
ಬೆಂಗಳೂರು (ಏ.22): ಬೆಂಗಳೂರಿನಲ್ಲಿ ವಾಹನ ಟಚ್ ವಿಚಾರಕ್ಕೆ ಕನ್ನಡಿಗನ ಮೇಲೆ ಹಲ್ಲೆ ನಡೆದ ಘಟನೆ. ಹಲ್ಲೆ ನಡೆಸಿದ ವ್ಯಕ್ತಿಯಿಂದ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಅಪಪ್ರಚಾರ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ.
ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ. ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ.
ಇದನ್ನೂ ಓದಿ: Bengaluru Road Rage Incident: ಟ್ವಿಸ್ಟ್ ಮೇಲೆ ಟ್ವಿಸ್ಟ್, ಮತ್ತೊಂದು ವಿಡಿಯೋ ವೈರಲ್!
ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ. ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕನ್ನಡಿಗರ ಮೇಲೆ ಸುಳ್ಳು ಹೇಳಿ ವಿಡಿಯೋ ಮಾಡಿದ ವಿಂಗ್ ಕಮಾಂಡರ್: ಕನ್ನಡಿಗನ ಮೇಲೆ ಹಲ್ಲೆ ಮಾಡಿದ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟು ಅದರಲ್ಲಿ 'ತಾವು ಮತ್ತು ತಮ್ಮ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ದತ್ತ ಕಾರಿನಲ್ಲಿ ಹೋಗುವಾಗ, ಹೆಂಡತಿಯ ಮೇಲೆ ಬೈಕ್ ಸವಾರನೊಬ್ಬ ಕನ್ನಡದಲ್ಲಿ ನಿಂದನೆ ಮಾಡಿದ್ದಲ್ಲದೇ, ದೈಹಿಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರು. ಜೊತೆಗೆ, ಬೈಕ್ ಸವಾರ ತಮ್ಮ ಕಾರಿನ ಮೇಲಿನ DRDO ಸ್ಟಿಕ್ಕರ್ ಕಂಡು 'ನೀವು DRDO ಜನ' ಎಂದು ವಿಶೇಷವಾಗಿ ಗುರಿಯಾಗಿಸಿ ನಿಂದಿಸಿದ್ದಾನೆ ಎಂದು ಆರೋಪಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲಾ & ಆರ್ಡರ್‌ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್ ಕಮಾಂಡರ್ ಮೇಲೆ ಬೈಕ್ ಸವಾರನ ಹಲ್ಲೆ!
ಭಾಷಾ ದ್ವೇಷ ಹೊತ್ತಿಸಲು ಮುಂದಾದ ವಿಂಗ್ ಕಮಾಂಡರ್: ಈ ಮೂಲಕ ಕನ್ನಡ ಮತ್ತು ಹಿಂದಿ ಭಾಷಿಕರ ನಡುವೆ ಭಾಷಾ ದ್ವೇಷ ಹೊತ್ತಿಸುವ ಕೆಲಸ ಮಾಡಿದ್ದಾರೆ. ಕೇವಲ ವಿಂಗ್ ಕಮಾಂಡರ್ ವಿಡಿಯೋ ಇಟ್ಟುಕೊಂಡು ರಾಷ್ಟ್ರೀಯ ಮಾಧ್ಯಮಗಳು ಕನ್ನಡಿಗನದ್ದೇ ತಪ್ಪು ಎಂಬಂತೆ ಬಿಂಬಿಸಿ ರಾಷ್ಟ್ರದಾದ್ಯಂತ ಕನ್ನಡಿಗರ ಮಾನ ಹರಾಜಾಗಲು ಮುಂದಾಗಿದ್ದವು. ಆದರೆ, ಇದೀಗ ವಿಂಗ್ ಕಮಾಂಡರ್ ಕುಕೃತ್ಯ ಬಯಲಾಗಿದ್ದು, ಕನ್ನಡಿಗನ ಮೇಲೆ ಮೃಗೀಯವಾಗಿ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ ಎಂಬುದು ಸಿಸಿಟಿವಿ ವಿಡಿಯೋ ಸಾಕ್ಷಿಯಿಂದ ಲಭ್ಯವಾಗಿದೆ. ಇದೀಗ ಕಪಟಿ ವಿಂಗ್ ಕಮಾಂಡರ್ ವಿರುದ್ಧ ರಾಜ್ಯ ಸರ್ಕಾರದಿಂದ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ