ಕಳೆದುಕೊಳ್ತಾನಾ?
ಶಿಲಾಧಿತ್ಯ ಬೋಸ್ ಪ್ರಕರಣ ಸಂಬಂಧ  ಏರ್ಪೋರ್ಸ್ ಅಧಿಕಾರಿಗಳು ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಶಿಲಾಧಿತ್ಯ ಬೋಸ್ ವರ್ತನೆ ಹಾಗೂ ಹಲ್ಲೆ ಬಗ್ಗೆ ಪೊಲೀಸರು ಸಂಪೂರ್ಣ ಮಾಹಿತಿಯನ್ನು ವಾಯುಪಡೆಯ ಅಧಿಕಾರಿಗಳಿಗೆ ಪೊಲೀಸರು ನೀಡಿದ್ದಾರೆ. ಶಿಲಾಧಿತ್ಯ ಬೋಸ್ ಏರ್ಪೋರ್ಸ್ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಾರೆ. ಯಾವುದೇ ವಿಚಾರಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದು, ತಮ್ಮ ಗುರುತು ಪತ್ತೆಯಾಗುವ ರೀತಿ ಯಾವುದೇ ಸಂದೇಶಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ. ಸಾರ್ವಜನಿಕರ ಜೊತೆ ಕೆಟ್ಟದಾಗಿ ವರ್ತಿಸಿ ಏರ್ಪೋರ್ಸ್ ಘನತೆಗೆ ಧಕ್ಕೆ ತರುವಂತಿಲ್ಲ. ಇದರ ಜೊತೆಗೆ ಸುಳ್ಳು ದೂರು ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಭಾಷಾ ವಿಚಾರದಲ್ಲಿ ಗುಂಪುಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ನಡೆದಿದೆ. ಮಿಲಿಟರಿ ನಿಯಮಗಳ ಉಲ್ಲಂಘನೆ ಹಿನ್ನಲೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮುಂದಿನ ಕ್ರಮ ತೆಗೆದುಕೊಳ್ಳುವ ಸಂಬಂಧ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ನಡುರಸ್ತೆಯಲ್ಲೇ ಬೈಕ್‌ ಸವಾರನ ಮೇಲೆ ವಿಂಗ್‌ ಕಮಾಂಡರ್‌ ದೌರ್ಜನ್ಯ, ಭಾಷಾ ತಾರತಮ್ಯದ ಕಥೆ ಕಟ್ಟಿದ ಹೆಂಡ್ತಿ!

ತಮ್ಮ ಕುಟುಂಬದ ಜತೆ ಸಿ.ವಿ.ರಾಮನ್‌ ನಗರದಲ್ಲಿ ಶಿಲಾದಿತ್ಯ ಬೋಸ್ ನೆಲೆಸಿದ್ದು, ಭಾರತೀಯ ವಾಯು ಸೇನೆಯಲ್ಲಿ ಕಮಾಂಡರ್ ಆಗಿದ್ದಾರೆ. ಅ‍ವರ ಪತ್ನಿ ಮಧುಮಿತಾ ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ (ಡಿಆರ್‌ಡಿಓ) ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಹಳೇ ಮದ್ರಾಸ್ ರಸ್ತೆಯ ಗ್ರ್ಯಾಂಡ್ ಗೋಪಾಲನ್‌ ಮಾಲ್ ಬಳಿ ವಿಂಗ್ ಕಮಾಂಡರ್ ಶಿಲಾದಿತ್ಯ ಹಾಗೂ ವಿಕಾಸ್ ಮಧ್ಯೆ ಗಲಾಟೆ ಕಾರಿಗೆ ಬೈಕ್‌ ಟಚ್‌ ಮಾಡಿದ್ದಾನೆಂದು ಗಲಾಟೆ ಆರಂಭವಾಗಿ ರೊಚ್ಚಿಗೆದ್ದ ಶಿಲಾದಿತ್ಯ ವಿಕಾಸ್  ಮೇಲೆ ಹಲ್ಲೆ ಮಾಡಿದ್ದು, ಮುಷ್ಠಿ ಕಾಳಗ ಮಾಡಿಕೊಂಡಿದ್ದಾರೆ. ಬೈಕ್ ಸವಾರನಿಗೆ ಶಿಲಾದಿತ್ಯ ಕಾಲಿನಿಂದ ಒದ್ದು ರೋಷ ತೋರಿಸಿದ್ದಾನೆ. ಈ ವೇಳೆ ಪತ್ನಿ ಮಧುಮಿತಾ ಕೂಡ ಗಂಡನಿಗೆ ಸಾಥ್ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ.

ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ.  ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ. 

ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ. ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ‌ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!