* ಅನ್‌ಲಾಕ್ ಬಳಿಕ ನಿತ್ಯ 4000ಕ್ಕೂ ಹೆಚ್ಚು ಬಸ್ ಕಾರ್ಯಾಚರಣೆ
* ದಿನೇ ದಿನೇ ಬಸ್‌ಗಳತ್ತ ಬರುವ ಪ್ರಯಾಣಿಕರ ಸಂಖ್ಯೆ ಏರಿಕೆ
* ಗ್ರಾಮಾಂತರ ಪ್ರಯಾಣಿಕರು ಹೆಚ್ಚಳ
ಬೆಂಗಳೂರು(ಜು.04): ಅನ್‌ಲಾಕ್ ಬಳಿಕ ಆರಂಭದಲ್ಲಿ ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ದಿನಗಳೆದಂತೆ ಪ್ರಯಾಣಿಕರ ಸಂಖ್ಯೆ ಕೊಂಚವೇ ಏರಿಕೆಯಾಗುತ್ತಿದೆ. ಆರಂಭದಲ್ಲಿ ದಿನಕ್ಕೆ ಎರಡು-ಮೂರು ಲಕ್ಷ ಮಂದಿ ಮಾತ್ರ ಪ್ರಯಾಣಿಕರು ಇರುತ್ತಿದ್ದರು. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ಪ್ರಯಾಣಿಕರ ಸಂಖ್ಯೆ ಏಳು ಲಕ್ಷ ದಾಟಿದೆ.
ರಾಜ್ಯ ಸರ್ಕಾರ ಅನ್‌ಲಾಕ್ 2.0 ಮಾರ್ಗಸೂಚಿಯಲ್ಲಿ ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ ಕಾರ್ಯಾಚರಣೆಗೆ ಅವಕಾಶ ನೀಡಿದೆ. ಹೀಗಾಗಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ನಿತ್ಯ ರಾಜ್ಯದೊಳಗೆ ಸುಮಾರು ನಾಲ್ಕು ಸಾವಿರ ಬಸ್ ಕಾರ್ಯಾಚರಣೆ ಮಾಡುತ್ತಿದೆ.ಕೊರೋನಾ ಪೂರ್ವದಲ್ಲಿ ನಿಗಮದ ಸುಮಾರು ಎಂಟು ಸಾವಿರ ಬಸ್‌ಗಳನ್ನು ನಿತ್ಯ ಕಾರ್ಯಾಚರಣೆ ಮಾಡಲಾಗುತ್ತಿತ್ತು. ಇದರಿಂದ ನಿತ್ಯ ಸುಮಾರು 30 ಲಕ್ಷ ಮಂದಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಕಳೆದ ವರ್ಷ ಕೊರೋನಾದಿಂದಾಗಿ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿತವಾಗಿತ್ತು.
ರಾಜ್ಯದಲ್ಲಿ ಬಸ್ ಇದ್ದರೂ ಪ್ರಯಾಣಿಕರೇ ಬರ್ತಿಲ್ಲ..!
ಗ್ರಾಮಾಂತರ ಪ್ರಯಾಣಿಕರು ಹೆಚ್ಚಳ:
ನಿಗಮದ ಬಸ್‌ಗಳಿಗೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಜನಸಂಚಾರ ಹೆಚ್ಚಾಗಿದೆ. ಇನ್ನು ನಗರ ಪ್ರದೇಶಗಳಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತೆರಳುವವರ ಸಂಖ್ಯೆ ಹೇಳಿಕೊಳ್ಳುವಂತಿಲ್ಲ. ದಿನಗಳೆದಂತೆ ನಗರ ಪ್ರದೇಶಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಸ್ ಸೇವೆ ಪುನರಾರಂಭದ ದಿನಗಳಲ್ಲಿ ಕೊರೋನಾ ಭೀತಿಯಿಂದ ಜನ ಬಸ್‌ಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದರು. ಇದೀಗ ದಿನೇ ದಿನೇ ಬಸ್‌ಗಳತ್ತ ಬರುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ.
ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ನಿಧಾನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೊರೋನಾ ಪೂರ್ವದ ಸ್ಥಿತಿಗೆ ಮರಳುವ ವಿಶ್ವಾಸವಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.