
ಬೆಂಗಳೂರು(ಜು.04): ಕೊರೋನಾ ಲಸಿಕೆಯ ಅಭಾವದ ನಡುವೆಯೇ ರಾಜ್ಯದ ಎಂಟು ಜಿಲ್ಲೆಗಳು ಲಸಿಕೆಯ ‘ಶೂನ್ಯ ವ್ಯರ್ಥ’ ಸಾಧನೆ ಮಾಡಿವೆ. ಮಾತ್ರವಲ್ಲದೆ ವ್ಯರ್ಥವಾಗುತ್ತಿದ್ದ 66,805 ಲಸಿಕೆಯನ್ನು ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳಿಗೆ ನೀಡಿವೆ.
ಕೋವಿಶೀಲ್ಡ್‌ನ ಪ್ರತಿ ವಯಲ್‌ನಲ್ಲಿ 5 ಎಂಎಲ್ ಲಸಿಕೆ ಇರುತ್ತದೆ. ಪ್ರತಿ ಡೋಸ್‌ಗೆ 0.5 ಎಂಎಲ್‌ನಂತೆ ಹತ್ತು ಮಂದಿಗೆ ನೀಡಲಾಗುತ್ತದೆ. ಇನ್ನು ಕೋವ್ಯಾಕ್ಸಿನ್ 5 (10 ಡೋಸ್) ಹಾಗೂ 10 ಎಂಎಲ್‌ನ (20 ಡೋಸ್) ಎರಡು ಮಾದರಿ ವಯಲ್‌ಗಳಲ್ಲಿ ಪೂರೈಕೆಯಾಗುತ್ತದೆ. ಲಸಿಕೆ ಇಂಜೆಕ್ಟ್ ಮಾಡುವಾಗ ಲಸಿಕೆ ವ್ಯರ್ಥವಾಗಬಹುದು ಎಂಬ ಉದ್ದೇಶದಿಂದ ಪ್ರತಿ ವಯಲ್‌ನಲ್ಲಿ 1ರಿಂದ 2 ಡೋಸ್ ಹೆಚ್ಚುವರಿ ಲಸಿಕೆ ಇರುತ್ತದೆ. ಹೀಗಾಗಿ ಶೇ.10ರವರೆಗೆ ಲಸಿಕೆ ವ್ಯರ್ಥವಾಗುವುದು ಸಾಮಾನ್ಯ ಎಂದು ಆರೋಗ್ಯ ಇಲಾಖೆ ನಿಯಮಗಳಲ್ಲೇ ಒಪ್ಪಿಗೆ ನೀಡಲಾಗಿದೆ.
ಆದರೆ, ರಾಜ್ಯದ ಎಂಟು ಜಿಲ್ಲೆಗಳು ಶೂನ್ಯ ವ್ಯರ್ಥ ಸಾಧನೆ ಮಾಡಿದ್ದಲ್ಲದೆ, ವ್ಯರ್ಥವಾಗಬಹುದಾದ ಲಸಿಕೆಯನ್ನೂ ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ (ನೆಗೆಟಿವ್ ವೇಸ್ಟೇಜ್) ಮೂಲಕ ಸಾಧನೆ ಮಾಡಿವೆ.
ಮೈಸೂರು ಜಿಲ್ಲೆಯಲ್ಲಿ ಶೇ.-0.1 (ಮೈನಸ್ ಅಥವಾ ನೆಗೆಟಿವ್ ವೇಸ್ಟೇಜ್) ವ್ಯರ್ಥದ ಮೂಲಕ 487 ಡೋಸ್ ಲಸಿಕೆ ಉಳಿಸಿದೆ. ಉಳಿದಂತೆ ಬಿಬಿಎಂಪಿ 33,785 ಡೋಸ್ (ಶೇ.-1.3), ಕೊಡಗು 1,285 (ಶೇ.-1.3), ಬೆಳಗಾವಿ 7,139 (ಶೇ.-1.7), ಚಿಕ್ಕಮಗಳೂರು 3,776 (ಶೇ.2.5), ಉತ್ತರ ಕನ್ನಡ 6,381 (ಶೇ.-3.6), ಹಾವೇರಿ 5,156 (ಶೇ.-4.1), ಧಾರವಾಡ 8,786 ಡೋಸ್ (ಶೇ.4.2) ವ್ಯರ್ಥವಾಗಬಹುದಾಗಿದ್ದ ಲಸಿಕೆ ಉಳಿಸಿವೆ.
ಸಾಧನೆಗೆ ಲಸಿಕಾ ಸಿಬ್ಬಂದಿಯೇ ಕಾರಣ:
ಲಸಿಕಾ ಕೇಂದ್ರದಲ್ಲಿ ವಯಲ್‌ನಲ್ಲಿರುವ 10 ಡೋಸ್ ಪಡೆಯಲು 10 ಮಂದಿ ಫಲಾನುಭವಿಗಳು ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡೇ ವಯಲ್ ತೆರೆದು ಲಸಿಕೆ ನೀಡಲಾಗಿದೆ. ವಯಲ್ ತೆರೆದ 4 ಗಂಟೆ ಒಳಗೆ ಖಾಲಿ ಮಾಡಬೇಕು. ಇಲ್ಲದಿದ್ದರೆ ಉಳಿದ ಡೋಸ್‌ಗಳು ವ್ಯರ್ಥವಾಗುತ್ತದೆ. ಆ ರೀತಿ ಆಗದಂತೆ ಲಸಿಕಾ ಸಿಬ್ಬಂದಿ ಎಚ್ಚರಿಕೆ ವಹಿಸಿ ಕೆಲಸ ಮಾಡಿದ್ದಾರೆ. ಹೀಗಾಗಿ 8 ಜಿಲ್ಲೆಗಳಲ್ಲಿ ನೆಗೆಟಿವ್ ವೇಸ್ಟೇಜ್ ದಾಖಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಹೇಳಿದ್ದಾರೆ.
ಲಸಿಕೆ ಉಳಿಸಿದ ಜಿಲ್ಲೆಗಳು
ಬೆಂಗಳೂರು, ಮೈಸೂರು, ಧಾರವಾಡ, ಹಾವೇರಿ, ಉತ್ತರ ಕನ್ನಡ, ಕೊಡಗು, ಬೆಳಗಾವಿ, ಚಿಕ್ಕಮಗಳೂರ
ಪೋಲು ಮಾಡಿದ ಜಿಲ್ಲೆಗಳು
ರಾಜ್ಯದಲ್ಲಿ 1.30 ಲಕ್ಷ ಡೋಸ್ ಲಸಿಕೆ ವ್ಯರ್ಥವಾಗಿದೆ. ಲಸಿಕೆ ವ್ಯರ್ಥ ಮಾಡಿದ ಜಿಲ್ಲೆಗಳ ಪೈಕಿ ಬಾಗಲಕೋಟೆ ಪ್ರಥಮ ಸ್ಥಾನದಲ್ಲಿದ್ದು, ಶೇ.12.6ರಷ್ಟು(22,196) ಡೋಸ್ ಲಸಿಕೆ ವ್ಯರ್ಥ ಮಾಡಿದೆ. ಉಳಿದಂತೆ ಹಾಸನ 17,028 (ಶೇ.8), ಕೊಪ್ಪಳ 7,799 (ಶೇ.5.4), ರಾಮನಗರ 8,060 (ಶೇ.5.4), ಯಾದಗಿರಿ 38,998 (ಶೇ.5.1), ಚಿಕ್ಕಬಳ್ಳಾಪುರ 6,501 (4.1), ಬಳ್ಳಾರಿ 9,859 (ಶೇ.3.8), ರಾಮನಗರ 3,967 (ಶೇ.3.5) ಡೋಸ್ ವ್ಯರ್ಥ ಮಾಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ