ನೋಟ್ ಬ್ಯಾನ್ ಸಂದರ್ಭ ಒಂದೇ ವಾರದಲ್ಲಿ IMA 600 ಕೋಟಿ ವ್ಯವಹಾರ !

By Kannadaprabha News  |  First Published Nov 5, 2019, 8:21 AM IST

ನೋಟು ಅಮಾನ್ಯೀಕರಣಗೊಂಡ ಕಾಲದಲ್ಲಿ ಮಹಾ ಮೋಸದ ಆರೋಪ ಹೊತ್ತಿರುವ ಐ ಮಾನಿಟರಿ ಅಡ್ವೈಸರಿ (ಐಎಂಐ) ಸಂಸ್ಥೆ ಸುಗ್ಗಿಯನ್ನೇ ಆಚರಿಸಿದ್ದು, ಒಂದೇ ವಾರದಲ್ಲಿ 600 ಕೋಟಿ ವಹಿವಾಟು ಮಾಡಿತ್ತು ಎಂಬ ಕುತೂಹಲಕಾರಿ ಮಾಹಿತಿ ತಿಳಿದುಬಂದಿದೆ. ಗರಿಷ್ಠ ಮುಖ ಬೆಲೆಯ ನೋಟು ರದ್ದುಗೊಂಡ ನಂತರ ಹಲವು ಹಣಕಾಸು ಸಂಸ್ಥೆಗಳು ನೆಲಕಚ್ಚಿದ್ದವು. ಆದರೆ ಅನಿರೀಕ್ಷಿತವಾಗಿ ರಾತ್ರೋರಾತ್ರಿ ಮಹಮ್ಮದ್‌ ಮನ್ಸೂರ್‌ ಖಾನ್‌ ಮಾಲಿಕತ್ವದ ಐಎಂಎ ಸಂಸ್ಥೆ ಖಜಾನೆಗೆ ಕಾಂಚಾಣದ ಹೊಳೆಯೇ ಹರಿದು ಬಂದಿತ್ತು.


ಬೆಂಗಳೂರು(ನ.05): ನೋಟು ಅಮಾನ್ಯೀಕರಣಗೊಂಡ ಕಾಲದಲ್ಲಿ ಮಹಾ ಮೋಸದ ಆರೋಪ ಹೊತ್ತಿರುವ ಐ ಮಾನಿಟರಿ ಅಡ್ವೈಸರಿ (ಐಎಂಐ) ಸಂಸ್ಥೆ ಸುಗ್ಗಿಯನ್ನೇ ಆಚರಿಸಿದ್ದು, ಒಂದೇ ವಾರದಲ್ಲಿ 600 ಕೋಟಿ ವಹಿವಾಟು ಮಾಡಿತ್ತು ಎಂಬ ಕುತೂಹಲಕಾರಿ ಮಾಹಿತಿಯನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.

ಗರಿಷ್ಠ ಮುಖ ಬೆಲೆಯ ನೋಟು ರದ್ದುಗೊಂಡ ನಂತರ ಹಲವು ಹಣಕಾಸು ಸಂಸ್ಥೆಗಳು ನೆಲಕಚ್ಚಿದ್ದವು. ಆದರೆ ಅನಿರೀಕ್ಷಿತವಾಗಿ ರಾತ್ರೋರಾತ್ರಿ ಮಹಮ್ಮದ್‌ ಮನ್ಸೂರ್‌ ಖಾನ್‌ ಮಾಲಿಕತ್ವದ ಐಎಂಎ ಸಂಸ್ಥೆ ಖಜಾನೆಗೆ ಕಾಂಚಾಣದ ಹೊಳೆಯೇ ಹರಿದು ಬಂದಿತ್ತು. ಗಂಟೆಗಳ ಲೆಕ್ಕದಲ್ಲಿ ಆ ಸಂಸ್ಥೆಗೆ ಠೇವಣಿ ರೂಪದಲ್ಲಿ ಕೋಟ್ಯಂತರ ರುಪಾಯಿ ಹಣ ಸಂಗ್ರಹವಾಯಿತು.

Latest Videos

undefined

IMA ಹಗರಣಕ್ಕೆ ಟ್ವಿಸ್ಟ್: ಮಾಜಿ ಸಚಿವಗೇ ಮನ್ಸೂರ್ ಟೋಪಿ

ಹೀಗೆ 2016 ನವೆಂಬರ್‌ನಲ್ಲಿ 500 ಮತ್ತು 1000 ಮುಖಬೆಲೆಯ ನೋಟು ರದ್ದಾದ ಒಂದೇ ವಾರದ ಅವಧಿಯಲ್ಲಿ ಐಎಎಂ ಸಂಸ್ಥೆಯ ಚಿನ್ನಾಭರಣ ಮಾರಾಟ ಮಳಿಗೆ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸುಮಾರು .600 ಕೋಟಿ ವ್ಯವಹಾರ ನಡೆದಿತ್ತು. ಬಹುಕೋಟಿ ವಂಚನೆ ಪ್ರಕರಣದ ತನಿಖೆ ವೇಳೆ ಆ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದ್ದವು. ಈ ದೊಡ್ಡ ಮೊತ್ತದ ವ್ಯವಹಾರದಲ್ಲಿ ಕಪ್ಪು ಹಣ ಸಹ ಹರಿದಾಡಿರಬಹುದು ಎಂದು ಎಸ್‌ಐಟಿ ತಂಡದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

2 ವರ್ಷಗಳಲ್ಲಿ 2.5 ಟನ್‌ ಚಿನ್ನ ಮಾರಾಟ:

ಅನಂತರ ಎರಡು ವರ್ಷಗಳ ಅವಧಿಯಲ್ಲಿ ತನ್ನ ಒಡೆತನದ ಜಯನಗರ ಹಾಗೂ ಶಿವಾಜಿನಗರ ಚಿನ್ನಾಭರಣ ಮಳಿಗೆಗಳಲ್ಲಿ ಸರಿ ಸುಮಾರು 2.5 ಟನ್‌ ಚಿನ್ನವನ್ನು ಮನ್ಸೂರ್‌ ಮಾರಾಟ ಮಾಡಿದ್ದ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

2006ರಲ್ಲಿ ಹಣಕಾಸು ಸಂಸ್ಥೆ ಆರಂಭಿಸಿದ ಮನ್ಸೂರ್‌, ಬಳಿಕ ಚಿನ್ನಾಭರಣ ಮಾರಾಟ ಮಳಿಗೆ ತೆರೆದ. ವಿವಿಧ ಆಫರ್‌ಗಳ ಮೂಲಕ ಜನರನ್ನು ಮರಳು ಮಾಡಿ ಠೇವಣಿ ರೂಪದಲ್ಲಿ ಹಣ ಸಂಗ್ರಹಿಸಿದ ಮನ್ಸೂರ್‌, ಅದೇ ಹಣವನ್ನು ಬೇರೆಡೆ ಹೂಡಿಕೆ ಮಾಡಲಿಲ್ಲ. ಆದರೆ ಒಬ್ಬರಿಂದ ಸಂಗ್ರಹಿಸಿದ ಹಣವನ್ನು ಮತ್ತೊಬ್ಬರಿಗೆ ಹೀಗೆ ರೋಟೇಶನ್‌ ಮಾದರಿಯಲ್ಲಿ ವ್ಯವಹರಿಸಿದ್ದ. ಉದ್ದಿಮೆ ಆರಂಭದಿಂದಲೂ ಆತನಿಗೆ ಶಿವಾಜಿನಗರ ಕ್ಷೇತ್ರದ ಶಾಸಕರ ಒಡನಾಟವಿತ್ತು. ಪಾಲುದಾರಿಕೆಯಲ್ಲಿ ಹಣಕಾಸು ವ್ಯವಹಾರ ಸಹ ನಡೆಸಿದ್ದರು ಎಂದು ಅಧಿಕಾರಿಗಳು ಹೇಳುತ್ತಾರೆ.

ಐಎಂಎನಿಂದ ಕೋಟಿ ಕೋಟಿ ಕಪ್ಪ : ಇದೇ ರಮೇಶ್ ಆತ್ಮಹತ್ಯೆ ಕಾರಣ!

ಅಮಾನ್ಯೀಕರಣ ವೇಳೆ ಚಿನ್ನಾಭರಣ ಖರೀದಿಗೆ ರಿಯಾಯಿತಿ ನೀಡಲಾಗಿತ್ತು. ಇದನ್ನು ಬಳಸಿಕೊಂಡ ಕೆಲವರು, ಐಎಂಎ ಚಿನ್ನಾಭರಣ ಮಳಿಗೆಯಲ್ಲಿ ಕೆ.ಜಿ. ಗಟ್ಟಲೇ ಬಂಗಾರ ಖರೀದಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಒಂದೇ ವರ್ಷದಲ್ಲಿ 1.5 ಟನ್‌ ಚಿನ್ನಾಭರಣ ಮಾರಾಟ ಮಾಡಲಾಯಿತು. ಅಷ್ಟರಲ್ಲಿ ಐಎಂಎ ಸಂಸ್ಥೆಯ ಮೇಲೆ ಕಣ್ಣಿಟ್ಟಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, 2017ರಲ್ಲಿ ಮನ್ಸೂರ್‌ ಒಡೆತನದ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಕೆ.ಜಿ.ಗಟ್ಟಲೇ ಚಿನ್ನದ ಮಾರಾಟ ಹಾಗೂ ಕೋಟ್ಯಂತರ ಹಣ ವರ್ಗಾವಣೆ ಬಗ್ಗೆ ಮಾಹಿತಿ ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು. ಆದರೆ ತನ್ನ ವ್ಯವಹಾರಕ್ಕೆ ಕೆಲ ದಾಖಲೆಗಳನ್ನು ಸಲ್ಲಿಸಿ ಐಟಿ ಇಲಾಖೆ ನಿಗಾದಿಂದ ಅಚ್ಚರಿ ರೀತಿಯಲ್ಲಿ ಮನ್ಸೂರ್‌ ತಪ್ಪಿಸಿಕೊಂಡಿದ್ದ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

2017ರ ನವೆಂಬರ್‌ನಲ್ಲಿ ಆ್ಯಂಬಿಡೆಂಟ್‌ ಕಂಪನಿಯ ವಂಚನೆ ಕೃತ್ಯ ಬಯಲಾಯಿತು. ಇದರೊಂದಿಗೆ ಐಎಂಎ ಪತನವು ಶುರುವಾಯಿತು. ಆ್ಯಂಬಿಡೆಂಟ್‌ ಮಾದರಿಯಲ್ಲಿ ಐಎಂಎ ಸಹ ವ್ಯವಹಾರ ನಡೆಸಿತ್ತು. ಹೀಗಾಗಿ ಆ್ಯಂಬಿಡೆಂಟ್‌ ವಂಚನೆ ಕೃತ್ಯದಿಂದ ಎಚ್ಚೆತ್ತ ಐಎಂಎ ಸಂಸ್ಥೆ ಹೂಡಿಕೆದಾರರು, ತಮ್ಮ ಹಣ ಮರಳಿಸುವಂತೆ ಮನ್ಸೂರ್‌ಗೆ ದುಂಬಾಲು ಬಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಮನ್ಸೂರ್‌, ಕೇವಲ ಏಳೆಂಟು ತಿಂಗಳಲ್ಲಿ ಒಂದು ಟನ್‌ ಚಿನ್ನದ ಗಟ್ಟಿಗಳನ್ನು ಕರಗಿಸಿ ಕೆಲವು ಹೂಡಿಕೆದಾರರಿಗೆ ಸ್ಪಲ್ಪ ಮಟ್ಟಿಗೆ ಹಣ ಪಾವತಿಸಿದ. ಹೀಗೆ 2016ರಿಂದ 2018ರ ಅವಧಿಯಲ್ಲಿ ಸುಮಾರು 2.5 ಟನ್‌ ಚಿನ್ನವನ್ನು ಆತ ಕರಗಿಸಿ ಬಿಕರಿ ಮಾಡಿದ್ದ ಎಂದು ಮೂಲಗಳು ಹೇಳಿವೆ.

100 ಕೆ.ಜಿ ಚಿನ್ನ ಜಪ್ತಿ:

ನಾವು ಮನ್ಸೂರ್‌ ಮನೆ, ಕಚೇರಿ ಹಾಗೂ ಚಿನ್ನಾಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ್ದೇವು. ಆಗ 110 ಕೆ.ಜಿ. ಚಿನ್ನ, 200 ಕೆ.ಜಿ ಬೆಳ್ಳಿ, ವಜ್ರ ಮತ್ತು ಪ್ಲಾಟಿನಂ ಜಪ್ತಿ ಮಾಡಲಾಗಿತ್ತು. ಆರ್ಥಿಕ ಸಂಕಷ್ಟದ ಸುಳಿಯಿಂದ ಪಾರಾಗಲು ಮನ್ಸೂರ್‌, ಚಿನ್ನದ ಗಟ್ಟಿಗಳನ್ನು ಮಾತ್ರ ಕರಗಿಸಿ ಮಾರಾಟ ಮಾಡಿದ್ದ. ಆದರೆ ಆತನ ಸಂಸ್ಥೆಯಲ್ಲಿ ಅಡಮಾನದ ಆಭರಣ ಹಾಗೂ ಆತನದಲ್ಲಿದ್ದ ವಜ್ರ ಖಚಿತ ಬಂಗಾರವನ್ನು ಮುಟ್ಟಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಡಿಮೆ ಬೆಲೆಗೆ ಖರೀದಿ, ಹೆಚ್ಚಿನ ದರಕ್ಕೆ ಮಾರಾಟ!

ಮೇಕಿಂಗ್‌ ಹಾಗೂ ವೆಸ್ಟೇಜ್‌ ಹೀಗೆ ಯಾವುದೇ ಹೆಚ್ಚುವರಿ ದರ ವಿಧಿಸದೆ ಮನ್ಸೂರ್‌, ಹೋಲ್‌ಸೇಲ್‌ ಮಾದರಿಯಲ್ಲಿ ಚಿನ್ನಾಭರಣವನ್ನು ಮಾರಾಟ ಮಾಡಿದ್ದ. ಒಂದು ಹಂತದಲ್ಲಿ ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಮನ್ಸೂರ್‌ ಬಿರುಗಾಳಿ ಎಬ್ಬಿಸಿದ್ದ.

ಇದರಿಂದ ಹಲವು ಪ್ರಮುಖ ಚಿನ್ನದ ವ್ಯಾಪಾರಿಗಳು ಕಂಗಲಾಗಿದ್ದರು. ಆದರೆ ನಗರ ಮತ್ತು ಪಟ್ಟಣ ಪ್ರದೇಶದ ಚಿನ್ನಾಭರಣ ವ್ಯಾಪಾರಿಗಳು ಮನ್ಸೂರ್‌ನಿಂದ ಕಡಿಮೆ ಬೆಲೆಗೆ ಆಭರಣ ಖರೀದಿಸಿ ಬಳಿಕ ಹೆಚ್ಚಿನ ಬೆಲೆಗೆ ಮಾರಿ ಹಣ ಸಂಪಾದಿಸಿದ್ದರು ಎಂದು ಅಧಿಕಾರಿಗಳು ಹೇಳುತ್ತಾರೆ.

-ಗಿರೀಶ್‌ ಮಾದೇನಹಳ್ಳಿ

click me!